Advertisement
ನಮ್ಮ ವನಿತಾ ಕ್ರಿಕೆಟ್ ತಂಡದಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ಕೆಲವೊಮ್ಮೆ ಅದೃಷ್ಟದ ಕೊರತೆ ಇದೆಯೇನೋ ಎಂದೆನಿಸದೇ ಇರದು. 50 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಭಾರತದ ವನಿತಾ ಕ್ರಿಕೆಟ್ ತಂಡ ಇಲ್ಲಿಯವರೆಗೂ ಒಂದೇ ಒಂದು ಐಸಿಸಿ ಪ್ರಶಸ್ತಿಯನ್ನೂ ಗೆದಿಲ್ಲ ಎನ್ನುವುದು ನಿಜಕ್ಕೂ ಕ್ರೀಡಾಭಿಮಾನಿಗಳ ಪಾಲಿಗೆ ಬೇಸರದ ಸಂಗತಿ.1978ರಿಂದ ಇಲ್ಲಿಯವರೆಗೂ ಭಾರತ ಏಕದಿನ ಹಾಗೂ ಟಿ20 ವಿಶ್ವಕಪ್‌ನ ಎಲ್ಲ ಆವೃತ್ತಿಗಳಲ್ಲಿಯೂ ಭಾಗವಹಿಸಿದೆ.
Related Articles
Advertisement
ಇದು ಏಕದಿನ ವಿಶ್ವಕಪ್‌ನ ಕತೆಯಾದರೆ, ಟಿ20 ವಿಶ್ವಕಪ್‌ನಲ್ಲಿಯೂ ಭಾರತದ ಕತೆ ಒಂದು ರೀತಿಯಲ್ಲಿ ಹೀಗೆಯೇ ಇದೆ. 2009ರಲ್ಲಿ ಟಿ20 ವಿಶ್ವಕಪ್ ಆರಂಭವಾದಾಗಿನಿಂದಲೂ ಆಡುತ್ತಿರುವ ಭಾರತ ಒಮ್ಮೆಯೂ ಕಪ್ ಗೆದ್ದಿಲ್ಲ. 2020ರ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದೇ ಭಾರತದ ಇಲ್ಲಿಯವರೆಗಿನ ಶ್ರೇಷ್ಠ ಸಾಧನೆ. 2017ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಅನುಭವಿಸಿದ ಸೋಲಿನಿಂದ ಪಾಠ ಕಲಿತ ಭಾರತ ಗೆಲ್ಲುವ ಉತ್ಸಾಹದೊಂದಿಗೆ 2020ರ ಟಿ20 ವಿಶ್ವಕಪ್‌ನಲ್ಲಿ ಆಡಲಿಳಿದಿತ್ತು. ಗ್ರೂಪ್ ಹಂತದಲ್ಲಿ ಸೋಲೇ ಕಾಣದ ಭಾರತ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ತಲುಪಿತ್ತು.
ಮಳೆಯ ಕಾರಣ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯ ರದ್ದಾಗಿ, ಅಂಕಪಟ್ಟಿಯ ಅಗ್ರಸ್ಥಾನ ಪಡೆದಿದ್ದ ಭಾರತ ಫೈನಲ್‌ಗೆ ನೆಗೆದಿತ್ತು. ಅಲ್ಲಿ ಭಾರತದ ಎದುರಾಳಿ ಆಸ್ಟ್ರೇಲಿಯ. ಗ್ರೂಪ್ ಸ್ಟೇಜ್‌ನಲ್ಲಿ ಆಸ್ಟ್ರೇಲಿಯಕ್ಕೆ ಸೋಲಿನ ರುಚಿಯುಣಿಸಿದ್ದ ಭಾರತ ಕಪ್ ಗೆದ್ದೇ ಗೆಲ್ಲುತ್ತದೆ ಎನ್ನುವುದು ಅಭಿಮಾನಿಗಳ ನಿರೀಕ್ಷೆಯಾಗಿತ್ತು. ಆದರೆ ಫೈನಲ್‌ನಲ್ಲಿ ಭಾರತದ ಅದೃಷ್ಟ ಮತ್ತೆ ಕೈಕೊಟ್ಟಿತು. ಭಾರತದ್ದು 85 ರನ್‌ಗಳ ಅಂತರದ ಸೋಲು. 2023ರ ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಸೆಮಿಫೈನಲ್‌ಗೆ ಅಂತ್ಯಗೊಂಡಿತು.
