ರೋಟರ್‌ಡ್ಯಾಮ್: ಚೊಚ್ಚಲ ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ಭಾರತದ ವನಿತೆಯರು ತೃತೀಯ ಸ್ಥಾನ ಪಡೆದರು. ಅಮೆರಿಕ ವಿರುದ್ಧ ರೋಟರ್‌ಡ್ಯಾಮ್‌ನಲ್ಲಿ ನಡೆದ ಸೆಕೆಂಡ್ ಲೆಗ್ ಪಂದ್ಯವನ್ನು 4-0 ಗೋಲುಗಳಿಂದ ಗೆಲ್ಲುವ ಮೂಲಕ ಭಾರತ ಈ ಸ್ಥಾನ ಸಂಪಾದಿಸಿತು.
ಆರ್ಜೆಂಟೀನಾ ಬಹಳ ಮೊದಲೇ ಪ್ರಶಸ್ತಿ ಜಯಿಸಿತ್ತು. ನೆದರ್ಲೆಂಡ್ಸ್ ದ್ವಿತೀಯ ಸ್ಥಾನಿಯಾಯಿತು.
ಸತತ ಎರಡನೇ ಜಯ :
ಅಮೆರಿಕ ವಿರುದ್ಧ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯವನ್ನು ಭಾರತ 4-2 ಅಂತರದಿಂದ ಜಯಿಸಿತ್ತು. ಮರು ಪಂದ್ಯ ದಲ್ಲಿ ಇದಕ್ಕೂ ಮಿಗಿಲಾದ ಪ್ರದರ್ಶನ ನೀಡಿತು. ವಂದನಾ ಕಟಾರಿಯಾ 2 ಗೋಲು ಬಾರಿಸಿ ಮಿಂಚಿ ದರು (39ನೇ ಹಾಗೂ 54ನೇ ನಿಮಿಷ). ಸೋನಿಕಾ (42ನೇ ನಿಮಿಷ) ಮತ್ತು ಸಂಗೀತಾ ಕುಮಾರಿ (58ನೇ ನಿಮಿಷ) ಒಂದೊಂದು ಗೋಲು ಹೊಡೆದರು.
ವಿಶ್ವಕಪ್‌ಗೆ ಆತ್ಮವಿಶ್ವಾಸ :
ಎರಡೂ ಕಡೆಗಳಿಂದಲೂ ಪೆನಾಲ್ಟಿ ಕಾರ್ನರ್ ಅವಕಾಶ ವ್ಯರ್ಥ ವಾಗುತ್ತ ಹೋಯಿತು. ಆದರೂ 4 ಗೋಲುಗಳನ್ನು ಬಾರಿಸಿ ಮಿಂಚಿದ ಭಾರತ ವನಿತಾ ವಿಶ್ವಕಪ್ ಹಾಕಿ ಪಂದ್ಯಾವಳಿಗೆ ಹೊಸ ಆತ್ಮವಿಶ್ವಾಸ ದೊಂದಿಗೆ ಸಜ್ಜಾಯಿತು.