Advertisement

ಬನ್‌-ಪ್ರಿಯೆ

10:11 AM Mar 21, 2020 | mahesh |

ಫ್ಯಾಷನ್‌ ಲೋಕದಲ್ಲಿ ಇಂದಿನ ಫ್ಯಾಷನ್‌ ನಾಳೆ ಮಾಯವಾಗಬಹುದು. ಅಥವಾ ಹಿಂದಿನ ಕಾಲದ ಫ್ಯಾಷನ್‌ ಮತ್ತೆ ಬರಲೂಬಹುದು. ಹಿಂದಿನ ಕಾಲದ ಮಹಿಳೆಯರ ಅಚ್ಚುಮೆಚ್ಚಿನ ಹೇರ್‌ಸ್ಟೈಲ್‌ ತುರುಬು (ಬನ್‌)ಈಗ ಮರಳಿ ಬಂದಿದೆ.

Advertisement

ಉದ್ದ ಕೂದಲನ್ನು ಗಂಟು ಕಟ್ಟಿ , ತುರುಬು ಹಾಕುವುದು ಹಳೇ ಫ್ಯಾಷನ್‌ ಎನ್ನುವಂತಿಲ್ಲ. ಇದೀಗ ಸೆಲೆಬ್ರಿಟಿಗಳಿಂದ ಶುರುವಾದ ಈ ಟ್ರೆಂಡ್‌ ಅಭಿಮಾನಿಗಳನ್ನು ತಲುಪಲು ಹೆಚ್ಚು ಸಮಯ ಬೇಕಾಗಿಲ್ಲ. ಈ ಹೊಸ ಟ್ರೆಂಡ್‌ ಸುಲಭ ವಿಧಾನವೂ ಆಗಿರುವುದರಿಂದ ಹೆಚ್ಚು ಜನಪ್ರಿಯವಾಗಿದೆ.

ಉದ್ದವಾದ ದಟ್ಟನೆಯ ಕೂದಲು ಎಂದರೆ ಮಹಿಳೆಯರಿಗೆ ಎಲ್ಲಿಲ್ಲದ ಪ್ರೀತಿ-ಅಕ್ಕರೆ. ಇಂಥ ಕೂದಲನ್ನು ಆರೈಕೆ ಮಾಡುವುದು ತುಂಬಾ ಕಷ್ಟದ ಕೆಲಸ. ಇನ್ನು ಬೇಸಿಗೆಯ ಸಮಯದಲ್ಲಿ ಜಡೆ, ಜುಟ್ಟು ಕಟ್ಟಿಕೊಳ್ಳಲು ಅಥವಾ ತಲೆಕೂದಲು ಬಿಟ್ಟು ಓಡಾಡುವುದು ಬಹಳ ಕಷ್ಟ. ಇಂಥ ಸಮಯದಲ್ಲಿ ನೀಳವೇಣಿಯರು ಬನ್‌ ಹೇರ್‌ಸ್ಟೈಲ್‌ ಮೊರೆ ಹೋಗಿದ್ದಾರೆ. ಈ ಹೇರ್‌ಸ್ಟೈಲ್‌ನಲ್ಲಿ ನೂರಾರು ವಿಧಗಳಿವೆ.

