Advertisement

ಸಾಧನೆಯ ಹಾದಿಯಲ್ಲಿ  ಮಹಿಳಾ ಲೋಕೋ ಪೈಲಟ್‌

07:24 AM Feb 18, 2019 | |

ಕಾಲ ಬದಲಾಗಿದೆ. ಮಹಿಳೆಯರು ನಾಲ್ಕು ಗೋಡೆಗಳಿಂದ ಬಿಡುಗಡೆ ಹೊಂದಿ ಬೇರೆ ಬೇರೆ ಕೆಲಸಗಳಲ್ಲಿ ಪುರುಷರಿಗೆ ಸಮನಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಎಂಜಿನಿಯರ್‌, ಡಾಕ್ಟರ್‌, ಕೃಷಿ ಕ್ಷೇತ್ರ, ಪೈಲೆಟ್‌, ಲೋಕೋ ಪೈಲಟ್‌ ಹೀಗೆ ಎಲ್ಲ ಕೆಲಸಗಳಲ್ಲಿಯೂ ತೊಡಗಿಸಿಕೊಂಡು ತನ್ನಿಂದ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಜಗತ್ತಿಗೆ ಸಾರಿದ್ದಾಳೆ. ಇತ್ತೀಚೆಗಷ್ಟೇ ದ.ಕ. ಜಿಲ್ಲೆಯ ವಿಟ್ಲದ ವನಿತಾಶ್ರೀ ಅವರು ಕರ್ನಾಟಕದ ಏಕೈಕ ಮಹಿಳಾ ಲೋಕೋ ಪೈಲಟ್‌ ಎಂಬ ಗೌರವಕ್ಕೆ ಪಾತ್ರರಾಗಿದ್ದು, ಇವರ ಸಾಲಿನಲ್ಲಿ ನಮ್ಮ ದೇಶದ ಇನ್ನೂ ಅನೇಕ ಮಹಿಳಾಮಣಿಯರು ಇದ್ದಾರೆ.

Advertisement

ವಿದ್ಯೆ, ಬುದ್ಧಿಯ ಜತೆಗೆ ಅಂದುಕೊಂಡದ್ದನ್ನು ಸಾಧಿಸುವ ಛಲವೊಂದಿದ್ದರೆ ಸಾಕು. ಕಷ್ಟದ ಹಾದಿಯೂ ತನ್ನಿಂತಾನಾಗಿಯೇ ಬೀಗ ತೆರೆದು ಅವಕಾಶಗಳನ್ನು ತಂದುಕೊಡುತ್ತದೆ ಎಂಬುದಕ್ಕೆ ಇಲ್ಲಿದೆ ಮಹಿಳಾ ಲೋಕೋ ಪೈಲಟ್‌ ಗಳ ಸಾಧನೆಯ ಯಶೋಗಾಥೆ. ರೈಲು ಚಾಲಕರಾಗುವುದು ಕೇವಲ ಪುರುಷರಿಂದಷ್ಟೇ ಸಾಧ್ಯ ಎಂಬ ಕಾಲವೊಂದಿತ್ತು. ಇದನ್ನು ಬದಲಾಯಿಸಿ ರೈಲು ಚಾಲಕಿ (ಲೋಕೋ ಪೈಲಟ್‌) ಯರಾಗಿ ಇತಿಹಾಸ ನಿರ್ಮಿಸಿದ ಹೆಂಗಳೆಯರ ಕಥೆ ಇದು.

ಶಿಕ್ಷಕಿಯಾಗಬೇಕಾದ ಸುರೇಖಾ ರೈಲಿಗೆ ಚಾಲಕಿಯಾದರು
ದೇಶದ ಬೆನ್ನೆಲುಬು ರೈತನ ಪುತ್ರಿ  ಸುರೇಖಾ ಯಾದವ್‌ ದಿಟ್ಟ ಹೆಣ್ಣು. ಮಹಾರಾಷ್ಟ್ರದ ಸತಾರಾದಲ್ಲಿ ಜನಿಸಿದ ಇವರು ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ನಲ್ಲಿ ಪದವೀಧರೆ. ಬಾಲ್ಯದಲ್ಲಿಯೇ ಕ್ರೀಡೆಯಲ್ಲಿಯೂ ಮುಂದಿದ್ದ ಈ ಮಹಿಳೆ ಭಾರತದ ಪ್ರಥಮ ಲೋಕೋ ಪೈಲಟ್‌. ಮೂವತ್ತು ವರ್ಷಗಳ ಹಿಂದೆ ಇಂಡಿಯನ್‌ ರೈಲ್ವೇಯಲ್ಲಿ ಲೋಕೋ ಪೈಲಟ್‌ ಆಗಿ ಕಾರ್ಯಾರಂಭ ಮಾಡಿದ ಈಕೆಯ ಸಾಧನೆಯೇ ಉಳಿದೆಲ್ಲ ಲೋಕೋ ಪೈಲಟ್‌ಗಳಿಗೂ ಸ್ಫೂರ್ತಿ ಎಂದರೂ ತಪ್ಪಲ್ಲ.

