ರಂಗಿಯೋರ (ನ್ಯೂಜಿಲ್ಯಾಂಡ್): ದಕ್ಷಿಣ ಆಫ್ರಿಕಾ ಎದುರಿನ ವನಿತಾ ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತ 2 ರನ್ನುಗಳ ರೋಚಕ ಗೆಲುವು ಸಾಧಿಸಿದೆ.
ಹರ್ಮನ್‌ಪ್ರೀತ್ ಕೌರ್ ಅವರ ಅಮೋಘ ಶತಕದ ನೆರವಿನಿಂದ ಭಾರತ 9 ವಿಕೆಟಿಗೆ 244 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 7 ವಿಕೆಟಿಗೆ 242 ರನ್ ಮಾಡಿ ಶರಣಾಯಿತು.
ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಕೌರ್ 114 ಎಸೆತಗಳಿಂದ 103 ರನ್ ಕೊಡುಗೆ ಸಲ್ಲಿಸಿದರು (9 ಬೌಂಡರಿ). ಬ್ಯಾಟಿಂಗ್‌ನಲ್ಲಿ ಮಿಂಚಿದ ಮತ್ತೋರ್ವ ಆಟಗಾರ್ತಿ ಓಪನರ್ ಯಾಸ್ತಿಕಾ ಭಾಟಿಯಾ. ಅವರು 78 ಎಸೆತ ಎದುರಿಸಿ 58 ರನ್ ಹೊಡೆದರು (4 ಬೌಂಡರಿ, 1 ಸಿಕ್ಸರ್). ನಾಯಕಿ ಮಿಥಾಲಿ ಖಾತೆ ತೆರೆಯಲಿಲ್ಲ. ಚೇಸಿಂಗ್ ವೇಳೆ ಎಡಗೈ ಸ್ಪಿನ್ನರ್ ರಾಜೇಶ್ವರಿ ಘಾತಕವಾಗಿ ಎರಗಿ 4 ವಿಕೆಟ್ ಉಡಾಯಿಸಿದರು.
ನಾಯಕಿ ಸುನೆ ಲೂಸ್ 94, ಓಪನರ್ ಲಾರಾ ವೋಲ್ವಾರ್ಟ್ 75 ರನ್ ಬಾರಿಸಿ ಅಪಾಯಕಾರಿಯಾಗಿ ಗೋಚರಿಸಿದರು. 46ನೇ ಓವರ್ ತನಕವೂ ಪಂದ್ಯ ದಕ್ಷಿಣ ಆಫ್ರಿಕಾ ಕೈಯಲ್ಲೇ ಇತ್ತು. 3ಕ್ಕೆ 217 ರನ್ ಮಾಡಿ ಗೆಲುವಿನತ್ತ ದೌಡಾಯಿಸಿತ್ತು. 28 ಎಸೆತಗಳಿಂದ 26 ರನ್ ತೆಗೆಯುವ ಸುಲಭ ಸವಾಲು ಎದುರಾಯಿತು. ಆದರೆ ರಾಜೇಶ್ವರಿ ಎಸೆತಗಳನ್ನು ತಡೆದು ನಿಲ್ಲಲಾಗಲಿಲ್ಲ. ಅವರು ಕೊನೆಯ ಓವರ್‌ನಲ್ಲಿ ಸುನೆ ಲೂಸ್ ಮತ್ತು ಕ್ಲೋ ಟ್ರಯಾನ್ ವಿಕೆಟ್ ಹಾರಿಸಿ ಭಾರತಕ್ಕೆ ರೋಚಕ ಗೆಲುವು ತಂದಿತ್ತರು.
ಸಂಕ್ಷಿಪ್ತ ಸ್ಕೋರ್: ಭಾರತ-9 ವಿಕೆಟಿಗೆ 244 (ಕೌರ್ 103, ಯಾಸ್ತಿಕಾ 58, ಪೂಜಾ 16, ಖಾಕಾ 23ಕ್ಕೆ 3). ದ.ಆಫ್ರಿಕಾ-7 ವಿಕೆಟಿಗೆ 242 (ಲೂಸ್ 94, ವೋಲ್ವಾರ್ಟ್ 75, ರಾಜೇಶ್ವರಿ 44ಕ್ಕೆ 4).