Advertisement

ಮಹಿಳಾ ಮೀಸಲಾತಿ ಶೇ. 50 ಹೆಚ್ಚಿಸಿ

06:02 AM Mar 09, 2019 | Team Udayavani |

ಕಲಬುರಗಿ: ಸ್ಥಳೀಯ ಸಂಸ್ಥೆಗಳಲ್ಲಿ ನೀಡಿರುವ ಮಾದರಿಯಂತೆ ಶಾಸನಸಭೆಗಳಲ್ಲೂ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡಲು ಸರ್ಕಾರಗಳು ಮುಂದಾಗಬೇಕು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.

Advertisement

ಶರಣಬಸವ ವಿಶ್ವವಿದ್ಯಾಲಯದ ಇಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ( ಮಹಿಳಾ) ವಿಭಾಗ, ವ್ಯವಹಾರ ಅಧ್ಯಯನ ವಿಭಾಗದಿಂದ ಇನ್ನರ್‌ವ್ಹಿಲ್‌ ಕ್ಲಬ್‌ ಆಫ್‌ ಗುಲ್ಬರ್ಗಾ ಸನ್‌ಸಿಟಿ ಸಹಯೋಗದೊಂದಿಗೆ ಶುಕ್ರವಾರ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ
ಅಪ್ಪ ಅವರ 48ನೇ ಪುಣ್ಯಸ್ಮರೋಣೋತ್ಸವ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಭಾರತೀಯ ವೀರ ವನಿತೆಯರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಾತೋಶ್ರೀ ಗೋದುತಾಯಿ ಅವ್ವನವರು ದೊಡ್ಡ ವ್ಯಾಪಾರಸ್ಥ ಕುಟುಂಬದಿಂದ ಬಂದರೂ ಇಲ್ಲಿನ ಶರಣ ಪರಂಪರೆಗೆ ಹೊಂದಿಕೊಂಡು ನಿತ್ಯ ಪೂಜೆ, ದಾಸೋಹ ಕಾಯಕದಲ್ಲಿ ನಿರತರಾಗಿರುತ್ತಿದ್ದರು. ಇದು ಅವರ ಸರಳತೆಗೆ ಸಾಕ್ಷಿಯಾಗಿದೆ. ಶರಣಬಸವೇಶ್ವರವಿದ್ಯಾವರ್ಧಕ ಸಂಘ ಸ್ಥಾಪನೆ ಉದ್ದೇಶದ ಹಿಂದೆ ಮಾತೋಶ್ರೀ ಗೋದುತಾಯಿ ಅವ್ವನವರ ಪ್ರೇರಣೆ ಇರ ಬಹುದು ಎಂದರು.

ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತೆ ಮೀರಾ ಪಂಡಿತ ಮಾತನಾಡಿ, ಮಹಿಳೆಗೆ ಮೊದಲು ಅವಮಾನ, ಅಪಮಾನಗಳು ಎದುರಾಗುತ್ತವೆ. ಇವೆಲ್ಲವನ್ನು ಮೆಟ್ಟಿ ನಿಂತಾಗ ಬಹುಮಾನ, ಸನ್ಮಾನ ದೊರಕುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶರಣಬಸವ ವಿವಿ ಕುಲಪತಿ ಡಾ| ನಿರಂಜನ ನಿಷ್ಟಿ ಮಾತನಾಡಿ, ಸ್ತ್ರೀವಾದ ಎನ್ನುವುದು ಇತ್ತೀಚೆಗೆ ನಾವು ಆಮದು ಮಾಡಿಕೊಂಡ ವಿಷಯವಾಗಿದೆ.

Advertisement

ಇದಕ್ಕೂ ಮುಂಚೆಯೇ ನಮ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ಗೌರವ ಕೊಡಲಾಗಿದೆ. ಆದರೆ, ಕೆಲವು ಕಾರಣಗಳಿಂದ ಮಹಿಳಾ ಸಮಾನತೆ ಸಾಧ್ಯವಾಗಿಲ್ಲ. ಶರಣ ಸಂಸ್ಥಾನ ಮತ್ತು ಅದರ ಅಂಗ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ನೀಡಲಾಗಿದೆ ಎಂದು ಹೇಳಿದರು. 

