Advertisement

ವನಿತಾ ಟಿ20 ಚಾಲೆಂಜ್‌: ಸೂಪರ್‌ ನೋವಾ -ವೆಲಾಸಿಟಿ ಫೈನಲ್‌

01:38 AM May 28, 2022 | Team Udayavani |

ಪುಣೆ: ವನಿತಾ ಟಿ20 ಚಾಲೆಂಜ್‌ ಸರಣಿಯ ಫೈನಲ್‌ ಶನಿವಾರ ರಾತ್ರಿ ಪುಣೆಯಲ್ಲಿ ನಡೆಯಲಿದೆ. ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಸೂಪರ್‌ನೋವಾ ಮತ್ತು ದೀಪ್ತಿ ಶರ್ಮ ಸಾರಥ್ಯದ ವೆಲಾಸಿಟಿ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

Advertisement

ಲೀಗ್‌ ಹಂತದ ಸ್ಪರ್ಧೆಯಲ್ಲಿ ಮೂರೂ ತಂಡಗಳದ್ದು ಸಮಬಲದ ಸಾಧನೆಯಾಗಿತ್ತು. ಎಲ್ಲ ತಂಡಗಳು ಒಂದನ್ನು ಗೆದ್ದು ಒಂದನ್ನು ಸೋತು 2 ಅಂಕ ಗಳಿಸಿದ್ದವು. ಆದರೆ ರನ್‌ರೇಟ್‌ನಲ್ಲಿ ಹಿಂದುಳಿದ ಸ್ಮತಿ ಮಂಧನಾ ನಾಯಕತ್ವದ ಟ್ರೈಬ್ಲೇಜರ್ ಫೈನಲ್‌ ಅವಕಾಶದಿಂದ ವಂಚಿತವಾಯಿತು.

ಸೂಪರ್‌ನೋವಾ +0.912 ಮತ್ತು ವೆಲಾಸಿಟಿ -0.022 ರನ್‌ರೇಟ್‌ ಹೊಂದಿವೆ. ಗುರುವಾರ ರಾತ್ರಿಯ ಕೊನೆಯ ಲೀಗ್‌ ಹಣಾಹಣಿಯಲ್ಲಿ ಟ್ರೈಬ್ಲೇಜರ್ 16 ರನ್ನುಗಳಿಂದ ವೆಲಾಸಿಟಿ ತಂಡವನ್ನು ಮಣಿಸಿದರೂ ರನ್‌ರೇಟ್‌ನಲ್ಲಿ ಮೇಲೇರಲು ವಿಫ‌ಲವಾಯಿತು.

ವೆಲಾಸಿಟಿ ವಿಜಯ: ಮೇ 24ರಂದು ನಡೆದ ಲೀಗ್‌ ಹಣಾಹಣಿಯಲ್ಲಿ ವೆಲಾ ಸಿಟಿ 7 ವಿಕೆಟ್‌ಗಳಿಂದ ಸೂಪರ್‌ನೋವಾ ವನ್ನು ಮಣಿಸಿತ್ತು. ಸೂಪರ್‌ನೋವಾ 5 ವಿಕೆಟಿಗೆ 150 ರನ್‌ ಗಳಿಸಿದರೆ, ವೆಲಾಸಿಟಿ 18.2 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 151 ರನ್‌ ಬಾರಿಸಿ ಗೆದ್ದು ಬಂದಿತ್ತು. ಶಫಾಲಿ ವರ್ಮ ಮತ್ತು ಲಾರಾ ವೋಲ್ವಾರ್ಟ್‌ ತಲಾ 51 ರನ್‌ ಹೊಡೆದು ವೆಲಾಸಿಟಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವೆಲಾಸಿಟಿ ಬೌಲಿಂಗ್‌ ಕೂಡ ಉತ್ತಮ ಮಟ್ಟದಲ್ಲಿತ್ತು. ಕೇಟ್‌ ಕ್ರಾಸ್‌, ಸ್ನೇಹ್‌ ರಾಣಾ, ರಾಧಾ ಯಾದವ್‌ ಅವರೆಲ್ಲ ನಿಯಂತ್ರಿತ ದಾಳಿ ಸಂಘಟಿಸಿದ್ದರು. ಇದೇ ಮಟ್ಟವನ್ನು ಕಾಯ್ದುಕೊಂಡರೆ ವೆಲಾಸಿಟಿ ಮತ್ತೆ ಗೆದ್ದು ಬಂದು ಪ್ರಶಸ್ತಿ ಎತ್ತುವ ಸಾಧ್ಯತೆ ಇದೆ.

