Advertisement
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ, ಭಾರತದ ಕಳಪೆ ಕ್ಷೇತ್ರರಕ್ಷಣೆಯ ಲಾಭವನ್ನೆತ್ತಿ 7 ವಿಕೆಟಿಗೆ 133 ರನ್ ಗಳಿಸಿತು. ಭಾರತ 19 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 137 ರನ್ ಬಾರಿಸಿ ಸತತ 2ನೇ ಜಯವನ್ನು ಒಲಿಸಿಕೊಂಡಿತು. ಇದಕ್ಕೂ ಮುನ್ನ ಹರ್ಮನ್‌ಪ್ರೀತ್ ಪಡೆ ನ್ಯೂಜಿಲ್ಯಾಂಡನ್ನು ಕೆಡವಿತ್ತು. ಇನ್ನೊಂದೆಡೆ ಪಾಕಿಸ್ಥಾನ ಸತತ 2 ಪಂದ್ಯಗಳಲ್ಲೂ ಸೋಲನುಭವಿಸಿದ್ದು, ನಾಕೌಟ್ ಹಾದಿ ಬಹುತೇಕ ಮುಚ್ಚಿದೆ. ಮೊದಲ ಮುಖಾಮುಖೀಯಲ್ಲಿ ಅದು ಆಸ್ಟ್ರೇಲಿಯಕ್ಕೆ ಶರಣಾಗಿತ್ತು.
ಚೇಸಿಂಗ್ ಆರಂಭಿಸುವ ಮೊದಲೇ ಭಾರತದ ಖಾತೆಗೆ 10 ಪೆನಾಲ್ಟಿ ರನ್ ಸೇರ್ಪಡೆಯಾದದ್ದು ಈ ಪಂದ್ಯದ ವಿಶೇಷ. ಬ್ಯಾಟಿಂಗ್ ವೇಳೆ ಪಾಕಿಸ್ಥಾನಿ ಆಟಗಾರ್ತಿಯರು 2 ಸಲ ಪಿಚ್‌ನ ಅಪಾಯಕಾರಿ ಜಾಗದಲ್ಲಿ ಓಡಿದ್ದೇ ಇದಕ್ಕೆ ಕಾರಣ. ತಲಾ 5 ರನ್ನಿನಂತೆ 10 ರನ್ನನ್ನು ದಂಡದ ರೂಪದಲ್ಲಿ ತೆತ್ತ ಪಾಕ್ ಆಟಗಾರ್ತಿಯರು ಕೊನೆಗೆ ಸೋಲಿನ ದಂಡವನ್ನು ತೆರಬೇಕಾಯಿತು. ಪಾಕ್ ಬ್ಯಾಟಿಂಗ್ ವೇಳೆ ಭಾರತ 5 ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿ ತನ್ನ ಕಳಪೆ ಕ್ಷೇತ್ರರಕ್ಷಣೆ ಪ್ರದರ್ಶಿಸಿತ್ತು.
Related Articles
ನ್ಯೂಜಿಲ್ಯಾಂಡ್ ಎದುರಿನ ಮೊದಲ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಯದಿದ್ದ ಮಿಥಾಲಿ ರಾಜ್ ಪಾಕ್ ಎದುರು ಇನ್ನಿಂಗ್ಸ್ ಆರಂಭಿಸಿ 47 ಎಸೆತಗಳಿಂದ 56 ರನ್ ಸಿಡಿಸಿದರು. ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಸೇರಿತ್ತು. ಸ್ಮತಿ ಮಂಧನಾ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಮೊದಲ ವಿಕೆಟಿಗೆ 9.3 ಓವರ್‌ಗಳಿಂದ 73 ರನ್ ಗಳಿಸುವಲ್ಲಿ ನೆರವಾದರು. ಮಂಧನಾ ಗಳಿಕೆ 26 ರನ್ (28 ಎಸೆತ, 4 ಬೌಂಡರಿ). 18ರ ಹರೆಯದ ಜೆಮಿಮಾ ರೋಡ್ರಿಗಸ್ 21 ಎಸೆತಗಳಿಂದ 16 ರನ್ ಮಾಡಿದರು (1 ಬೌಂಡರಿ).
ಭಾರತದ ಗೆಲುವಿನ ವೇಳೆ ನಾಯಕಿ ಹರ್ಮನ್‌ಪ್ರೀತ್ ಕೌರ್ 14 ರನ್, ವೇದಾ ಕೃಷ್ಣಮೂರ್ತಿ 8 ರನ್ ಗಳಿಸಿ ಅಜೇಯರಾಗಿದ್ದರು.
Advertisement
ಭಾರತ ತನ್ನ ಮುಂದಿನ ಪಂದ್ಯವನ್ನು ಗುರುವಾರ ಅಯರ್‌ಲ್ಯಾಂಡ್ ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-7 ವಿಕೆಟಿಗೆ 133 (ಬಿಸ್ಮಾ ಮರೂಫ್ 53, ನಿದಾ ದರ್ 52, ಪೂನಂ ಯಾದವ್ 22ಕ್ಕೆ 2, ಡಿ. ಹೇಮಲತಾ 34ಕ್ಕೆ 2). ಭಾರತ-19 ಓವರ್‌ಗಳಲ್ಲಿ 3 ವಿಕೆಟಿಗೆ 137 (ಮಿಥಾಲಿ ರಾಜ್ 56, ಸ್ಮತಿ ಮಂಧನಾ 26, ಜೆಮಿಮಾ ರೋಡ್ರಿಗಸ್ 16, ನಿದಾ ದರ್ 17ಕ್ಕೆ 1, ದಿಯಾನಾ ಬೇಗ್ 19ಕ್ಕೆ 1). ಪಂದ್ಯಶ್ರೇಷ್ಠ: ಮಿಥಾಲಿ ರಾಜ್.