ಇನ್ನರ್‌ವ್ಹಿಲ್‌ ಕ್ಲಬ್‌ ಆಫ್‌ ಗುಲ್ಬರ್ಗಾ ಸನ್‌ ಸಿಟಿ ಅಧ್ಯಕ್ಷೆ ತೃಪ್ತಿ ದೇಸಾಯಿ, ಡೀನ್‌ ಡಾ| ಲಿಂಗರಾಜ ಶಾಸ್ತ್ರೀ ಮಾತನಾಡಿದರು. ಯುದ್ಧರಂಗದಲ್ಲಿ ಹುತಾತ್ಮನರಾದ ಯೋಧರ ಪತ್ನಿಯರಾದ ಮಲ್ಲಮ್ಮಾ ಬಸವರಾಜಪ್ಪ, ಚಂದ್ರಕಲಾ ಮಲ್ಲಿಕಾರ್ಜುನ, ಭಾಗೀರಥಿದೇವಿ ಅಂಬಾದಾಸ, ರಾಧಿಕಾದೇವಿ ಜ್ಞಾನೇಶ್ವರ, ಸುಲೋಚನಾ ವೀರಶೆಟ್ಟಿ, ಭಾರತಿ ಗೊಲ್ಲಾಳಪ್ಪ ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ದಿನಾಚಾರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮ ಕುಲಪತಿ ಡಾ| ವಿ.ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ| ಶಿವದತ್ತ ಹೊನ್ನಳ್ಳಿ, ಡಾ| ಲಕ್ಷ್ಮೀ ಮಾಕಾ, ಗೀತಾ ಹರವಾಳ, ವಾಣಿಶ್ರೀ, ಎನ್‌ ಶಶಿಕಲಾ ವೇದಿಕೆ ಮೇಲಿದ್ದರು. ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಸೂಷ್ಮಾ ಸ್ವಾಗತಿಸಿದರು, ಚೇತನಾ ಪಾಟೀಲ, ಶ್ವೇತಾ ನಿರೂಪಿಸಿದರು. ಇನ್ನರ್‌ವ್ಹಿಲ್‌ ಕ್ಲಬ್‌ ಆಫ್‌ ಗುಲ್ಬರ್ಗಾ ಸನ್‌ಸಿಟಿ ಕಾರ್ಯದರ್ಶಿ ಶ್ವೇತಾ ಎಂ. ವಂದಿಸಿದರು.

ಬದಲಾವಣೆ ಎನ್ನುವುದು ನಮ್ಮಿಂದಲೇ ಆರಂಭವಾಗಬೇಕು ಅದನ್ನು ಬೇರೆ ಯಾರೋ ಬಂದು ಮಾಡುತ್ತಾರೆ ಎನ್ನುವುದು ಮೂರ್ಖತನ. ಜೀವನ ಸಂಘರ್ಷದಿಂದ ಕೂಡಿರದಿದ್ದರೆ ಅದಕ್ಕೆ ಬೆಲೆ ಇಲ್ಲ. ಸವಾಲುಗಳನ್ನು ಮೆಟ್ಟಿ ನಿಂತಾಗಲೇ ನಮ್ಮ ಆತ್ಮಶಕ್ತಿಯ ಅರಿವು ಗೊತ್ತಾಗುತ್ತದೆ. ಶೇ. 99 ಜನರು ಒಳ್ಳೆಯವರಿದ್ದು, ಕೇವಲ ಶೇ. 1ರಷ್ಟು ಜನ ಮಾತ್ರ ಕೆಟ್ಟವರಿರುತ್ತಾರೆ. ಆದರೆ, ನಾವು ಆ ಶೇ. 1ರಷ್ಟು ಜನರಿಗೆ ಮಾತ್ರ ಮಹತ್ವ ನೀಡಿ, ಜೀವನದ ಅಮೂಲ್ಯ ಕ್ಷಣಗಳನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.
  ಮೀರಾ ಪಂಡಿತ, ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕೆ

Advertisement

Udayavani is now on Telegram. Click here to join our channel and stay updated with the latest news.

Next