Advertisement

Women’s T20 series: ಇಂಗ್ಲೆಂಡ್‌ ವಿರುದ್ಧ ಉತ್ತಮ ನಿರ್ವಹಣೆಯ ನಿರೀಕ್ಷೆಯಲ್ಲಿ ಭಾರತ

11:34 PM Dec 05, 2023 | Team Udayavani |

ಮುಂಬಯಿ: ಭಾರತ ಮತ್ತು ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಬುಧವಾರದಿಂದ ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಇಂಗ್ಲೆಂಡ್‌ ವಿರುದ್ಧ ತಮ್ಮ ನಿರಾಶಾದಾಯಕ ದ್ವಿಪಕ್ಷೀಯ ದಾಖಲೆಯನ್ನು ಉತ್ತಮ ಪಡಿಸಿಕೊಳ್ಳುವ ವಿಶ್ವಾಸದಲ್ಲಿ ಭಾರತೀಯ ವನಿತಾ ತಂಡ ಹೊಂದಿದೆ.

Advertisement

ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಈ ವರ್ಷ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಭಾರತೀಯ ತಂಡ ಉತ್ತಮ ನಿರ್ವಹಣೆಯನ್ನು ದಾಖಲಿಸಿದೆ. ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವ ಭಾರತೀಯ ತಂಡ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ಇಂಡೀಸ್‌ ಒಳಗೊಂಡ ತ್ರಿಕೋನ ಸರಣಿಯ ಫೈನಲ್‌ ಹಂತಕ್ಕೇರಿದ ಸಾಧನೆ ಮಾಡಿದೆ.

ಇದೇ ವೇಳೆ ಇಂಗ್ಲೆಂಡ್‌ ತಂಡವು ತವರಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ 1-2 ಅಂತರದಿಂದ ಸೋತು ನಿರಾಶೆ ಅನುಭವಿಸಿದೆ. ವಿಶ್ವದ ಎರಡನೇ ರ್‍ಯಾಂಕಿನ ಇಂಗ್ಲೆಂಡ್‌ ಇದನ್ನು ಮರೆತು ಉತ್ಕೃಷ್ಟ ನಿರ್ವಹಣೆ ನೀಡಿ ಸರಣಿ ಗೆಲ್ಲುವ ಉತ್ಸಾಹದೊಂದಿಗೆ ಹೋರಾಡುವ ಸಾಧ್ಯತೆಯಿದೆ.

ತವರಿನಲ್ಲಿ ಕಳಪೆ ದಾಖಲೆ
ತವರಿನ ಟಿ20 ಪಂದ್ಯಗಳಲ್ಲಿ ಮತ್ತು ಇಂಗ್ಲೆಂಡ್‌ ವಿರುದ್ಧ ವಿಶ್ವದ ನಾಲ್ಕನೇ ರ್‍ಯಾಂಕಿನ ಭಾರತದ ದಾಖಲೆ ಕಳಪೆಯಾಗಿದೆ. ಆದರೆ ಈ ಸರಣಿಯಲ್ಲಿ ವಿಶೇಷ ಸಾಧನೆ ಮಾಡುವ ಹಂಬಲ ಆತಿಥೇಯ ತಂಡ ಹೊಂದಿದೆ. ತವರಿನಲ್ಲಿ ಇಂಗ್ಲೆಂಡ್‌ ವಿರುದ್ಧ ಆಡಲಾದ 9 ಪಂದ್ಯಗಳಲ್ಲಿ ಭಾರತ ಎರಡರಲ್ಲಿ ಜಯ ದಾಖಲಿಸಿದೆ. ಭಾರತದ ಗೆಲುವು ದಾಖಲಾಗಿರುವುದು ಐದು ವರ್ಷಗಳ ಹಿಂದೆ. 2018ರಲ್ಲಿ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಜಯಿಸಿತ್ತು.

ಸಮಗ್ರವಾಗಿಯೂ ತವರಿನಲ್ಲಿ ಭಾರತದ ಸಾಧನೆ ಕಳವಳಕಾರಿಯಾಗಿಯೇ ಇದೆ. ಆಡಿದ 27 ಪಂದ್ಯಗಳಲ್ಲಿ ಭಾರತ 7 ಪಂದ್ಯಗಳಲ್ಲಿ ಮಾತ್ರ ಗೆದ್ದ ಸಾಧನೆ ಮಾಡಿದೆ. ಭಾರತ ತವರಿನಲ್ಲಿ ನಡೆದ ಟಿ20 ಪಂದ್ಯದಲ್ಲಿ ಗೆದ್ದಿರುವುದು ಎರಡು ವರ್ಷಗಳ ಹಿಂದೆ. 2021ರಲ್ಲಿ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳಿಂದ ಸೋಲಿಸಿತ್ತು. ಆಬಳಿಕ ನಡೆದ ನಾಲ್ಕು ಪಂದ್ಯಗಳಲ್ಲಿ ಭಾರತ ಸೋತಿದ್ದರೆ ಒಂದು ಪಂದ್ಯ ಟೈಗೊಂಡಿತ್ತು.

Advertisement

ಬೌಲಿಂಗ್‌ನಲ್ಲಿ ದೀಪ್ತಿ ಶರ್ಮ ಮತ್ತು ಬ್ಯಾಟಿಂಗ್‌ನಲ್ಲಿ ಜೆಮಿಮಾ ರಾಡ್ರಿಗಸ್‌ ಭಾರತದ ಯಶಸ್ವಿ ಆಟಗಾರ್ತಿಯರಾಗಿದ್ದಾರೆ. ಅವರಲ್ಲದೇ ನಾಯಕಿ ಕೌರ್‌, ಸ್ಮತಿ ಮಂದನಾ, ಶಫಾಲಿ ಶರ್ಮ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆಯಿದೆ. ತಂಡದ ಮೂವರು ಹೊಸ ಮುಖಗಳಿದ್ದಾರೆ. ಕರ್ನಾಟಕದ ಬಲಗೈ ಸ್ಪಿನ್ನರ್‌ ಶ್ರೇಯಾಂಕಾ ಪಾಟೀಲ್‌, ಪಂಜಾಬ್‌ನ ಎಡಗೈ ಸ್ಪಿನ್ನರ್‌ ಮನ್ನತ್‌ ಕಶ್ಯಪ್‌ ಮತ್ತು ಬಂಗಾಲದ ಸ್ಪಿನ್ನರ್‌ ಸೈಕಾ ಐಶಾಕ್‌ ತಂಡದಲ್ಲಿರುವ ಹೊಸ ಮುಖಗಳು.

ಟಿ20 ಸರಣಿ ಬಳಿಕ ಉಭಯ ತಂಡಗಳ ನಡುವೆ ಏಕೈಕ ಟೆಸ್ಟ್‌ ಪಂದ್ಯ ಡಿ. 14ರಿಂದ ಮುಂಬಯಿಯ ಡಿ. ವೈ. ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next