Advertisement

Women’s University: PhD ವಿದ್ಯಾರ್ಥಿನಿಯಿಂದ ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ದೂರು

04:53 PM Mar 07, 2024 | Team Udayavani |

ವಿಜಯಪುರ : ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಎಂಬ ಹಿರಿಮೆ ಹೊಂದಿರುವ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸದರಿ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯುವ ಕೆಲವೇ ದಿನ ಮುನ್ನ ಗಂಭೀರ ಆರೋಪದ ಪ್ರಕರಣ ಬೆಳಕಿಗೆ ಬಂದಿದ್ದು, ಶೈಕ್ಷಣಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.

Advertisement

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮ್ಯಾನೇಜಮೆಂಟ್ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಎನ್.ಎಲ್. ವಿರುದ್ಧ ಸಂತ್ರಸ್ಥೆ ಪಿ.ಎಚ್.ಡಿ. ಸಂಶೋಧನಾ ವಿದ್ಯಾರ್ಥಿನಿ ಫೆ.22 ರಂದೇ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಕುಲಸಚಿವರಿಗೆ ಲಿಖಿತ ದೂರು ನೀಡಿದ್ದಾಳೆ.

ಆರೋಪಿ ಪ್ರಾಧ್ಯಾಪಕ ತನಗೆ ಲೈಂಗಿಕ ಕಿರುಕುಳ ನೀಡಿದ್ದು, ಶಿಷ್ಯವೇತನಕ್ಕೂ ಸಹಿ ಹಾಕಿಲ್ಲ. ತನ್ನ ಲೈಂಗಿಕ ವಾಂಛೆಗೆ ಸಹಕರಿಸದ ಕಾರಣಕ್ಕೆ ನನ್ನ ವಿರುದ್ಧ ನಡತೆ ಸರಿ ಇಲ್ಲವೆಂದು ಪುಕಾರು ಹಬ್ಬಿಸುವುದಾಗಿಯೂ, ನನ್ನ ಶೈಕ್ಷಣಿಕ ಜೀವನ ಹಾಳು ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ನೊಂದ ಸಂಶೋಧನಾ ವಿದ್ಯಾರ್ಥಿನಿ ಲಿಖಿತ ದೂರಿನಲ್ಲಿ ವಿವರಿಸಿದ್ದಾಳೆ.

ಇಷ್ಟಕ್ಕೂ ಪ್ರೊ. ಮಲ್ಲಿಕಾರ್ಜುನ ನನ್ನ ಸಂಶೋಧನಾ ಮಾರ್ಗದರ್ಶಕರಲ್ಲ. ನನ್ನ ಸಂಶೋಧನಾ ಮಾರ್ಗದರ್ಶಕರು ಸೇವಾ ನಿವೃತ್ತಿ ಹೊಂದಿದ ಬಳಿಕ ವಿಭಾಗ ಮುಖ್ಯಸ್ಥರಾಗಿರುವ ಮಲ್ಲಿಕಾರ್ಜುನ ಮ್ಯಾನೇಜಮೆಂಟ್ ವಿಭಾಗದ ಮುಖ್ಯಸ್ಥರಾಗಿದ್ದು, ಕಳೆದ ಕೆಲವು ತಿಂಗಳಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ನೋವು ನಿವೇದಿಸಿಕೊಂಡಿದ್ದಾಳೆ.

ಆರೋಪಿ ಪ್ರೊಫೇಸರ್ ಅವಾಚ್ಯ ಶಬ್ಧಗಳಿಂದ ನಿಂದಿರುವ ಹಾಗೂ ದೈಹಿಕವಾಗಿ ಸ್ಪರ್ಶಿಸಲು ಮುಂದಾಗುವುದು, ನನ್ನ ಉಡುಗೆ ಬಗ್ಗೆ ಮಾತನಾಡುವುದಲ್ಲದೇ ಓದಲು ಗ್ರಂಥಾಲಯಕ್ಕೆ ಹೋಗದೇ ನನ್ನ ಚೇಂಬರ್‍ಗೆ ಬರುವಂತೆ ಆಹ್ವಾನಿಸುತ್ತಾನೆ ಎಂದು ದೂರಿದ್ದಾಳೆ.

Advertisement

ನಾನು ಸಂಶೋಧನೆ ಸಂದರ್ಭದಲ್ಲಿ ಮ್ಯಾನೇಜಮೆಂಟ್ ವಿಭಾಗದ ಮುಖ್ಯಸ್ಥನಾಗಿರುವ ಆರೋಪಿಯಿಂದ ಅನುಭವಿಸಿರುವ ಲೈಂಗಿಕ ಕಿರುಕುಳದ ಕುರಿತು ನನ್ನ ಪಾಲಕರು, ಮಾರ್ಗದರ್ಶಕರಿಗೆ ಮಾಹಿತಿ ನೀಡಿದ್ದೆ. ಆದರೆ ಇದೀಗ ಆರೋಪಿಯಿಂದ ಅತಿರೇಕದ ವರ್ತನೆ ಮಿತಿ ಮೀರಿದ್ದು, ಅನಿವಾರ್ಯವಾಗಿ ನಾನು ಲಿಖಿತ ದೂರು ನೀಡಲು ಮುಂದೆ ಬಂದಿರುವುದಾಗಿ ವಿವರಿಸಿದ್ದಾಳೆ.