ಬನ್‌ ಕಟ್ಟಿಕೊಳ್ಳುವಾಗ ನೀಟಾಗಿ ಇರಬೇಕೆಂದೇನಿಲ್ಲ. ಕೂದಲು ಎಷ್ಟು ಕೆದರಿಕೊಂಡಿರುತ್ತದೆಯೋ, ಅದುವೇ ಸ್ಟೈಲ್‌ ಎನ್ನುವುದು ಈಗಿನ ಕೇಶ ವಿನ್ಯಾಸಕಾರರ ವಾದ. ಈ ಕೇಶ ವಿನ್ಯಾಸವು ಸೆಕೆಗಾಲದಲ್ಲಿ ಆರಾಮ ನೀಡುವುದಷ್ಟೇ ಅಲ್ಲದೆ, ಮುಖಕ್ಕೂ ಹೊಸಲುಕ್‌ ನೀಡುತ್ತದೆ. ಇನ್ನು ಈ ತರಹದ ಹೇರ್‌ಸ್ಟೈಲನ್ನು ಮದುವೆ, ಹಬ್ಬ-ಹರಿದಿನಗಳಲ್ಲಿ ಮಾಡುವವರ ಸಂಖ್ಯೆ ಇದೀಗ ಹೆಚ್ಚಾಗಿದೆ. ತಮ್ಮ ಬಟ್ಟೆಗೆ ಅನುಗುಣವಾಗಿ ಸುಂದರವಾಗಿ ಬನ್‌ ಹೇರ್‌ಸ್ಟೈಲ್‌ ಮಾಡಿಕೊಂಡು ಅದಕ್ಕೆ ಅಂದದ ಮುತ್ತುಗಳನ್ನು ಜೋಡಿಸಿದರೆ ಚಂದ ಚಂದ. ಗಾಜಿಗನ ಕ್ಲಿಪ್ಸ್‌ , ವೆರೈಟಿ ಪಿನ್‌ಗಳು, ಬಣ್ಣದ ಬೀಡ್ಸ್‌, ಹೊಳೆಯುವ ವಸ್ತು, ಹೂವಿನ ಆಕೃತಿಯ ಕ್ಲಿಪ್ಸ್‌ಗಳು, ಮಲ್ಲಿಗೆ ಮಾಲೆ ಹೋಲುವ ಕೃತಕ ತುರುಬು, ಹೇರ್‌ಬ್ಯಾಂಡ್‌- ಹೀಗೆ ಫ್ಯಾನ್ಸಿ ಅಂಗಡಿಯಲ್ಲಿ ನೂರಾರು ಆಯ್ಕೆಗಳಿವೆ.

ಇನ್ನು ಆಫೀಸಿಗೆ ಹೋಗುವಾಗ ಸಿಂಪಲ್ಲಾಗಿ ಬನ್‌ ಕಟ್ಟಿಕೊಳ್ಳಬಹುದು. ಹಾಗೆ ಪಾರ್ಟಿ, ಸಿನಿಮಾ, ಕಾಲೇಜು, ಹೊಟೇಲ್‌, ಶಾಪಿಂಗ್‌ಗೂ ಕೂಡ ತಮ್ಮ ಮುಖಕ್ಕೆ ಹೊಂದುವಂಥ ಈ ತರಹದ ಕೇಶವಿನ್ಯಾಸ ಮಾಡಿಕೊಳ್ಳಬಹುದು. ಒಂದು ಪೆನ್‌ಗೊ, ಪೆನ್ಸಿಲ್‌ಗೋ ಕೇಶವನ್ನು ಸುತ್ತಿಕೊಂಡು, ಬನ್‌ ಸ್ಟೈಲ್‌ ಮಾಡುವವರೂ ಇದ್ದಾರೆ.

Advertisement

ಈ ಕೇಶವಿನ್ಯಾಸ ಮಾಡರ್ನ್ ಉಡುಪು ಹಾಗೂ ಸಾಂಪ್ರದಾಯಿಕ ಉಡುಪು ಎರಡಕ್ಕೂ ಸೈ. ಮದುವೆ ಮುಂಜಿಗೆ ಹೋಗುವಾಗ ಧರಿಸುವ ಜರಿ ದಿರಿಸಿಗೆ ಹೋಲುವಂತೆ ಚಿನ್ನದ ಹೂ ಮುಡಿದು ತುರುಬನ್ನು ಶ್ರೀಮಂತವಾಗಿಸಬಹುದು. ಸಾಂಪ್ರದಾಯಿಕ ಉಡುಪಿಗೆ ತಕ್ಕಂತೆ ಗ್ರ್ಯಾಂಡಾಗಿ ಈ ಹೇರ್‌ಸ್ಟೆಲ್‌ ಮಾಡಿಕೊಂಡು ವೆರೈಟಿ ಬೀಡ್‌ಗಳ ಕ್ಲಿಪ್‌ ಧರಿಸಿ ಇನ್ನೂ ವೈಭವಯುತವಾಗಿ ಅಲಂಕರಿಸಿಕೊಳ್ಳಬಹುದು. ಮಾಡರ್ನ್ ಉಡುಪುಗಳಾದ ಬ್ಲೆಸರ್‌, ಸೂಟ್‌, ಮಿಡಿಗಳ ಮೇಲೆ ಮೆಸ್ಸಿ ಬನ್‌ ಹೇರ್‌ಸ್ಟೈಲ್‌ ಮಾಡಿಕೊಳ್ಳಬಹುದು.

ಸುಮಾ

Advertisement

Udayavani is now on Telegram. Click here to join our channel and stay updated with the latest news.

Next