Advertisement

ಪಿಂಕ್‌ ಬಣ್ಣದಲ್ಲಿ ಅಲಂಕೃತಗೊಂಡಿದೆ ಮಹಿಳಾಸ್ನೇಹಿ ಮತಗಟ್ಟೆ

11:57 AM May 12, 2018 | Team Udayavani |

ಮಹಾನಗರ: ಮತದಾನ ಕೇಂದ್ರಕ್ಕೆ ಬನ್ನಿ ಎಂದು ಮಹಿಳೆಯರೇ ಸ್ವಾಗತ ಕೋರುವ ಚಿತ್ರಣವಿರುವ ತಿಳಿ ಪಿಂಕ್‌ ಬಣ್ಣದ ಪ್ರವೇಶದ್ವಾರ.. ಮತಗಟ್ಟೆಯ ಒಳ ಹೋಗುತ್ತಿದ್ದಂತೆ ಸುತ್ತಲೂ ಪಿಂಕ್‌ ಬಲೂನು, ಪಿಂಕ್‌ ಬಟ್ಟೆಯಿಂದ ಮಾಡಿದ ಅಲಂಕಾರ..ಮತದಾನದ ಸಿದ್ಧತೆಯಲ್ಲಿ ತೊಡಗಿರುವ ಮಹಿಳಾ ಅಧಿಕಾರಿಗಳು.

Advertisement

ಮೇ 12ರಂದು ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಿಳಾ ಸ್ನೇಹಿ ಮತದಾನ ಕೇಂದ್ರಗಳಿಗೆ ‘ಉದಯವಾಣಿ -ಸುದಿನ’ವು ಚುನಾವಣೆಯ ಮುನ್ನಾ ದಿನವಾದ ಶುಕ್ರವಾರ ಭೇಟಿ ನೀಡಿದಾಗ ಕಂಡು ಬಂದ ಒಟ್ಟು ಚಿತ್ರಣವಿದು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಆಯ್ದ ಕೆಲವು ಮತಗಟ್ಟೆಗಳನ್ನು ಸಂಪೂರ್ಣ ಮಹಿಳಾಸ್ನೇಹಿ ಮತಗಟ್ಟೆಯನ್ನಾಗಿ ರೂಪಿಸುವಂತೆ ಚುನಾವಣಾ ಆಯೋಗ ಸಲಹೆ ನೀಡಿತ್ತು. ಆಯೋಗದ ಸಲಹೆಯಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತವೂ ಸಿದ್ಧತೆ ನಡೆಸಿದ್ದು, ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಮೂರು ಮತಗಟ್ಟೆಗಳನ್ನು ಮಹಿಳಾಸ್ನೇಹಿಯಾಗಿ ರೂಪಿಸಲಾಗಿದೆ. ಬಿಜೈ ಕಾಪಿಕಾಡ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಉರ್ವ ಸಂತ ಅಲೋಶಿಯಸ್‌ ಹಿಪ್ರಾ ಶಾಲೆ, ಬಲ್ಮಠ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ತೆರೆಯಲಾದ ಮತಗಟ್ಟೆಗಳನ್ನು ಸಂಪೂರ್ಣ ಮಹಿಳಾ ಸ್ನೇಹಿಯಾಗಿ ಅಲಂಕರಿಸಲಾಗಿದೆ.

ಪಿಂಕ್‌ ಬಣ್ಣದ ಸ್ವಾಗತ
ಈ ಮೂರೂ ಮತಗಟ್ಟೆಗಳಿಗೆ ಬರುವ ಮತದಾರರನ್ನು ಸ್ವಾಗತಿಸಲು ಪ್ರವೇಶದ್ವಾರವನ್ನು ಪಿಂಕ್‌ ಬಣ್ಣದಲ್ಲಿ ಅಲಂಕರಿಸಲಾಗಿದೆ. ತಿಳಿ ಪಿಂಕ್‌ ಬಣ್ಣದ ಗುಲಾಬಿಯ ಚಿತ್ರ, ಮತದಾನದ ಹಕ್ಕಿನ ಬಗ್ಗೆ ಮಹಿಳೆಯರು ಅರಿವು ಮೂಡಿಸುತ್ತಿರುವ ಚಿತ್ರಣವನ್ನು ಈ ದ್ವಾರದಲ್ಲಿ ಬಿಂಬಿಸಲಾಗಿದೆ. ರಸ್ತೆ ಬದಿಯಲ್ಲಿ ದೊಡ್ಡದಾಗಿ ಈ ಪ್ರವೇಶದ್ವಾರವನ್ನು ಅಲಂಕರಿಸಲಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿವೆ.