ಕನಸು ಕಟ್ಟಿದ್ದು ತಾನೋರ್ವ ಟೀಚರ್‌ ಆಗಬೇಕು ಎಂದು. ಆದರೆ ಹಣೆಬರಹದಲ್ಲಿ ದೇವರು ಅವರಿಗೆ ಬೇರೆಯೇ ಉದ್ಯೋಗ ಬರೆದಿದ್ದ. ಅದರಂತೆ 1987 ರಲ್ಲಿ ರೈಲ್ವೇ ಪರೀಕ್ಷೆಗಳನ್ನು ಎದುರಿಸಿದ ಇವರು ಉತ್ತೀರ್ಣರಾಗಿ ರೈಲ್ವೇ ಇಲಾಖೆಯಲ್ಲಿ ಲೋಕೋ ಪೈಲಟ್‌ ಆಗಿ ನೇಮಕಗೊಳ್ಳುತ್ತಾರೆ.

ರೈಲ್ವೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ. ಅನೇಕ ಸವಾಲುಗಳ ನಡುವೆ, ಸುಮಾರು ಮೂವತ್ತು ವರ್ಷ ಕಳೆದದ್ದು ಅಚ್ಚರಿಯೇ ಸರಿ. ಗೂಡ್ಸ್‌ ರೈಲು, ಪ್ಯಾಸೆಂಜರ್‌ ರೈಲುಗಳಿಗೆ ಚಾಲಕಿಯಾಗಿ, ತನ್ನ ಕಾರ್ಯವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ.

Advertisement

ಇವರ ಇನ್ನೊಂದು ಹಿರಿಮೆ ಎಂದರೆ 2010 ರಲ್ಲಿ ಪುರುಷರಿಗೇ ಸವಾಲಾಗಿರುವ ಘಾಟ್‌
ರೈಲ್ವೇಯಲ್ಲಿ ಕಾರ್ಯ ನಿರ್ವಹಿಸಿರುವುದು. ಈ ಜವಾಬ್ದಾರಿಯನ್ನು ಇವರಿಗೆ ವಹಿಸುವ
ಮುನ್ನ ಓರ್ವ ಮಹಿಳೆ ಇದನ್ನು ಸಮರ್ಥವಾಗಿ ನಿರ್ವಹಿಸುವುದು ಸಾಧ್ಯವೇ ಎಂಬ ಪ್ರಶ್ನೆ ಅಧಿಕಾರಿಗಳಲ್ಲಿತ್ತು. ಆದರೆ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಭೇಷ್‌ ಎನ್ನಿಸಿಕೊಂಡರು. ಅಲ್ಲದೇ 2000ರಲ್ಲಿ ಮಮತಾ ಬ್ಯಾನರ್ಜಿ ಉದ್ಘಾಟಿಸಿದ ಲೇಡಿಸ್‌ ಸ್ಪೆಷಲ್‌ ಲೋಕಲ್‌ ರೈಲಿನ ಮೊದಲ ಚಾಲಕಿಯಾದ ಹೆಮ್ಮೆಯೂ ಇವರಿಗಿದೆ.

