Advertisement

ನಿನಗೆ ಬೇರೆ ಹೆಸರು ಬೇಕೇ.. ಸ್ತ್ರೀ ಎಂದರೆ ಅಷ್ಟೇ ಸಾಕೆ..!

11:57 AM Mar 08, 2021 | Team Udayavani |

ಭಾರತೀಯ ಸಂಸ್ಕೃತಿ ಅತೀ ಎತ್ತರದ ಸ್ಥಾನದಲ್ಲಿ ಹೆಣ್ಣನ್ನು ಬಿಂಬಿಸಿದೆ. ಪೂಜನೀಯ ಭಾವದಲ್ಲಿ ಪೂಜಿಸಿದೆ. ಒಬ್ಬ ಮಹಿಳೆ ಕೇವಲ ಸೇವೆ ಮಾಡುವ ದಾಸಿಯಲ್ಲ. ಆದರೂ ಆಕೆ ತನ್ನ ಮನೆ ಗಂಡ ಮಕ್ಕಳು ಎಂದು ಸಂಬಳವಿಲ್ಲದೆ ದುಡಿಯುತ್ತಾಳೆ. ಅವಳ ಪ್ರಪಂಚ ಅಷ್ಟಕ್ಕೇ ಸೀಮಿತವಾಗಿರುತ್ತದೆ. ಆಧುನಿಕ ಸ್ಪರ್ಶ ಎಲ್ಲೆಡೆಯಿದ್ದರೂ ಕೂಡ ಹೆಣ್ಣಿನ ಪ್ರೀತಿ, ಮಮತೆ, ಕಾಳಜಿ ತುಂಬುವ ರೀತಿಯಲ್ಲಿ ಕೊಂಚವೂ ವ್ಯತ್ಯಾಸವಾಗಿಲ್ಲ.

Advertisement

ಇವತ್ತಿಗೂ ಎಷ್ಟೋ ಮಹಿಳೆ ಅಡುಗೆ ಮನೆ ಎನ್ನುವ ಪುಟ್ಟ ಪ್ರಪಂಚದಲ್ಲಿಯೇ ಸಂತೋಷ ಕಾಣುತ್ತಿದ್ದಾರೆ. ಜೊತೆಗೆ ಪತಿಯನ್ನು ಅನುಸರಿಸಿ ಅವರ ಏಳಿಗೆಗೆ ಬದುಕುವ ಶಿರೋಮಣಿಯರು ಇದ್ದಾರೆ. ಎಲ್ಲೋ ಒಂದು ಕಡೆ ಸಂಬಂಧಗಳ ಮೌಲ್ಯ ಅರಿಯದವರು ಇದ್ದಾರೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಮಹಿಳೆಯರು ಬದಲಾಗಿದ್ದಾರೆ ಎಂದಲ್ಲ. ತಾಯಿ, ತಂಗಿ, ಹೆಂಡತಿಯ ಪಾತ್ರದಲ್ಲಿ ಎಲ್ಲರ ಬದುಕಿನಲ್ಲಿ ಬೆರೆತು ಹೋಗಿದ್ದಾರೆ.

ಆದರೆ ಪ್ರತಿಯೊಬ್ಬ ಮಹಿಳೆಯರು ದಿನ ಬೆಳಗಾದರೆ ಬದುಕಿನ ಸಂತೋಷಕ್ಕೆ ಶ್ರಮಿಸುತ್ತಾಳೆ. ಪುರುಷ ಮನೆಯ ಹೊರಗೆ ದುಡಿದರೆ ಮಹಿಳೆ ನಾಲ್ಕು ಗೋಡೆಯ ಮಧ್ಯೆಯೇ ಸುಂದರವಾದ ಬದುಕನ್ನು ತನ್ನವರಿಗೋಸ್ಕರ ಕಟ್ಟುತ್ತಾಳೆ. ಅಲ್ಲಿ ನಾನು ನನ್ನದು ಎನ್ನುವ ಸ್ವಾರ್ಥವಿಲ್ಲ. ಬದಲಾಗಿ ನನ್ನವರು ಎನ್ನುವ ಭಾವವಿದೆ. ಇಂದು ನಾವು ಘಂಟಾಘೋಷವಾಗಿ ಕೂಗಿ ಹೇಳುವ ಸಾಧನೆ ಮಾಡಿದ ಮಹಿಳೆಯರ ಪಟ್ಟಿ ಸ್ವಲ್ಪವಾದರೂ, ತನ್ನ ಪತಿ, ಮಕ್ಕಳ ಸಾಧನೆಯ ಹಿಂದೆ ಹೆಣ್ಣಿನ ಪಾತ್ರ ಅಗಾಧ. ಆ ಸಾಧನೆಗೆ ತಾನು ಕಾರಣಕರ್ತಳು ಎನ್ನುವುದು ಅರಿವಿದ್ದರೂ ಕೂಡ, ಮರೆಯಲ್ಲಿ ನಿಂತು ಖುಷಿ ಪಡುತ್ತಾಳೆ. ಅವಳ ಹೆಸರು ಎಲ್ಲೂ ಬಹಿರಂಗಗೊಳ್ಳುವುದಿಲ್ಲ.

