1996ರಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡನೆಯಾಗಿ, ಈವರೆಗೆ ತಾರ್ಕಿಕ ಅಂತ್ಯ ಕಾಣದೇ ಹಾಗೆಯೇ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆಗೆ ಈಗ ಒಪ್ಪಿಗೆ ಸಿಗುವ ಲಕ್ಷಣಗಳು ಕಾಣಿಸಿಕೊಂಡಿವೆ.
ಹಿಂದಿನ ಸರ್ಕಾರಗಳಲ್ಲಿ ಸಮ್ಮಿಶ್ರ ಸರ್ಕಾರಗಳ ಒತ್ತಡಕ್ಕೆ ಮಣಿದು, ಹಾಗೇ ಉಳಿದು ಹೋಗುತ್ತಿದ್ದ ಈ ಮಸೂದೆ ಈ ಬಾರಿ ಪೂರ್ಣ ಬಹುಮತ ವಿರುವ ಸರ್ಕಾರವಾಗಿರುವುದ ರಿಂದ ಜಾರಿಯಾಗುವ ನಿರೀಕ್ಷೆಗಳಿವೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಪ್ರಾತಿನಿಧ್ಯ ಕೊಡುವ ಈ ಮಸೂದೆಯನ್ನು 1996ರಲ್ಲಿ ಕರ್ನಾಟಕ ದವರೇ ಆದ ಎಚ್.ಡಿ.ದೇವೇಗೌಡರ ಕಾಲದಲ್ಲಿ ಮೊದಲ ಬಾರಿಗೆ ಮಂಡನೆ ಮಾಡಲಾಗಿತ್ತು ಮತ್ತು ಇಂಥದ್ದೊಂದು ಆಶಯ ಆಗ ಮೊಳಕೆಯೊಡೆದಿತ್ತು ಎಂಬುದು ಸಂತಸದ ವಿಚಾರ.
ಅದಕ್ಕೂ ಹಿಂದಿನ ರಾಜೀವ್ ಗಾಂಧಿ ಸರ್ಕಾ ರದಲ್ಲಿ ಮಹಿಳಾ ಮೀಸಲಾತಿ ಅಥವಾ ಪ್ರಾತಿನಿಧ್ಯ ಸಂಬಂಧ ಮಾರ್ಗರೇಟ್ ಆಳ್ವ ನೇತೃತ್ವದಲ್ಲಿ ಸಮಿತಿ ಮಾಡಲಾಗಿತ್ತು. ಮಾರ್ಗರೇಟ್ ಆಳ್ವ ಕೂಡ ಕನ್ನಡದವರು ಎಂಬುದು ಮತ್ತೂಂದು ವಿಶೇಷ. ಈ ಸಮಿತಿಯ ಶಿಫಾರಸಿ ನಂತೆ ಮುಂದಿನ ಪಿ.ವಿ.ನರಸಿಂಹ ರಾವ್ ಸರ್ಕಾರದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗುತ್ತಿದೆ.
ವಿಶ್ವ ಬ್ಯಾಂಕ್‌ನ ಅಂಕಿ ಅಂಶಗಳ ಪ್ರಕಾರ, 2022ರ ವೇಳೆಗೆ ಭಾರತದಲ್ಲಿ 68 ಕೋಟಿ ಮಹಿಳೆಯರಿದ್ದಾರೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಶೇ.48 ರಷ್ಟಿದೆ. ಸದ್ಯ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಉತ್ತಮ ವಾಗಿಯೇ ಇದೆ. ಇದಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ನೀಡಲಾಗಿರುವ ಮೀಸಲಾ ತಿಯೇ ಕಾರಣ ಎಂಬುದು ಗಮನಾರ್ಹ. ಅದೇ ರೀತಿ ವಿಧಾನಸಭೆಗಳು ಮತ್ತು ಲೋಕಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಇರಬೇಕು ಎಂಬ ಬಗ್ಗೆ 27 ವರ್ಷದ ಹಿಂದೆಯೇ ಚರ್ಚೆ ಶುರುವಾಗಿದೆ. ಆದರೂ, ಈವರೆಗೆ ಈ ವಿಚಾರದಲ್ಲಿ ಗಟ್ಟಿ ನಿರ್ಧಾರ ಕೈಗೊಳ್ಳಲು ಆಗಿಲ್ಲ. ಎಷ್ಟೋ ಬಾರಿ ಈ ಮಸೂದೆ ಮಂಡನೆಗೆ ಮುಂದಾದ ಪಕ್ಷದವರೇ ವಿರೋಧಿಸಿದ್ದೂ ಇದೆ.