ಈಗ ಮತ್ತೆ ಟಿ20 ವಿಶ್ವಕಪ್ ಬಂದಿದೆ. ಅಕ್ಟೋಬರ್ 6ರಿಂದ ಯುಎಇಯಲ್ಲಿ, ಬಾಂಗ್ಲಾದೇಶದ ಅತಿಥ್ಯದಲ್ಲಿ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ ವನಿತೆಯರು ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದೆ ಎನ್ನುವುದೇನೋ ನಿಜ. ಆದರೆ ಈ ಸಾಧನೆ ಭಾರತದಂತಹ ದೇಶಕ್ಕೆ ಸಾಕಾ ಎನ್ನುವುದು ಯೋಚಿಸಲೇಬೇಕಾದ ವಿಷಯ. ಕ್ರಿಕೆಟ್‌ನಲ್ಲಿ ನಮ್ಮ ವನಿತಾ ತಂಡ ದಿನೇ ದಿನೆ ಸಾಧನೆಯ ಶಿಖರ ಏರುವತ್ತ ಸಾಗುತ್ತಿದೆ. ಆದರೆ ಉಳಿದ ಕ್ರೀಡೆಯ ವಿಷಯಕ್ಕೆ ಬಂದರೆ ಭಾರತ ಸಾಕಷ್ಟು ಹಿಂದಿದೆ. 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಕಂಚಿನ ಪದಕ ವಂಚಿತರಾಗಿದ್ದ ಭಾರತದ ವನಿತಾ ಹಾಕಿ ತಂಡ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿಯೂ ವಿಫಲವಾಗಿತ್ತು. ಇದಕ್ಕೆ ಕಾರಣ ಏನು? ಫಿಫಾ ರ್‍ಯಾಂಕಿಂಗ್‌ನಲ್ಲಿ ನಮ್ಮ ವನಿತಾ ಫುಟ್‌ಬಾಲ್ ತಂಡ ಎಷ್ಟನೇ ಸ್ಥಾನದಲ್ಲಿದೆ ಅನ್ನುವುದು ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತು? ನಮ್ಮ ವನಿತಾ ಕಬಡ್ಡಿ ತಂಡದ ನಾಯಕಿ ಯಾರು? ಇನ್ನು ರಾಷ್ಟ್ರೀಯ ವಾಲಿಬಾಲ್, ಬಾಸ್ಕೆಟ್ ಬಾಲ್ ಇತ್ಯಾದಿ ತಂಡಗಳ ಕುರಿತಂತೂ ಕೇಳುವುದೇ ಬೇಡ. ಕ್ರೀಡೆ ಅಂದರೆ ಬರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು, ಐಸಿಸಿ ಟ್ರೋಫಿ ಗೆಲ್ಲುವುದು ಮಾತ್ರವಲ್ಲ ಅದನ್ನು ಹೊರತು ಪಡಿಸಿಯೂ ಸಾಕಷ್ಟು ಸ್ಪರ್ಧೆಗಳಿವೆ. ಅವೆಲ್ಲದರಲೂ ಭಾರತ ಎಷ್ಟು ಸಾಧನೆ ಮಾಡಿದೆ ಎನ್ನುವುದನ್ನು ಮೊದಲು ಯೋಚಿಸಬೇಕು. ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಖಂಡಿತ ಇಲ್ಲ. ಕೊರತೆ ಇರುವುದು ಅಗತ್ಯ ಪ್ರೋತ್ಸಾಹಕ್ಕೆ. ಗುಂಪು ಕ್ರೀಡೆ ಎಂದರೆ ಕ್ರಿಕೆಟ್ ಎನ್ನುವ ಅಭಿಪ್ರಾಯ ಮೊದಲು ಬದಲಾಗಬೇಕು. ಕ್ರಿಕೆಟ್‌ನಂತೆ ಇತರ ಕ್ರೀಡೆಗಳಿಗೂ ಪ್ರೋತ್ಸಾಹ, ಸೂಕ್ತ ತರಬೇತಿ ದೊರೆಯುವಂತೆ ಆಗಬೇಕು. ಮಹಿಳೆಯರು ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸಬೇಕು. ಹೆಣ್ಣು ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಉತ್ತೇಜಿಸುವ ವಾತಾವರಣ ಮನೆಯಲ್ಲಿಯೇ ಸೃಷ್ಠಿಯಾಗಬೇಕು. ಹಾಗಾದಲ್ಲಿ ಮಾತ್ರ ಭಾರತ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಮೇಲಕ್ಕೇರಲು ಸಾಧ್ಯ. ಸರಕಾರ ಇದನ್ನು ಅರಿತು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇತ್ತೀಚೆಗೆ ಕೆಲವು ವರ್ಷಗಳಿಂದ ಖೇಲೋ ಇಂಡಿಯಾದ ಮೂಲಕ ಸರಕಾರ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ. ಈ ರೀತಿಯ ಚಟುವಟಿಕೆಗಳು ಇನ್ನು ಹೆಚ್ಚಾಗಿ ಭಾರತ ಎಲ್ಲ ರೀತಿಯ ಕ್ರೀಡೆಯಲ್ಲಿಯೂ ಮುನ್ನುಗ್ಗಲಿ ಎಂಬುವುದೇ ಕ್ರೀಡಾಭಿಮಾನಿಗಳ ಕೋರಿಕೆ. * ಸುಶ್ಮಿತಾ ನೇರಳಕಟ್ಟೆ