ಇದನ್ನೂ ಓದಿ: ಹೆಣ್ಣು ಮತ್ತಷ್ಟುಸಾಧನೆ ಮಾಡಿ; ಇತಿಹಾಸ ಬರೆಯಲಿ

ಇವತ್ತಿಗೂ ಹಳ್ಳಿ ಪ್ರದೇಶಗಳತ್ತ ಕಣ್ಣಾಯಿಸಿದರೆ ಮಹಿಳೆ ಗೆ ಸಿಗಬೇಕಾದ ಕನಿಷ್ಠ ಸ್ವಾತಂತ್ರ್ಯವೂ ಸಿಗದೇ ಇರುವುದು ವಿಪರ್ಯಾಸ. ಇನ್ನು ಮಹಿಳೆ ಎಷ್ಟೇ ಸಾಧನೆ ಮಾಡಿದ್ದರೂ, ಎಷ್ಟೇ ಆರ್ಥಿಕವಾಗಿ, ರಾಜಕೀಯ ಹಾಗೂ ಸಾಮಾಜಿಕವಾಗಿ ಮುಂದೆ ಇದ್ದರೂ ಕೂಡ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಬದುಕುವುದು ಅನಿರ್ವಾಯವೂ ಕೂಡ. ಪ್ರತಿ ಪುರುಷನ ಜೀವನದಲ್ಲೂ  ಮಹಿಳೆಯರ ಪಾತ್ರ ಅಗಾಧವಾದದ್ದು. ಬದುಕು ಮಹಿಳೆಗೆ ಎಲ್ಲವನ್ನು ಸಂಭಾಳಿಸಿ ಕೊಂಡು ಹೋಗುವ ಜಾಣ್ಮೆಯನ್ನು ಹೇಗೆ ಕೊಟ್ಟಿದೆಯೋ, ಅದೇ ರೀತಿ ಅನಾದಿ ಕಾಲದಿಂದಲೂ ಮಹಿಳೆಯನ್ನು ಎರಡನೇ ಪ್ರಜೆಯಾಗಿಯೇ ಬಿಂಬಿಸಿದೆ.

Advertisement

ಇದನ್ನೂ ಓದಿ:ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಭಾರತದ ನಾರಿ ವಿಶ್ವಕ್ಕೆ ಮಾದರಿಯಾಗಬೇಕಿದೆ

ಈ ಮಹಿಳೆ ಅಬಲೆಯಲ್ಲ. ಆಕೆ ಸಬಲೆಯೆಂದು ಹೇಳುವುದು ಸುಲಭ. ಎಷ್ಟರ ಮಟ್ಟಿಗೆ ಇಡೀ ಸ್ತ್ರೀ ವರ್ಗ ಸಬಲೆಯರಾಗಿದ್ದಾರೆ ಎಂಬುದನ್ನು ಚಿಂತನೆ ಮಾಡುವುದು ಒಳಿತು.  ಒಂದು ಹೆಣ್ಣಿನ ಬದುಕಿನಲ್ಲಿ ಹುಟ್ಟಿದ ಕ್ಷಣದಿಂದ ಸಾಯುವವರೆಗೂ ಅನೇಕ ರೀತಿಯ ಜವಾಬ್ದಾರಿಗಳನ್ನು ಹೊತ್ತು ಸಾಗುತ್ತಾಳೆ.  ಎಲ್ಲವನ್ನು ನಿಭಾಯಿಸಿಕೊಂಡು ಹೋಗುವ ನಿಪುಣತೆ ಪುರುಷನಿಗೆ ಇಲ್ಲ.

ಬದುಕಿನ ದಾರಿಯಲ್ಲಿ ಎಷ್ಟೇ ನೋವು ಉಂಡರೂ ಅಳುವನ್ನು ಮರೆಮಾಚಿ, ನಗು ಮೊರೆ ಚೆಲ್ಲುವ ಆಕೆಗೆ ಬೇರೊಂದು ಹೆಸರು ಕೊಡಲು ಸಾಧ್ಯವೇ ಇಲ್ಲ. ಅಂದಹಾಗೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಎಲ್ಲರೂ ಆಚರಿಸುತ್ತಾರೆ. ಒಂದು ದಿನದ ಆಚರಣೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದ್ದಕ್ಕೆ ಸೀಮಿತವಾಗಿದೆ ಎಂದರೆ ತಪ್ಪಾಗಲಾರದು. ಈ ಆಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದಿರಲಿ. ಹೆಣ್ಣು ಮಕ್ಕಳ ಬದುಕಿನ ಆಸೆಯನ್ನು ಪೂರೈಸುತ್ತಾ, ಅವರ ಯಶಸ್ಸಿಗೆ ಪುರುಷರ ಸಹಕಾರವಿದ್ದರೆ, ಈ ಮಹಿಳಾ ದಿನಾಚರಣೆಯು ಸರಿಯಾದ ಅರ್ಥವನ್ನೂ ಉಳಿಸಿಕೊಳ್ಳುತ್ತದೆ. ಎಲ್ಲಾ ಹಂತದಲ್ಲೂ ಜೊತೆಯಾಗಿ ನಿಲ್ಲುವ ನಿನಗೆ ಬೇರೆ ಹೆಸರು ಬೇಕೇ, ಸ್ತ್ರೀ ಎಂದರೆ ಅಷ್ಟೇ ಸಾಕೇ.

ಸಾಯಿನಂದಾ ಚಿತ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next