Advertisement

ತಲಸ್ಪರ್ಶಿ ಅಧ್ಯಯನವೇ ಇತಿಹಾಸದ ಮೂಲ ವಸ್ತು: ಶೆಟ್ಟರ್‌

11:01 AM Aug 26, 2018 | Team Udayavani |

ಕಲಬುರಗಿ: ಪಾಶ್ಚಾತ್ಯ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಅಧ್ಯಯನ ಒತ್ತಡ ಹೆಚ್ಚಾಗಿರುತ್ತದೆ. ಒತ್ತಡಗಳ ಮಧ್ಯೆ ಕರ್ತವ್ಯ ನಿರ್ವಹಿಸುವುದರಿಂದ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂದು ಬೆಂಗಳೂರಿನ ಟಾಟಾ ಸಂಸ್ಥೆಯ ಇಂಡಿಯನ್‌ ಇನ್ಸಿಟ್ಯೂಟ್‌ ಆಫ್‌ ಅಡವಾನ್ಸಡ್‌ ಸ್ಟಡಿಜ್‌ನ ಅಧ್ಯಕ್ಷ ಡಾ| ಎಸ್‌.ಎಸ್‌. ಶೆಟ್ಟರ್‌ ಹೇಳಿದರು. 

Advertisement

ನಗರದ ಶರಣಬಸವ ವಿಶ್ವವಿದ್ಯಾಲಯ, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ, ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯವು ಜಂಟಿಯಾಗಿ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಹಮ್ಮಿಕೊಂಡಿದ್ದ “ಪ್ರಾಕೃತ ಜಗದ್ವಲಯ’ ಕೃತಿ ಬಿಡುಗಡೆ ಹಾಗೂ “ಸನ್ನತಿಯ ಐತಿಹಾಸಿಕ ಸಂಶೋಧನೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 
ಮಹಾನ್‌ ವ್ಯಕ್ತಿಗಳ ಒಡನಾಟದಿಂದ ನಮ್ಮ ವ್ಯಕ್ತಿತ್ವ ಬೆಳವಣಿಗೆ ಹೊಂದುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಪಾಶ್ಚಾತ್ಯ ಸಾಹಿತ್ಯ ಓದುವಿಕೆಯ ಹವ್ಯಾಸ ಹೆಚ್ಚಿಸಿಕೊಳ್ಳಬೇಕು. ಇದರಿಂದ ಸೃಜನಶೀಲ ಬರವಣಿಗೆ ಹೊರಹೊಮ್ಮುತ್ತದೆ. ಸಂಪನ್ಮೂಲ ವ್ಯಕ್ತಿಗಳ ಒಡನಾಟದಿಂದ ಜೀವನದ ಬೆಳವಣಿಗೆ ಸಾಧ್ಯ ಎಂದರು.

ಇತಿಹಾಸದಿಂದ ಮನುಷ್ಯ ಕಲಿಯಬೇಕಾದದ್ದು ಬಹಳಷ್ಟಿದೆ. ಐತಿಹಾಸಿಕ ಅಧ್ಯಯನಕ್ಕೆ ಸೂಕ್ತ ಆಧಾರಗಳು ಬೇಕು. ಇಲ್ಲದಿದ್ದರೆ ಅದು ಇತಿಹಾಸ ಎಂದೆನಿಸಿಕೊಳ್ಳುವುದಿಲ್ಲ. ಶಾಸನಗಳು, ತಾಳೆಗರಿಗಳು ಸಂಶೋಧನೆಗೆ ಸಹಕಾರಿಯಾಗುತ್ತವೆ. ಸಂಶೋಧನಾಕಾರರಲ್ಲಿ ಕುತೂಹಲದ ಅಂಶಗಳಿದ್ದರೇ ಇನ್ನೂ ಹೆಚ್ಚಿನ ಸಂಶೋಧನೆ ಮಾಡಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು. ಪ್ರಾಕೃತ ಜಗದ್ವಲಯ ಕೃತಿಯು ಪಾಲಿ, ಸಂಸ್ಕೃತ, ಭಾಷೆಯ ಮೇಲೆ ಬೆಳಕು ಚೆಲ್ಲುತ್ತದೆ ಎಂದರು.

ಸನ್ನತಿಯು ಒಂದು ಐತಿಹಾಸಿಕ ಪ್ರದೇಶವಾಗಿದ್ದು, ಅಲ್ಲಿ ಸಂಶೋಧನೆ ಮಾಡಿದಷ್ಟು ಆಳವಾದ ವಿಷಯಗಳು ಪರಿಚಯವಾಗುತ್ತಿವೆ. ಬೌದ್ಧ ಧರ್ಮ, ಅಶೋಕನ ಕಾಲದ ಜನಜೀವನ ವಿಧಾನವನ್ನು ಅರಿಯಲು ಪ್ರಶಸ್ತ ಸ್ಥಳವಾಗಿದೆ ಎಂದರು. 

ಸಾನ್ನಿಧ್ಯ ವಹಿಸಿದ್ದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಮಾತನಾಡಿ, ಸಂಶೋಧನೆ ಇಲ್ಲದ ಅಧ್ಯಯನ ವ್ಯರ್ಥ. ಹೆಚ್ಚು ಸಂಶೋಧನೆ ಕೈಗೊಂಡಂತೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಈ ದಿಸೆಯಲ್ಲಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾತ್ಮಕ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ ಎಂದರು.

Advertisement

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ, ಸಹ ಕುಲಪತಿ ಡಾ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಶಿವದತ್ತ ಹೊನ್ನಳ್ಳಿ, ಡೀನ್‌ ಡಾ| ಲಿಂಗರಾಜ ಶಾಸ್ತ್ರೀ, ಶರಣಬಸವ ವಿವಿಯ ದೃಶ್ಯ ಕಲಾ ವಿಭಾಗದ ಡೀನ್‌ ಪ್ರೊ| ಶಾಂತಲಾ ಅಪ್ಪ, ಪ್ರಾಚಾರ್ಯರಾದ ಡಾ| ಎನ್‌. ಎಸ್‌. ಪಾಟೀಲ, ಪ್ರೊ| ವಿ.ಬಿ. ಬಿರಾದಾರ, ಪ್ರೊ| ಜಗದೇವಿ ಕಲಶೆಟ್ಟಿ, ಪ್ರೊ| ಸಂಗೀತಾ ಪಾಟೀಲ ಹಾಗೂ ವಿವಿಧ ಮಹಾವಿದ್ಯಾಲಯಗಳ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶರಣಬಸವ ವಿವಿ ಕುಲಪತಿ ಡಾ| ನಿರಂಜನ್‌ ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು.ಶರಣಬಸವ ಸಂಗೀತ ಅಕಾಡೆಮಿಯ ಸದಸ್ಯರು ಪ್ರಾರ್ಥಿಸಿದರು. ಡಾ| ನೀಲಾಂಬಿಕಾ ಶೇರಿಕಾರ ಸ್ವಾಗತಿಸಿದರು, ಡಾ| ಸುರೇಶಕುಮಾರ ನಂದಗಾಂವ ನಿರೂಪಿಸಿದರು, ಪ್ರೊ| ಜಗದೇವಿ ಕಲಶೆಟ್ಟಿ ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next