ಆರೋಪಿ ಪ್ರೊಫೇಸರ್ ತನ್ನ ವಿರುದ್ಧ ದೂರು ನೀಡಲು ಮುಂದಾಗಿರುವ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು, ಮಾನಸಿವಾಗಿ ಕುಗ್ಗುವಂತೆ ಮಾಡಿದೆ. ಇದು ನನ್ನ ಸಂಶೋಧನೆಯ ಶೈಕ್ಷಣಿಕ ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ ಎಂದು ಹೇಳಿಕೊಂಡಿದ್ದಾಳೆ.

ಇದೇ ಸಂಕಷ್ಟದಿಂದಾಗಿ ನನಗೆ ಊಟ ಸೇರುತ್ತಿಲ್ಲ, ನಿದ್ದೆ ಬಾರದ ಪರಿಸ್ಥಿತಿ ಎದುರಾಗಿದೆ ಎಂದು ತನ್ನ ಶೈಕ್ಷಣಿಕ ಭವಿಷ್ಯದ ಕುರಿತು ಆತಂಕ ಎದುರಾಗಿದೆ ಎಂದಿದ್ದಾಳೆ. ಈ ಕುರಿತು ಕೂಡಲೇ ಸಮಗ್ರ ತನಿಖೆ ನಡೆಸಿ, ನನಗೆ ಆಗಿರುವ ಅನ್ಯಾಯದ ಕುರಿತು ನ್ಯಾಯ ಕೊಡಿಸಂತೆ ಮನವಿ ಮಾಡಿದ್ದಾಳೆ.

ಈ ಮಧ್ಯೆ ವಿದ್ಯಾರ್ಥಿನಿ ದೂರು ನೀಡಿದ ಬಳಿಕ ವಿಶ್ವವಿದ್ಯಾಲಯ ಆರೋಪಿ ವಿರುದ್ಧ ಕೈಗೊಂಡ ಕ್ರಮಗಳೇನು ಎಂಬುದರ ಬಗ್ಗೆ ಯಾವುದೇ ನಿಖರ ಮಾಹಿತಿಯನ್ನು ಸಂತ್ರಸ್ಥೆಗೆ ಅಧಿಕೃತಿವಾಗಿ ನೀಡಿಲ್ಲ. ಆದರೆ ಸದರಿ ಪ್ರಕರಣ ದೂರನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಆಲಿಸುವ ಆಂತರಿಕ ದೂರು ಸಲಹಾ ಸಮಿತಿಗೆ ವರ್ಗಾಯಿಸಿದ್ದಾಗಿ ಮೌಖಿಕ ಮಾಹಿತಿ ನೀಡಿದ್ದಾರೆ.

ಪ್ರಕರಣದ ಕುರಿತು ವಿಶ್ವವಿದ್ಯಾಲಯವೂ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ಕುರಿತು ಸ್ಪಷ್ಟೀಕರಣಕ್ಕಾಗಿ ‘ಉದಯವಾಣಿ’ ಮೊಬೈಲ್ ಕರೆ ಮಾಡಿದರೂ ಕುಲಪತಿ ಪ್ರೊ.ತುಳಸಿಮಾಲಾ, ಆರೋಪಿ ಪ್ರೊ.ಮಲ್ಲಿಕಾರ್ಜು ಇಬ್ಬರೂ ಕರೆ ಸ್ವೀಕರಿಸಿಲ್ಲ.

ಗಮನೀಯ ಅಂಶ ಎಂದರೆ ರಾಜ್ಯದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಸದಾಶಯದಿಂದಲೇ ಜನ್ಮ ತಳೆದಿರುವ ರಾಜ್ಯದ ಮಹಿಳೆಯರಿ ಪ್ರತ್ಯೇಕವಾಗಿರುವ ಏಕೈಕ ಮಹಿಳಾ ವಿಶ್ವವಿದ್ಯಾಲಯ.

ಮಾ.11 ರಂದು ವಿಶ್ವವಿದ್ಯಾಲಯ 15ನೇ ಘಟಿಕೋತ್ಸವ ಸಮಾರಂಭಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲರು ಆಗಮಿಸುವ ನಿರೀಕ್ಷೆ ಇರುವ ಈ ಸಂದರ್ಭದಲ್ಲೇ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕರು ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿರುವುದು ಶೈಕ್ಷಣಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next