Advertisement

ಇನ್ನೊಂದೆಡೆ ಸೇಡಿನ ಹವಣಿಕೆಯಲ್ಲಿರುವ ಸೂಪರ್‌ನೊàವಾ ಸೂಪರ್‌ ಪ್ರದರ್ಶನವನ್ನು ನೀಡಬೇಕಾದ ಅಗತ್ಯವಿದೆ. ಕೌರ್‌ ಪಡೆಯ ಗೆಲುವು ಕೂಟದ ಉದ್ಘಾಟನ ಪಂದ್ಯದಲ್ಲಿ ಟ್ರೈಬ್ಲೇಜರ್ ವಿರುದ್ಧ ದಾಖಲಾಗಿತ್ತು. ಅಂತರ 49 ರನ್‌. ಸೂಪರ್‌ನೋವಾ ದ 163 ರನ್ನುಗಳಿಗೆ ಜವಾಬಾಗಿ ಟ್ರೈಬ್ಲೇಜರ್ 9 ವಿಕೆಟಿಗೆ ಕೇವಲ 114 ರನ್‌ ಮಾಡಿ ಶರಣಾಗಿತ್ತು. ಪೂಜಾ ವಸ್ತ್ರಾಕರ್‌ 12 ರನ್ನಿಗೆ 4 ವಿಕೆಟ್‌ ಉಡಾಯಿಸಿ ಘಾತಕವಾಗಿ ಪರಿಣಮಿಸಿದ್ದರು.

ಕಿರಣ್‌ ಪ್ರಭು ಮಿಂಚು: ಅಂತಿಮ ಲೀಗ್‌ ಹಣಾಹಣಿ ದೊಡ್ಡ ಮೊತ್ತದ ಮೇಲಾಟವಾ ಗಿತ್ತು. ಟ್ರೈಬ್ಲೇಜರ್ 5ಕ್ಕೆ 190 ರನ್‌ ರಾಶಿ ಹಾಕಿದರೆ, ವೆಲಾಸಿಟಿ 9 ವಿಕೆಟಿಗೆ 174 ರನ್‌ ಬಾರಿಸಿತು.

ಟ್ರೈಬ್ಲೇಜರ್ ಪರ ಎಸ್‌. ಮೇಘನಾ 73, ಜೆಮಿಮಾ ರೋಡ್ರಿ ಗಸ್‌ 66 ರನ್‌ ಹೊಡೆದರು. ಚೇಸಿಂಗ್‌ ವೇಳೆ ಸೊಲ್ಲಾಪುರ ಮೂಲದ, ಪ್ರಸ್ತುತ ನಾಗಾಲ್ಯಾಂಡ್‌ ತಂಡವನ್ನು ಪ್ರತಿನಿಧಿಸುವ ಕಿರಣ್‌ ಪ್ರಭು ನವಗಿರೆ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನವಿತ್ತರು. ವನ್‌ಡೌನ್‌ನಲ್ಲಿ ಕ್ರೀಸಿಗೆ ಬಂದ ಕಿರಣ್‌ 34 ಎಸೆತಗಳಿಂದ 69 ರನ್‌ ಬಾರಿಸಿದರು. ಟಿ20 ಚಾಲೆಂಜ್‌ ಸರಣಿ ಇತಿಹಾಸದಲ್ಲೇ ಅತ್ಯಂತ ಸ್ಫೋಟಕವೆನಿಸಿದ ಈ ಪ್ರದರ್ಶನದ ವೇಳೆ ಅವರು 5 ಬೌಂಡರಿ, 5 ಸಿಕ್ಸರ್‌ ಸಿಡಿಸಿ ರಂಜಿಸಿದರು. 17ನೇ ಓವರ್‌ನಲ್ಲಿ ಕಿರಣ್‌ ಪ್ರಭು ಔಟಾಗುವುದರೊಂದಿಗೆ ವೆಲಾಸಿಟಿ ಸೋಲಿನತ್ತ ಜಾರಿತು.

Advertisement

Udayavani is now on Telegram. Click here to join our channel and stay updated with the latest news.

Next