ಸುರೇಖಾ ಅವರಿಗೆ 2011ರ ಮಹಿಳಾ ದಿನದಂದು ಏಷ್ಯಾದ ಮೊದಲ ರೈಲು ಚಾಲಕಿ ಎಂಬ ಬಿರುದನ್ನೂ ನೀಡಲಾಗಿದೆ. 2011ರಲ್ಲಿ ಇವರಿಗೆ ಎಕ್ಸ್‌ಪ್ರೆಸ್‌ ಮೈಲ್‌ ಡ್ರೈವರ್‌ ಹುದ್ದೆಗೆ ಭಡ್ತಿ
ಸಿಕ್ಕಿದೆ. ಅಲ್ಲದೆ ಈಕೆ ರೈಲು ಚಾಲನೆಗೆ ಸಂಬಂಧಿಸಿದಂತೆ ಟ್ರೈನಿಂಗ್‌ ನೀಡುತ್ತಿದ್ದು ತನ್ನ ಬಾಲ್ಯದ ಟೀಚರ್‌ ಆಗುವ ಕನಸನ್ನು ಈ ಮೂಲಕ ನೆರವೇರಿಸಿಕೊಂಡಿದ್ದಾರೆ. ಈಗ ಆಕೆ ಟ್ರೈನಿಂಗ್‌ ಸೆಂಟರ್‌ನ ಸೀನಿಯರ್‌ ಇನ್‌ಸ್ಟ್ರಕ್ಟರ್‌ ಆಗಿದ್ದಾರೆ. ಪ್ರಸ್ತುತ ಭಾರತೀಯ ರೈಲ್ವೇಯಲ್ಲಿ ಸುಮಾರು 50ಕ್ಕೂ ಅಧಿಕ ಮಹಿಳಾ ಲೋಕೋ ಪೈಲಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಧನೆ ಮಾಡುವ ಹಂಬಲ ಇದ್ದರೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ತಮ್ಮ ಬದುಕಿನ ಮೂಲಕವೇ ತೋರಿಸಿ ಕೊಟ್ಟು, ಸಾಧನೆಯ ಕನಸು ಹೊತ್ತವರಿಗೂ ಮಾದರಿಗಳಾಗಿದ್ದಾರೆ.

ಕನಸು ನನಸಾಗಿಸಿದ ಭಾವ್ನಾಗೋಮೆ
ಮಧ್ಯ ಪ್ರದೇಶದ ಇಪ್ಪತ್ತಾರು ವರ್ಷದ ಚೆಲುವೆ ಭಾವ್ನಾ. ಉಜ್ಜೈನಿಯಲ್ಲಿ ಹುಟ್ಟಿ ಪ್ರಸ್ತುತ ರಾಜ್‌ಕೋಟ್‌ನಲ್ಲಿ ರೈಲ್ವೇ ಇಲಾಖೆಯಲ್ಲಿ ಲೋಕೋ ಪೈಲಟ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಈಕೆ ನೇಮಕಗೊಂಡದ್ದು 2014ರಲ್ಲಿ. ಬಡ ಕುಟುಂಬದಲ್ಲಿ ಹುಟ್ಟಿದ ಭಾವ್ನಾ ತಂದೆಗೆ ಒಂದು ಪುಟ್ಟ ಮೊಬೈಲ್‌ ಶಾಪ್‌. ಇದರಿಂದಲೇ ಈ ಕುಟುಂಬದ ಜೀವನ ನಿರ್ವಹಣೆ. ಕುಟುಂಬದಲ್ಲಿ ಬೇರೆ ಯಾರೂ ರೈಲ್ವೇ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ ಚಿಕ್ಕ ಯಶಸ್ಸಿನಿಂದಲೇ ಈ ಹುಡುಗಿಗೆ ಮಾತ್ರ ತಾನು ಲೋಕೋ ಪೈಲಟ್‌ ಆಗಬೇಕು ಎಂಬ ಕನಸು. ಇದಕ್ಕೆ ಕಾರಣ, ಚಿಕ್ಕಂದಿನಲ್ಲೇ ರೈಲುಗಳನ್ನು ನೋಡುತ್ತಾ ಬೆಳೆದಿದ್ದ ಹುಡುಗಿಗೆ ಅದನ್ನು ಚಲಾಯಿಸುವವರು ಅದ್ಭುತವಾದ ಚಮತ್ಕಾರಿಗಳಂತೆ ಕಾಣುತ್ತಿದ್ದದ್ದು. ಮತ್ತು ಅವರ ಕೆಲಸಗಳೆಲ್ಲವೂ ಅವರಲ್ಲಿ ಒಂದು ರೀತಿಯ ಅಚ್ಚರಿ ಮತ್ತು ಆಸಕ್ತಿಯನ್ನು ಹುಟ್ಟಿ ಹಾಕಿದ್ದು. ಎಂಜಿನಿಯರಿಂಗ್‌ ಮುಗಿಸಿ ಲೋಕೋ ಪೈಲಟ್‌ ಆಗುವ ಕನಸು ಕಂಡ ಇವರು ಗುರಿ ಸಾಧನೆಗಾಗಿ ಸತತ ಪರಿಶ್ರಮಪಟ್ಟಿರುವುದು ಮರೆಯುವಂತಿಲ್ಲ.

