ಹೊಸದಿಲ್ಲಿ : ಮುಸ್ಲಿಂ ಸಮುದಾಯದಲ್ಲಿನ ವಿವಾಹವು ಒಂದು ಒಪ್ಪಂದವಾಗಿದ್ದು ಮಹಿಳೆಯು ತನ್ನ ಘನತೆ, ಗೌರವಗಳನ್ನು ರಕ್ಷಿಸಲು ನಿಕಾಹ್‌ನಾಮಾದಲ್ಲಿ ಕೆಲವು ಶರ್ತಗಳಿಗೆ ಹೆಚ್ಚಿನ ಮಹತ್ವ ಕೊಡಬಹುದು. ಆಕೆ ಕೂಡ ತನ್ನ ಪತ್ಯಿ ವಿರುದ್ಧ ತ್ರಿವಳಿ ತಲಾಕ್ ಘೋಷಿಸಬಹುದು ಮತ್ತು ವಿಚ್ಛೇದನ ಪ್ರಕರಣದಲ್ಲಿ ಅತ್ಯಧಿಕ ಮೆಹರ್ ಪಾವತಿಯನ್ನು ಆಗ್ರಹಿಸಬಹುದು ಎಂದು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಇಂದು ಬುಧವಾರ ಸುಪ್ರೀಂ ಕೋರ್ಟಿಗೆ ಹೇಳಿದೆ.
ತ್ರಿವಳಿ ತಲಾಕ್ ಒಂದು ಪಾಪ ಕೃತ್ಯವಾಗಿದ್ದು ಆ ಕೃತ್ಯವನ್ನು ಎಸಗುವ ವ್ಯಕ್ತಿಗೆ ಮುಸ್ಲಿಂ ಸಮುದಾಯದಿಂದ ಬಹಿಷ್ಕಾರ ಹಾಕಬೇಕು ಎಂದು 2017ರ ಎಪ್ರಿಲ್ 14ರಂದು ಕೈಗೊಳ್ಳಲಾದ ಠರಾವಿನ ಪ್ರತಿಯನ್ನು ಮಂಡಳಿಯು ಸುಪ್ರೀಂ ಕೋರ್ಟಿ ಗೆ ತೋರಿಸಿತು.
ನಿಕಾಹ್‌ನಾಮಾದ ಸಂದರ್ಭದಲ್ಲಿ ತ್ರಿವಳಿ ತಲಾಕ್‌ಗೆ ಒಲ್ಲೆನೆಂದು ಹೇಳುವ ಹಕ್ಕು ಮುಸ್ಲಿಂ ಮಹಿಳೆಗೆ ಇದೆಯೇ ಮತ್ತು ಈ ಶರತ್ತನ್ನು ನಿಕಾಹ್‌ನಾಮಾದಲ್ಲಿ ಕಾಣಿಸುವಂತೆ ಎಲ್ಲ ಕಾಝಿಗಳನ್ನು ಕೇಳಿಕೊಳ್ಳಬಹುದೇ ಎಂದು ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆಗೆ ಮಂಡಳಿಯು ಈ ರೀತಿಯ ಉತ್ತರ ನೀಡಿತು. ಮಂಡಳಿಯ ಪರವಾಗಿ ಮಾಜಿ ಕೇಂದ್ರ ಸಚಿವ, ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರು.