Advertisement

ಸಿನೆಮಾ ರಂಗದ ಆಸೆ ಹುಟ್ಟಿಸಿ ದುಬಾೖಗೆ ಮಹಿಳಾ ಕಳ್ಳ ಸಾಗಾಣಿಕೆ: ನಾಲ್ವರ ಬಂಧನ

08:27 PM Apr 07, 2022 | Team Udayavani |

ಬೆಂಗಳೂರು: ದುಬಾೖಯ ಸಿನೆಮಾ ರಂಗದಲ್ಲಿ ದುಡಿದರೆ ಹೆಚ್ಚು ಹಣ ಸಂಪಾದಿಸಬಹುದು ಎಂದು ದಕ್ಷಿಣ ಭಾರತದ ಸಿನೆಮಾ ರಂಗದ  ಮಹಿಳಾ  ಕಲಾವಿದರನ್ನು ಪುಸಲಾಯಿಸಿ ವಿದೇಶಕ್ಕೆ ಕಳುಹಿಸಿ ಅಕ್ರಮ ಚಟುವಟಿಕೆಗೆ ದೂಡುತ್ತಿದ್ದ ಬೃಹತ್‌ ಜಾಲವನ್ನು ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣ ದಳ ವಿಭಾಗ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದೆ.

Advertisement

ತಮಿಳುನಾಡಿನ ನಾಲ್ವರು ಮತ್ತು ಕರ್ನಾಟಕ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಪ್ಪಳ ತಾಲೂಕಿನ ಬಸವರಾಜು ಶಂಕರಪ್ಪ ಕಳಸದ್‌ (47), ಮೈಸೂರಿನ ನಜರಾಬಾದ್‌ನ ಆದರ್ಶ್‌ ಅಲಿಯಾಸ್‌ ಆದಿ (27), ತಮಿಳುನಾಡಿನ ಎಡಪಾಡಿ ನಿವಾಸಿ ರಾಜೇಂದ್ರ ನಾಚಿಮುತ್ತು (37), ಚೆನ್ನೈ ಮಾರಿಯಪ್ಪನ್‌ (44), ಟಿ.ಅಶೋಕ್‌ (29), ರಾಜೀವ್‌ಗಾಂಧಿ (35) ಮತ್ತು ಜೆ.ಪಿ.ನಗರದ ಆರ್‌.ಚಂದು (20) ಬಂಧಿತರು.

ಆರೋಪಿಗಳ ಪೈಕಿ ಪ್ರಕರಣದ ಮಾಸ್ಟರ್‌ ಮೈಂಡ್‌ ಬಸವರಾಜು ಶಂಕರಪ್ಪ ಕಳಸದ್‌ ವಿರುದ್ಧ 2020ರಲ್ಲಿ ನಂದಿನಿ ಲೇಔಟ್‌ ಠಾಣೆಯಲ್ಲಿ ಕೆಲವು ಮಹಿಳೆಯರಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ, ಅಲ್ಲಿನ ಡ್ಯಾನ್ಸ್‌ ಬಾರ್‌ಗಳಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ. ಜಾಮೀನು ಪಡೆದು ಹೊರಬಂದಿರುವ ಆರೋಪಿ, ಈಗ ಮತ್ತೆ ಅದೇ ದಂಧೆಯಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದರು.

ಆರೋಪಿಗಳು ಇತ್ತೀಚೆಗೆ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿರುವ ಮಹಿಳಾ ಕಲಾವಿದೆಗೆ ದುಬಾೖಯಲ್ಲಿ ಕೆಲಸ ಮಾಡಿದರೆ ಲಕ್ಷಾಂತರ ರೂ. ಸಂಪಾದಿಸಬಹುದು ಎಂದು ನಂಬಿಸಿ, ಮುಂಗಡ 50 ಸಾವಿರ ರೂ. ನೀಡಿ  ದುಬಾೖಗೆ ಹೋಗಲು ಪಾಸ್‌ಪೋರ್ಟ್‌ ಮತ್ತು ವೀಸಾ ಮಾಡಿಸಿ ಕಳುಹಿಸಿದ್ದರು. ಆದರೆ, ಅಲ್ಲಿ ಬಾರ್‌ನಲ್ಲಿ ಕುಣಿಯುವಂತೆ ಹೇಳಿದ್ದರಿಂದ ಮಹಿಳೆ ವಾಪಸ್‌ ಬಂದು ಆರೋಪಿಗಳ ವಿರುದ್ಧ ಹೆಣ್ಣೂರು ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ರಮಣ ಗುಪ್ತಾ ಹೇಳಿದರು.

ಜಾಲದ ಹಿನ್ನೆಲೆ? :

Advertisement

ಆರೋಪಿಗಳು ದಕ್ಷಿಣ ಭಾರತದ ಸಿನೆಮಾ ರಂಗದ ಜ್ಯೂನಿಯರ್‌ ಆರ್ಟಿಸ್ಟ್‌ ಹಾಗೂ ಈವೆಂಟ್‌ ಮ್ಯಾನೇಜ್‌ಮೆಂಟ್‌, ಆರ್ಟಿಸ್ಟ್‌ ಏಜೆಂಟ್‌, ಡ್ಯಾನ್ಸರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಹಾಗೂ ಪಂಜಾಂಬ್‌ನ ಸಿನೆಮಾ ರಂಗದಲ್ಲಿ ತಮ್ಮೊಂದಿಗೆ ಜ್ಯೂನಿಯರ್‌ ಆರ್ಟಿಸ್ಟ್‌ ಹಾಗೂ ಡ್ಯಾನ್ಸರ್‌ಗಳಾಗಿ ಕೆಲಸ ಮಾಡುವ ಹಾಗೂ ಪರಿಚಯವಿರುವ ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಪತ್ತೆ ಹಚ್ಚುತ್ತಿದ್ದರು. ಬಳಿಕ ವಿದೇಶದ ಸಿನೆಮಾ ರಂಗದಲ್ಲಿ ಕೆಲಸ ಮಾಡಿದರೆ ಲಕ್ಷಾಂತರ ರೂ. ಸಂಪಾದನೆ ಮಾಡಬಹುದೆಂದು ಆಮಿಷ ಒಡ್ಡುತ್ತಿದ್ದರು.

ಅನಂತರ ಪಾಸ್‌ಪೋರ್ಟ್‌ ಇದ್ದವರಿಗೆ ಮುಂಗಡ 50 ಸಾ. ದಿಂದ 1 ಲಕ್ಷ ರೂ.ವರೆಗೆ  ಕೊಡುತ್ತಿದ್ದರು. ಪಾಸ್‌ಪೋರ್ಟ್‌ ಇಲ್ಲವಾದರೆ ಅವರಿಂದಲೇ 50 ಸಾವಿರ ರೂ.ನಿಂದ 75 ಸಾವಿರ ರೂ.ಪಡೆದುಕೊಂಡು, ಪಾಸ್‌ಪೋರ್ಟ್‌ ಮತ್ತು ವೀಸಾ ಕೊಡಿಸಿ, ಅನಂತರ ಅವರ ಖಾತೆಗೂ ಲಕ್ಷಾಂತರ ರೂ. ವರ್ಗಾಯಿಸಿ ದುಬಾೖಗೆ ಕಳುಹಿಸುತ್ತಿದ್ದರು.

ದುಬಾೖಯಲ್ಲಿ ಅವರನ್ನು   ಬಾರ್‌ಗಳಲ್ಲಿ ಡ್ಯಾನ್ಸ್‌ ಮಾಡುವಂತೆ  ಒತ್ತಾಯಿಸಲಾಗಿತ್ತು. ಕೆಲವು ಮಹಿಳೆಯರು ಅನಿವಾರ್ಯವಾಗಿ ನೃತ್ಯ ಮಾಡುತ್ತಿದ್ದರು. ಅಲ್ಲದೆ, ಗ್ರಾಹಕರನ್ನು ಆಕರ್ಷಿಸಬೇಕು. ಗ್ರಾಹಕರು ಕರೆದಾಗ ಶಾಂಪಿಂಗ್‌ಗೆ ಹೋಗಬೇಕು. ಅವರ ಜತೆ ಅನೈತಿಕ ಚಟುವಟಿಕೆಯಲ್ಲಿ ತೊಡಗಬೇಕೆಂದು ಬಲವಂತ ಮಾಡುತ್ತಿದ್ದರು. ಒಂದು ವೇಳೆ ಮಹಿಳೆಯೊಬ್ಬರು ಒಪ್ಪದಿದ್ದರೆ ಮುಂಗಡ ಹಣ ಕೊಡುವಂತೆ ಪೀಡಿಸುತ್ತಿದ್ದರು. ಅದರಿಂದ ಕೆಲ ಮಹಿಳೆಯರು ಅನಿವಾರ್ಯವಾಗಿ ಆರೋಪಿಗಳು ಹೇಳಿದಂತೆ ಕೇಳುತ್ತಿದ್ದರು. ಕೆಲವರು ಅಕ್ರಮ ಚಟುವಟಿಕೆಯಲ್ಲಿ ತೊಡಗಲು ಇಷ್ಟವಿಲ್ಲದೆ  ಕರ್ನಾಟಕಕ್ಕೆ ಮರಳಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ಆರೋಪಿಗಳ ಜಾಲಕ್ಕೆ ಸಿಲುಕಿರುವ ನೂರಾರು ಮಂದಿ ಮಹಿಳೆಯರ ಪೈಕಿ 95 ಮಂದಿ ಮಹಿಳೆಯರು ದುಬಾೖಗೆ ಹೋಗಿ ವಾಪಸ್‌ ಬಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಜತೆಗೆ ವಿದೇಶಕ್ಕೆ ಕಳುಹಿಸಲು ಸಿದ್ಧವಾಗಿದ್ದ 17 ಮಹಿಳೆಯರನ್ನು ರಕ್ಷಿಸಿ, ಎಲ್ಲ ಮಹಿಳೆಯರ ಪಾಸ್‌ಪೋರ್ಟ್‌ ಜಪ್ತಿ ಮಾಡಲಾಗಿದೆ. ಅವರ ಬಳಿಯಿದ್ದ 7 ಮೊಬೈಲ್‌ಗಳು, ಒಂದು ಲ್ಯಾಪ್‌ಟಾಪ್‌,  1,06 ಲ.ರೂ.  ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next