Advertisement

Women’s Asia Cup ಕ್ರಿಕೆಟ್‌ ಇಂದಿನಿಂದ: ಆರಂಭದಲ್ಲೇ ಭಾರತ-ಪಾಕ್ ಮುಖಾಮುಖಿ

12:03 AM Jul 19, 2024 | Team Udayavani |

ಡಂಬುಲ: ಏಷ್ಯಾದಲ್ಲಿ ವನಿತೆಯರ ಕ್ರಿಕೆಟ್‌ ಪ್ರಭುತ್ವವನ್ನು ಸಾರುವ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾ ವಳಿ ಶುಕ್ರವಾರ ಶ್ರೀಲಂಕಾ ಆತಿಥ್ಯದಲ್ಲಿ ಆರಂಭವಾಗಲಿದೆ. 8 ತಂಡಗಳು ಭಾಗವಹಿಸಲಿದ್ದು, ಎಲ್ಲ ಪಂದ್ಯಗಳು ಡಂಬುಲದಲ್ಲಿ ನಡೆಯಲಿವೆ. ಭಾರತ- ಪಾಕಿಸ್ಥಾನ ಆರಂಭದಲ್ಲೇ ಮುಖಾ ಮುಖಿ ಆಗುವ ಮೂಲಕ ಕೂಟದ ರೋಮಾಂಚನ ಮೊದಲ ದಿನವೇ ಗರಿಗೆದರುವುದರಲ್ಲಿ ಅನುಮಾನವಿಲ್ಲ. ಉದ್ಘಾಟನ ಪಂದ್ಯದಲ್ಲಿ ಯುಎಇ- ನೇಪಾಲ ಎದುರಾಗಲಿವೆ.

Advertisement

ಏಷ್ಯಾ ಕಪ್‌ ಅಂದರೆ ಅದು ಭಾರತೀಯ ನಾರಿಯರ ಸ್ವತ್ತು ಎಂಬಷ್ಟರ ಮಟ್ಟಿಗೆ ಖ್ಯಾತಿ ಗಳಿಸಿದೆ. ಈವರೆಗಿನ 8 ಏಷ್ಯಾ ಕಪ್‌ ಕೂಟಗಳಲ್ಲಿ 7 ಸಲ ಚಾಂಪಿಯನ್‌ ಆಗಿ ಮೂಡಿ ಬಂದಿರುವುದೇ ಇದಕ್ಕೆ ಸಾಕ್ಷಿ. ಇದ ರಲ್ಲಿ ಏಕದಿನ ಮಾದರಿಯ ಎಲ್ಲ 4 ಪಂದ್ಯಾವಳಿಗಳಲ್ಲೂ ಭಾರತವೇ ಪ್ರಶಸ್ತಿ ಎತ್ತಿತ್ತು. ಹಾಗೆಯೇ 4 ಟಿ20 ಮಾದರಿಗಳ ಟೂರ್ನಿಯ ವೇಳೆ ಮೂರರಲ್ಲಿ ಚಾಂಪಿಯನ್‌ ಆಗಿತ್ತು. ಒಮ್ಮೆ ಮಾತ್ರ ಬಾಂಗ್ಲಾದೇಶ ವಿರುದ್ಧ ಪ್ರಶಸ್ತಿ ಸಮರದಲ್ಲಿ ಸೋಲು ಕಂಡಿತ್ತು. ಅರ್ಥಾತ್‌, ಈವರೆಗಿನ ಎಲ್ಲ 8 ಕೂಟಗಳಲ್ಲೂ ಭಾರತ ಫೈನಲ್‌ ತಲುಪಿತ್ತು.

ಏಷ್ಯಾ ಕಪ್‌ ಟಿ20 ಮಾದರಿಯಲ್ಲಿ ಆಡಿದ 20 ಪಂದ್ಯಗಳಲ್ಲಿ ಭಾರತ 17ರಲ್ಲಿ ಜಯಭೇರಿ ಮೊಳಗಿಸಿದೆ. 2022ರ ಕೂಟದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್‌ ಆಗಿತ್ತು.

ಪಾಕ್‌ ವಿರುದ್ಧ ಉತ್ತಮ ದಾಖಲೆ
ಪಾಕಿಸ್ಥಾನ ವಿರುದ್ಧವೂ ಭಾರತದ ದಾಖಲೆ ಅಮೋಘ ಮಟ್ಟದಲ್ಲಿದೆ. 14 ಟಿ20 ಪಂದ್ಯಗಳಲ್ಲಿ 11ರಲ್ಲಿ ಗೆಲುವು ಸಾಧಿಸಿದೆ. ಏಷ್ಯಾ ಕಪ್‌ನಲ್ಲಿ ಒಟ್ಟು 6 ಸಲ ಮುಖಾಮುಖೀಯಾಗಿದ್ದು, ಭಾರತ ಐದನ್ನು ಗೆದ್ದಿದೆ. ಈ ಸಲವೂ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ.ಏಷ್ಯಾ ಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಹರ್ಮನ್‌ಪ್ರೀತ್‌ ಕೌರ್‌ 5 ಸಲ ಭಾರತವನ್ನು ಮುನ್ನಡೆಸಿದ್ದು, ನಾಲ್ಕರಲ್ಲಿ ಜಯ ಸಾಧಿಸಿದ್ದಾರೆ. ಒಂದು ಗೆಲುವು ಮಿಥಾಲಿ ರಾಜ್‌ ನಾಯಕತ್ವದಲ್ಲಿ ಒಲಿದಿದೆ.