ದೇವೇಗೌಡರ ಬಳಿಕ ಐ.ಕೆ.ಗುಜ್ರಾಲ್ ಸರ್ಕಾರದಲ್ಲಿ ಒಮ್ಮೆ ಕೂಡ ಯತ್ನಿಸಲಾಗಿತ್ತು. ಆದರೆ, ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಗಂಭೀರವಾಗಿಯೇ ಈ ಬಗ್ಗೆ ಪ್ರಯತ್ನಗಳಾಗಿದ್ದವು. ಈ ಎರಡೂ ಸರ್ಕಾರಗಳೂ ಸಮ್ಮಿಶ್ರ ಸರ್ಕಾರದ ದೆಸೆಯಿಂದಲೇ ಈ ಮಸೂದೆಗೆ ತಾರ್ಕಿಕ ಅಂತ್ಯ ನೀಡಲಾಗಲಿಲ್ಲ ಎಂಬುದು ವಿಷಾದನೀಯ. ಈಗ, ಅಂದರೆ 2023ರಲ್ಲಿ ಮತ್ತೆ ಮಹಿಳಾ ಮೀಸಲಾತಿ ಮಸೂದೆ ವಿಚಾರ ಮುನ್ನೆಲೆಗೆ ಬಂದಿದ್ದು, ಸೋಮವಾರ ರಾತ್ರಿಯೇ ಪ್ರಧಾನಿ ಮೋದಿ ನೇತೃತ್ವದ ಸಂಪುಟ ಇದಕ್ಕೆ ಒಪ್ಪಿಗೆ ನೀಡಿದೆ.
ಲೋಕಸಭೆಯಲ್ಲಿ ಈ ಮಸೂದೆಗೆ ಒಪ್ಪಿಗೆ ಸಿಕ್ಕೇ ಸಿಗುತ್ತದೆ. ಆದರೆ, ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಸಂಖ್ಯಾಬಲ ಇರದೇ ಇರುವುದರಿಂದ ಒಂದಷ್ಟು ಸಮಸ್ಯೆಗಳಾಗಬಹುದು. ಈ ವಿಚಾರದಲ್ಲಿ ಸರ್ಕಾರ ಪ್ರತಿಪಕ್ಷಗಳನ್ನೂ ಮನವೊಲಿಕೆ ಮಾಡಿ, ಮಸೂದೆಗೆ ಅನುಮೋದನೆ ಪಡೆದುಕೊಳ್ಳಬೇಕು. ಅಲ್ಲದೆ, ಈಗ ಮಂಡಿಸಲಾಗಿರುವ ಮಸೂದೆಯಲ್ಲಿನ ಗಣತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ವಿಚಾರದ ಬಗ್ಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಈ ಬಗ್ಗೆ ಸರ್ಕಾರ ಸಕಾರಾತ್ಮಕ ಉತ್ತರ ನೀಡಿ, ಆದಷ್ಟು ಶೀಘ್ರ ಇದರ ಜಾರಿಗೆ ಮುಂದಾಗಬೇಕು. ಸದ್ಯದಲ್ಲೇ ಪಂಚ ರಾಜ್ಯಗಳ ಚುನಾವಣೆ ಇದ್ದು, ಅದಕ್ಕೂ ಮುನ್ನ ಮಾಡಿದರೆ ಇನ್ನೂ ಉತ್ತಮ. ಈ ವಿಧಾನಸಭೆ ಚುನಾವಣೆಯಲ್ಲೇ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ. ಯಾವ ಕಾರಣಕ್ಕೂ ಈ ಬಾರಿ ಮಹಿಳೆಯರಿಗೆ ಮತ್ತೂಮ್ಮೆ ಭ್ರಮನಿರಸನವಾಗದಂತೆ ಸರ್ಕಾರ ಮತ್ತು ಸಂಸತ್ ನೋಡಿಕೊಳ್ಳಬೇಕು.