ಕಠಿನ ಹಾದಿಯಲ್ಲಿ ಗೆದ್ದು ಬಂದ ಲಕ್ಷ್ಮೀ ಲಾಕ್ರ
ಭಾರತೀಯ ರೈಲ್ವೇಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಎರಡನೇ ಮಹಿಳೆ ಮತ್ತು ನಾರ್ದರ್ನ್
ರೈಲ್ವೇಯಲ್ಲಿ ಚಾಲಕಿಯಾಗಿ ನೇಮಕಗೊಂಡ ಮೊದಲ ಮಹಿಳೆ ಈಕೆ. ಝಾರ್ಖಂಡ್‌ನ‌
ಬುಡಕಟ್ಟು ಜನಾಂಗದಲ್ಲಿ ಜನಿಸಿದ ಇವರಿಗೆ ಈಗ ಇಪ್ಪತ್ತೇಳು ವರ್ಷ. ರಾಂಚಿಯಲ್ಲಿ ಎಲೆಕ್ಟ್ರಾನಿಕ್ಸ್‌ ವಿಷಯದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. 1992ರಲ್ಲಿ ಸೆಂಟ್ರಲ್‌ ರೈಲ್ವೇ ಇಲಾಖೆಗೆ ನೇಮಕಗೊಂಡು ಕಾರ್ಯಾರಂಭಿಸಿ ಹೊಸ ಇತಿಹಾಸ ಸೃಷ್ಟಿಗೆ ನಾಂದಿ ಹಾಡಿದವರು. ಬಡಕುಟುಂಬದಲ್ಲಿ ಹುಟ್ಟಿ ಕಷ್ಟಪಟ್ಟು ಬೆಳೆದ ಈಕೆ ರೈಲ್ವೇ ಇಲಾಖೆಯಲ್ಲಿನ ಎಲ್ಲ ಪರೀಕ್ಷೆಗಳನ್ನೂ ಎದುರಿಸಿ, ಅನಂತರ ಆಯ್ಕೆಗೊಂಡರು. ಸುಮಾರು ಒಂಬತ್ತು ತಿಂಗಳು ಟ್ರೈನಿಂಗ್‌ ಬಳಿಕ ಅವರು ರೈಲ್ವೇ ಇಲಾಖೆಯಲ್ಲಿ ಖಾಯಂ ಉದ್ಯೋಗಿಯಾದರು. ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿ ಕಠಿನ ಹಾದಿಯಲ್ಲಿ ಗೆದ್ದು ಇತರರಿಗೂ ಸ್ಫೂರ್ತಿಯಾಗಿ ನಿಂತಿದ್ದಾರೆ. ಭಾರತೀಯ ರೈಲ್ವೇ ಇಲಾಖೆ ಯಾವುದೇ ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಮಾನವಾದ ಅವಕಾಶವನ್ನು ಕಲ್ಪಿಸುತ್ತಿದೆ. ಆ ಅವಕಾಶವನ್ನು ಬಳಸಿಕೊಂಡು ಮುಂದೆ ಬರಲು ಇಚ್ಛಿಸುವವರಿಗೆ ಲಕ್ಷ್ಮೀ ಲಾಕ್ರ ಅವರು ಸ್ಫೂರ್ತಿ ಎಂದು ಅವರ ಸಹೋದ್ಯೋಗಿಗಳ ಮಾತು. ಸದ್ಯ ಅವರು ದಿಲ್ಲಿಯಲ್ಲಿ ಲಘು ಎಂಜಿನ್‌ಗಳು ಮತ್ತು ಗೂಡ್ಸ್‌ ರೈಲುಗಳನ್ನು ಚಲಾಯಿಸುತ್ತಿದ್ದು, ಶತಾಬ್ದಿ ಎಕ್ಸ್‌ಪ್ರೆಸ್‌ ಚಲಾಯಿಸುವುದೇ ಅವರ ಮುಂದಿನ ಗುರಿಯಂತೆ.

 ಭುವನ ಬಾಬು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next