ಬಲೂನು ಅಲಂಕಾರ
ಮಹಿಳಾಸ್ನೇಹಿ ಮತಗಟ್ಟೆಯ ಒಳಗಡೆ ಸುತ್ತಲೂ ತಿಳಿ ಪಿಂಕ್‌ ಬಣ್ಣದ ಅಲಂಕಾರಿಕ ಬಟ್ಟೆ ಮತ್ತು ತಿಳಿ ಪಿಂಕ್‌ ಬಣ್ಣದ ಬಲೂನಿನಿಂದ ಅಲಂಕರಿಸಲಾಗಿದೆ. ಇವಿಎಂ ಮೆಶಿನ್‌ ಇಟ್ಟಿರುವ ಟೇಬಲ್‌, ಅಧಿಕಾರಿಗಳು ಕುಳಿತುಕೊಳ್ಳುವ ಚಯರ್‌ ಮತ್ತು ಟೇಬಲ್‌ಗ‌ಳನ್ನೂ ಪಿಂಕ್‌ ಬಣ್ಣದಿಂದ ಶೃಂಗರಿಸಲಾಗಿದೆ.

Advertisement

ಪ್ರಥಮ ಪ್ರಯತ್ನ
ಪಿಂಕ್‌ ಬಣ್ಣವು ಮಹಿಳಾ ಸಶಕ್ತೀಕರಣದ ಸಂಕೇತ ವಾಗಿದ್ದು, ಮಹಿಳಾಪ್ರಿಯ ಬಣ್ಣವೂ ಹೌದು. ಈ ಮತಗಟ್ಟೆಯಲ್ಲಿ ಭದ್ರತಾ ಸಿಬಂದಿ, ಪೊಲೀಸರು ಸಹಿತ ಎಲ್ಲ ಸಿಬಂದಿ ಮಹಿಳೆಯರೇ ಆಗಿರುತ್ತಾರೆ. ಮಹಿಳೆ ಯರನ್ನು ಮತದಾನಕ್ಕೆ ಸೆಳೆಯಲೆಂದು ಅವರಿಷ್ಟದ ಪಿಂಕ್‌ ಬಣ್ಣದಲ್ಲಿ ಮತಗಟ್ಟೆಗಳನ್ನು ಅಲಂಕರಿಸಿ ಅದಕ್ಕೆ ‘ಮಹಿಳಾಸ್ನೇಹಿ’ ಮತಗಟ್ಟೆ ಎಂದು ಹೆಸರಿಟ್ಟಿರುವುದು ರಾಜ್ಯದ ಚುನಾವಣಾ ಇತಿಹಾಸದಲ್ಲೇ ಇದು ಮೊದಲು.

ಉರ್ವ ಸೈಂಟ್‌ ಅಲೋಶಿಯಸ್‌ ಶಾಲೆಯ ಮತದಾನ ಕೇಂದ್ರದ ಮತಗಟ್ಟೆ ಅಧಿಕಾರಿ ಕಿರಣ್‌ ಹೇಳುವ ಪ್ರಕಾರ, ಪಿಂಕ್‌ ಬಣ್ಣದಲ್ಲಿ ಮತಗಟ್ಟೆಯನ್ನು ಅಲಂಕಾರ ಮಾಡಿರುವುದು ಮಹಿಳಾಸ್ನೇಹಿ ವಾತಾವರ ಣವನ್ನು ಕಲ್ಪಿಸುತ್ತದೆ. ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ.

ಪಿಂಕ್‌ ಸೀರೆಯಲ್ಲಿ ಮಹಿಳಾ ಅಧಿಕಾರಿಗಳು
ಪಿಂಕ್‌ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿ ಸಹಿತ ಆರು ಮಂದಿ ಅಧಿಕಾರಿಗಳೂ ಮಹಿಳೆಯರೇ ಆಗಿರುತ್ತಾರೆ. ಈ ಎಲ್ಲ ಅಧಿಕಾರಿಗಳು ಪಿಂಕ್‌ ಬಣ್ಣದ ಸೀರೆ ಉಟ್ಟು ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬಿಜೈ ಕಾಪಿಕಾಡ್‌ ಸ.ಹಿ.ಪ್ರಾ. ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಶುಕ್ರವಾರವೇ ಮಹಿಳಾ ಅಧಿಕಾರಿಗಳು ಪಿಂಕ್‌ ಬಣ್ಣದ ಸೀರೆ ಧರಿಸಿ ಬಂದಿದ್ದರು. ‘ಮೊದಲ ಬಾರಿಗೆ ಚುನಾವಣಾ ಆಯೋಗವು ಮತದಾನ ಕೇಂದ್ರಗಳನ್ನು ಮಹಿಳಾಸ್ನೇಹಿಯಾಗಿಸಿದೆ. ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳತ್ತ ಸೆಳೆಯಲು ಇದೊಂದು ಅತ್ಯುತ್ತಮ ವಿಧಾನ. ನಮಗೂ ಉತ್ಸಾಹದಿಂದ ಕೆಲಸ ಮಾಡಲು ಪಿಂಕ್‌ ಮತಗಟ್ಟೆಗಳು ಸ್ಫೂರ್ತಿ ನೀಡುತ್ತಿದೆ’ ಎನ್ನುತ್ತಾರೆ ಬಿಜೈ ಕಾಪಿಕಾಡ್‌ ಹಿ.ಪ್ರಾ. ಶಾಲೆಯಲ್ಲಿರುವ ಮತಗಟ್ಟೆಯ ಅಧಿಕಾರಿ ಕೆ. ಪುಷ್ಪಾ.

Advertisement

Udayavani is now on Telegram. Click here to join our channel and stay updated with the latest news.

Next