Advertisement

ತ್ಯಾಜ್ಯ ಸಮಸ್ಯೆ ಪರಿಹಾರಕ್ಕೆ ಸ್ತ್ರೀಶಕ್ತಿ ಮೊರೆ

01:32 AM Sep 07, 2019 | Lakshmi GovindaRaju |

ಬೆಂಗಳೂರು: ರಾಜಧಾನಿಯಲ್ಲಿ ಸವಾಲಾಗಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಸ್ತ್ರೀ ಶಕ್ತಿ ಸಂಘಟನೆಗಳ ಮೊರೆ ಹೋಗಿದೆ. ಈ ಸಂಬಂಧ ಮಹಿಳಾ ಸ್ವ ಸಹಾಯ ಗುಂಪುಗಳ ಜತೆ ಮಾತುಕತೆ ನಡೆಸಿದ್ದು, ಅ.1ರಿಂದ ಸ್ತ್ರೀ ಶಕ್ತಿ ಸಂಘಟನೆಗಳು ಒಣ ತ್ಯಾಜ್ಯ ಸಂಗ್ರಹಿಸಲಿವೆ. ಈ ಪ್ರಯತ್ನ ಯಶಸ್ವಿಯಾದರೆ ತ್ಯಾಜ್ಯ ವಿಲೇವಾರಿಗೆ ಸ್ತ್ರೀ ಶಕ್ತಿ ಸಂಘಟನೆ ಬಳಸಿಕೊಂಡ ಮೊದಲ ಪಾಲಿಕೆ ಎಂಬ ಹೆಗ್ಗಳಿಕೆಗೂ ಬಿಬಿಎಂಪಿ ಪಾತ್ರವಾಗಲಿದೆ.

Advertisement

ನಗರದಲ್ಲಿ ಒಣ ಹಾಗೂ ಹಸಿ ಕಸ ಪ್ರತ್ಯೇಕಿಸಲು ಹಾಗೂ ಸಂಗ್ರಹಿಸಲು ಈಗಾಗಲೇ ಏಳು ಸಾವಿರಕ್ಕೂ ಅಧಿಕ ಚಿಂದಿ ಆಯುವವರನ್ನು ಬಿಬಿಎಂಪಿ ಗುರುತಿಸಿದ್ದು, ಇವರಿಂದ 145 ವಾರ್ಡ್‌ಗಳಲ್ಲಿ ಮಾತ್ರ ಒಣ ಕಸ ಸಂಗ್ರಹಿಸಲಾಗುತ್ತಿದೆ. ಉಳಿದ 54 ವಾರ್ಡ್‌ಗಳಿಗೆ ಮಹಿಳಾ ಸ್ವ ಸಹಾಯ ಗುಂಪುಗಳ ನೆರವು ಪಡೆಯುವ ಉದ್ದೇಶವಿದೆ.

ಒಣ ಕಸ ಸಂಗ್ರಹಿಸಲು ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಮ್ಯಾಪಿಂಗ್‌ ಪ್ರಕ್ರಿಯೆ ನಡೆಯುತ್ತಿದೆ. ಕೆಲ ವಾರ್ಡ್‌ಗಳ ವಿಸ್ತೀರ್ಣ, ಜನಸಂಖ್ಯೆ ಹೆಚ್ಚಿದ್ದು, ಶೀಘ್ರವೇ ಯಾವ ರಸ್ತೆಗೆ ಯಾರು ಒಣ ಕಸ ಸಂಗ್ರಹಿಸಬೇಕೆಂದು ತಿಳಿಸಲಾಗುವುದು ಎಂದು ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ರಂದೀಪ್‌ ತಿಳಿಸಿದ್ದಾರೆ.

308 ಕೋಟಿ ರೂ.ಗೆ ಟೆಂಡರ್‌: ಸೆ.1ರಿಂದಲೇ ಹೊಸ ಟೆಂಡರ್‌ ಜಾರಿಯಾಗಬೇಕಾಗಿತ್ತು. ಆದರೆ, ಸರ್ಕಾರ ಬಜೆಟ್‌ ತಡೆಹಿಡಿದ ಕಾರಣ ವಿಳಂಬವಾಗಿದೆ. ಈಗಾಗಲೇ ಗುತ್ತಿಗೆದಾರರಿಗೆ ಕಾರ್ಯಾದೇಶ ಪತ್ರ ನೀಡುತ್ತಿದ್ದು, ಒಂದು ತಿಂಗಳೊಳಗೆ ಕಸ ಸಂಗ್ರಹಣೆ ಕಾರ್ಯ ಆರಂಭಿಸಬೇಕೆಂದು ಪಾಲಿಕೆ ಆದೇಶಿಸಿದೆ.

