ಸಿಲ್ಹಟ್: ನಾಲ್ಕು ಬಾರಿ ಫೈನಲ್ ಪ್ರವೇಶ ಮಾಡಿದರೂ ಏಷ್ಯಾಕಪ್ ಗೆಲ್ಲಲಾಗದೆ ಹತಾಷೆ ಅನುಭವಿಸಿದ್ದ ಲಂಕಾ ವನಿತಾ ತಂಡ ಒಂದೆಡೆಯಾದರೆ, ನಾಲ್ಕು ಬಾರಿಯೂ ಲಂಕಾವನ್ನು ಮಣಿಸಿರುವ ಭಾರತ ಒಂದೆಡೆ. 2022ರ ವನಿತಾ ಏಷ್ಯಾಕಪ್ ಫೈನಲ್ ಮತ್ತೆ ಭಾರತ- ಲಂಕಾ ತಂಡಗಳ ಮುಖಾಮುಖಿಗೆ ಸಾಕ್ಷಿಯಾಗಿದೆ.
ಬಾಂಗ್ಲಾದೇಶದ ಸಿಲ್ಹಟ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಚಾಮರಿ ಅತ್ತಪಟ್ಟು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
2004ರಲ್ಲಿ ವನಿತಾ ಏಷ್ಯಾ ಕಪ್ ಪಂದ್ಯಾವಳಿ ಆರಂಭವಾದಂದಿ ನಿಂದಲೂ ಭಾರತವೇ ಪ್ರಭುತ್ವ ಸ್ಥಾಪಿಸುತ್ತ ಬಂದಿರುವುದು ಉಲ್ಲೇಖನೀಯ. ಸತತ 6 ಸಲ ಪ್ರಶಸ್ತಿ ಎತ್ತಿ ಹಿಡಿದದ್ದು ಭಾರತೀಯ ಮಹಿಳೆಯರ ಅಸಾಮಾನ್ಯ ಸಾಧನೆಯಾಗಿದೆ. 4 ಏಕದಿನ, 2 ಟಿ20 ಪ್ರಶಸ್ತಿಗಳು ಭಾರತದ ಶೋಕೇಸನ್ನು ಅಲಂಕರಿಸಿವೆ. ಆದರೆ 2018ರ ಟೂರ್ನಿ ಸತತ 7ನೇ ಪ್ರಶಸ್ತಿಗೆ ಅಡ್ಡಿಯಾಯಿತು. ಇಲ್ಲಿ ಬಾಂಗ್ಲಾದೇಶ 3 ವಿಕೆಟ್‌ಗಳಿಂದ ಗೆದ್ದು ದೊಡ್ಡದೊಂದು ಏರುಪೇರಿಗೆ ಕಾರಣವಾಯಿತು.
ಇದನ್ನೂ ಓದಿ:ನಾವೇ ಶಸ್ತ್ರಾಸ್ತ್ರ ಹಿಡಿದು ಉಗ್ರರನ್ನು ಸೆದೆ ಬಡಿಯುತ್ತೇವೆ: ಪಾಕ್ ವಿರುದ್ಧ ಜನಾಕ್ರೋಶ
ಹಿಂದಿನ ನಾಲ್ಕೂ ಫೈನಲ್‌ಗಳಲ್ಲಿ ಲಂಕಾ ಸಾಧನೆ ರನ್ನರ್ ಅಪ್ ಪ್ರಶಸ್ತಿಗೆ ಸೀಮಿತವಾಗಿದೆ. ಈ ನಾಲ್ಕರಲ್ಲೂ ಅದು ಶರಣಾದದ್ದು ಭಾರತಕ್ಕೆ ಎಂಬುದನ್ನು ಮರೆಯುವಂತಿಲ್ಲ. ಈ ಬಾರಿಯಾದರೂ ಗೆದ್ದು ಮೊದಲ ಸಲ ಏಷ್ಯಾ ಕ್ರಿಕೆಟ್ ಪಟ್ಟ ಅಲಂಕರಿಸುವುದು ಲಂಕಾ ವನಿತೆಯರ ಗುರಿ. ಇದಕ್ಕೆ ಅವರ ಪುರುಷ ತಂಡವೇ ಸ್ಫೂರ್ತಿ. ಕೇವಲ ಒಂದು ತಿಂಗಳ ಹಿಂದೆ ಪಾಕಿಸ್ಥಾನವನ್ನು 23 ರನ್ನುಗಳಿಂದ ಸೋಲಿಸುವ ಮೂಲಕ ಲಂಕಾ ಪುರುಷರ ತಂಡ ಏಷ್ಯಾ ಚಾಂಪಿಯನ್ ಆಗಿ ಮೂಡಿ ಬಂದಿತ್ತು. ಎರಡೂ ಪ್ರಶಸ್ತಿಗಳು ದ್ವೀಪರಾಷ್ಟ್ರದ ಪಾಲಾಗಬಹುದೇ? ಕುತೂಹಲವಂತೂ ಇದ್ದೇ ಇದೆ.
ತಂಡಗಳು
ಭಾರತ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ದಯಾಲನ್ ಹೇಮಲತಾ, ಹರ್ಮನ್‌ಪ್ರೀತ್ ಕೌರ್ (ನಾ), ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ), ಪೂಜಾ ವಸ್ತ್ರಾಕರ್, ಸ್ನೇಹ್ ರಾಣಾ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಶ್ರೀಲಂಕಾ: ಚಾಮರಿ ಅತಪತ್ತು(ನಾ), ಅನುಷ್ಕಾ ಸಂಜೀವನಿ (ವಿ.ಕೀ), ಹರ್ಷಿತಾ ಮಾದವಿ, ಹಾಸಿನಿ ಪೆರೇರಾ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಮಲ್ಶಾ ಶೆಹಾನಿ, ಓಷಾದಿ ರಣಸಿಂಗ್, ಸುಗಂದಿಕಾ ಕುಮಾರಿ, ಇನೋಕಾ ರಣವೀರ, ಅಚಿನಿ ಕುಲಸೂರ್ಯ.