ಭಾರತ ಇತ್ತೀಚೆಗೆ ತವರಿನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿತ್ತು. 3 ಪಂದ್ಯಗಳ ಟಿ20 ಸರಣಿಯನ್ನು 1-1ರಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನೊಂದೆಡೆ ಪಾಕಿಸ್ಥಾನ ತಂಡ ಇಂಗ್ಲೆಂಡ್‌ಗೆ ಪ್ರವಾಸ ಗೈದು ಅಲ್ಲಿ 3-0 ಮುಖಭಂಗ ಅನುಭವಿಸಿ ಬಂದಿದೆ.

Advertisement

ಅಮೋಘ ಫಾರ್ಮ್
ಭಾರತದ ಎಲ್ಲ ಆಟಗಾರ್ತಿಯರೂ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅದರಲ್ಲೂ ಸ್ಮೃತಿ ಮಂಧನಾ ಫಾರ್ಮ್ ಅಂತೂ ಅಮೋಘ. ಇವರ ಜತೆಗಾರ್ತಿ ಶಫಾಲಿ ವರ್ಮ ಕೂಡ ಉತ್ತಮ ಲಯದಲ್ಲಿದ್ದಾರೆ. ಶಫಾಲಿ ಸಿಡಿದು ನಿಂತರೆ ದೊಡ್ಡ ಮೊತ್ತ ದಾಖ ಲಾಗುವುದರಲ್ಲಿ ಅನುಮಾನವಿಲ್ಲ.
ನಾಯಕಿ ಕೌರ್‌, ಜೆಮಿಮಾ ರೋಡ್ರಿಗಸ್‌, ರಿಚಾ ಘೋಷ್‌ ಮಧ್ಯಮ ಕ್ರಮಾಂಕವನ್ನು ಆಧರಿಸಲು ಶಕ್ತರು.

ಬೌಲಿಂಗ್‌ನಲ್ಲಿ ಪೇಸ್‌ ಹಾಗೂ ಸ್ಪಿನ್‌ ವಿಭಾಗಗಳೆರಡೂ ಬಲಿಷ್ಠ. ಪೂಜಾ ವಸ್ತ್ರಾಕರ್‌, ರಾಧಾ ಯಾದವ್‌, ಶ್ರೇಯಾಂಕಾ ಪಾಟೀಲ್‌, ಆಲ್‌ರೌಂಡರ್‌ ದೀಪ್ತಿ ಶರ್ಮ ಭಾರತದ ಬೌಲಿಂಗ್‌ ಅಸ್ತ್ರವಾಗಿದ್ದಾರೆ.

ನಿದಾ ದರ್‌ ಮೇಲೆ ವಿಶ್ವಾಸ
ಇಂಗ್ಲೆಂಡ್‌ನ‌ಲ್ಲಿ ಸೋಲನುಭವಿಸಿ ಬಂದರೂ ನಿದಾ ದರ್‌ ಅವರನ್ನು ಪಾಕಿಸ್ಥಾನ ತಂಡದ ನಾಯಕಿಯಾಗಿ ಉಳಿಸಿಕೊಳ್ಳಲಾಗಿದೆ. ಇರಮ್‌ ಜಾವೇದ್‌, ಒಮೈಮಾ ಸೊಹೈಲ್‌, ಸಯ್ಯದ್‌ ಅರೂಬ್‌ ಶಾ ಈ ವರ್ಷ ಯಾವುದೇ ಪಂದ್ಯವಾಡಿಲ್ಲ. ತಸ್ಮಿಯಾ ರುಬಾಬ ಸೇರಿದಂತೆ 6 ಆಟಗಾರ್ತಿಯರನ್ನು ಕೈಬಿಡಲಾಗಿದೆ.

ಭಾರತದ ಪಂದ್ಯಗಳ ವೇಳಾಪಟ್ಟಿ
ಜು. 19 ಭಾರತ – ಪಾಕಿಸ್ಥಾನ
ಜು. 21 ಭಾರತ – ಯುಎಇ
ಜು.23 ಭಾರತ – ನೇಪಾಲ

Advertisement

Udayavani is now on Telegram. Click here to join our channel and stay updated with the latest news.

Next