ಹೊಸ ಟೆಂಡರ್‌ ಪ್ರಕಾರ ಹಸಿ ತ್ಯಾಜ್ಯ ವಿಲೇವಾರಿಗೆ 308 ಕೋಟಿ ರೂ.ಗಳನ್ನು ಪಾಲಿಕೆ ವ್ಯಯಿಸಲಿದೆ. ಒಣ ಕಸ ಸಂಗ್ರಹಣೆಗೆ ಹಣ ಖರ್ಚು ಮಾಡದೇ ಚಿಂದಿ ಆಯುವವರು ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳ ಮೊರೆಹೋಗಿದ್ದು, ಒಣ ಕಸ ಮಾರಾಟದಿಂದ ಬರುವ ಹಣ ಅವರೇ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ವಾಣಿಜ್ಯ ಮಳಿಗೆಗಳ ತ್ಯಾಜ್ಯ ಸಂಗ್ರಹಣೆಗೆ ಅವಕಾಶ: ಪಾಲಿಕೆ ವ್ಯಾಪ್ತಿಯ ಮನೆಗಳಲ್ಲಿ ಒಣ ಕಸ ಸಂಗ್ರಹಿಸಲು ಅನುಮತಿ ಸಿಕ್ಕಿದೆ. ಆದರೆ, ಮನೆಯ ಒಣ ಕಸ ಸಂಗ್ರಹದಿಂದ ನಮಗೆ ಆದಾಯ ಬರುವುದಿಲ್ಲ. ಆದ್ದರಿಂದ ವಾಣಿಜ್ಯ ಕಸ ಸಂಗ್ರಹಿಸಲು ಅನುಮತಿ ನೀಡಬೇಕೆಂದು ಮನವಿ ನೀಡಲಾಗಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದ ಗರುಡಾಚಾರ್‌ ಪಾಳ್ಯ ವಾರ್ಡ್‌ನಲ್ಲಿ 25,600 ಮನೆಗಳಿದ್ದು, 1.5ರಿಂದ 2ಟನ್‌ ಒಣ ಕಸ ಸಂಗ್ರಹವಾಗುತ್ತಿದೆ. ಅದರಲ್ಲಿ ಪುನರ್‌ ಬಳಕೆಯಾಗುವ ಕಸ 50 ಕೆ.ಜಿ. ಮಾತ್ರ. ಆದ್ದರಿಂದ ಪಾಲಿಕೆ ಆಟೋ ಜತೆ ನಿರ್ವಹಣೆ ವೆಚ್ಚ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದು ಮಹದೇವಪುರ ಮಹಿಳಾ ಒಕ್ಕೂಟದ ಕಾರ್ಯದರ್ಶಿ ನಾಗರತ್ನ ತಿಳಿಸಿದ್ದಾರೆ.

ಮನೆಗಳಲ್ಲಿ ಒಣ ಕಸ ಸಂಗ್ರಹಿಸಲು ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಪಾಲಿಕೆಯಿಂದ ಆಟೋ ನೀಡಲಾಗುವುದು. ಈ ಕಸವನ್ನು ಮಾರಾಟ ಮಾಡಿ ಅದರಿಂದ ಬರುವ ಹಣ ಅವರೇ ಪಡೆಯಬಹುದು. ಸ್ತ್ರೀ ಶಕ್ತಿ ಸಂಘಟನೆಗಳು ಒಣ ಕಸ ಸಂಗ್ರಹ ಮಾಡುವುದರಿಂದ ಕೇಂದ್ರ, ರಾಜ್ಯ ಮತ್ತು ಪಾಲಿಕೆಯ ಹಲವು ಯೋಜನೆಗಳ ನೆರವು ಪಡೆಯಲು ಅರ್ಹತೆ ಪಡೆಯಲಿವೆ.
-ರಂದೀಪ್‌, ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಒಣಕಸ ಸಂಗ್ರಹ ಅನುಮತಿ ನೀಡಲು ಚಿಂತಿಸಲಾಗಿದ್ದು, ಅವರಿಗೆ ಪಾಲಿಕೆಯಿಂದ ವೇತನ ನೀಡುವುದಿಲ್ಲ. ಒಣಕಸ ಮಾರಾಟದಿಂದ ಬಂದ ಹಣ ಪಡೆಯಬಹುದು. ಇದರಿಂದ ಅವರ ಗುಂಪು ಮತ್ತು ಜೀವನಮಟ್ಟ ಸುಧಾರಣೆಯಾಗಲಿದೆ. ಆ.1ರಿಂದ ಸ್ತ್ರೀ ಶಕ್ತಿ ಸಂಘಟನೆಗಳು ಒಣ ಕಸ ಸಂಗ್ರಹಿಸಲಿವೆ.
-ಗಂಗಾಂಬಿಕೆ, ಮೇಯರ್‌

* ಮಂಜುನಾಥ್‌ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next