ಕಲಬುರಗಿ: ಗುಣಮಟ್ಟದ ಶಿಕ್ಷಣ ನೀಡಲು ಶರಣಬಸವ ವಿಶ್ವವಿದ್ಯಾಲಯ ಕಂಕಣಬದ್ದವಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಹೇಳಿದರು. ನಗರದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ 70ನೇ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯಾ ದೊರಕಿದ್ದರೂ ಹೈದ್ರಾಬಾದ ಕರ್ನಾಟಕ ಭಾಗದ ಜನರಿಗೆ ಸ್ವಾತಂತ್ರ್ಯಾ ದೊರಕಿರಲಿಲ್ಲ.
ಈ ಭಾಗ ಹೈದ್ರಾಬಾದ ನಿಜಾಮನ ಅಧೀನದಲ್ಲಿತ್ತು. ಸರದಾರ ವಲ್ಲಭಭಾಯಿ ಪಟೇಲ್ ಅವರ ಮುಂದಾಳತ್ವದಿಂದ ಒಂದು ವರ್ಷದ ನಂತರ ಹೈ. ಕ.ಭಾಗಕ್ಕೆ ವಿಮೋಚನೆ ದೊರೆಯಿತು. ಬ್ರಿಟಿಷ್ ಮತ್ತು ನಿಜಾಮನ ಗುಲಾಮಗಿರಿಯಿಂದ ಮುಕ್ತಿ ಹೊಂದಿತು ಎಂದು ಹೇಳಿದರು.
ಸ್ವಾತಂತ್ರ್ಯಾ ಸಿಕ್ಕರೂ ಈ ಭಾಗ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಆಗಿರಲಿಲ್ಲ. ಆದರೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಮತ್ತು ಬೇರೆ ಶಿಕ್ಷಣ ಸಂಸ್ಥೆಗಳಿಂದ ಶೈಕ್ಷಣಿಕ ಮಟ್ಟ ಹೆಚ್ಚಾಗುತ್ತಿದೆ. ಕಳೆದ ವರ್ಷದಿಂದ ಶರಣಬಸವ ವಿಶ್ವವಿದ್ಯಾಲಯ ಆರಂಭವಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಭಾಗದಲ್ಲಿ 4 ವಿಶ್ವವಿದ್ಯಾಲಯಗಳಿವೆ. ವೈದ್ಯಕೀಯ, ಇಂಜಿನಿಯರಿಂಗ್, ಎಂಬಿಎ ಸೇರಿದಂತೆ ಅನೇಕ ಶಾಲಾ
ಕಾಲೇಜುಗಳಲ್ಲಿ ಸುಮಾರು 3 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಭಾಗ ಶಿಕ್ಷಣದ ಕೇಂದ್ರವಾಗಿ ಮಾರ್ಪಟ್ಟಿದೆ. ಹಿಂದುಳಿದ ಭಾಗ ಎನ್ನುವ ಹಣೆಪಟ್ಟಿ ಕಳಚಿಕೊಂಡಿದೆ ಎಂದರು.
ವಿವಿ ಕುಲಪತಿ ಡಾ| ನಿರಂಜನ ವಿ. ನಿಷ್ಠಿ, ಸಹ ಕುಲಪತಿ ಡಾ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಡೀನ್ ಡಾ| ಲಿಂಗರಾಜ ಶಾಸ್ತ್ರೀ, ಪ್ರಾಚಾರ್ಯರಾದ ಡಾ| ನೀಲಾಂಬಿಕಾ ಶೇರಿಕಾರ, ಡಾ| ಎಂ.ಆರ್. ಹುಗ್ಗಿ, ಪ್ರೊ| ಬಿ.ಸಿ. ಚವ್ಹಾಣ, ಪಿಒ ವಿನೋದ ಪತಂಗೆ, ಪ್ರೊ| ಶಿಲ್ಪ ಬಿ. ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಯೋಗ ಮತ್ತು ಕರಾಟೆ ಪ್ರದರ್ಶನ ಮಾಡಿದರು. ಸಂಸ್ಥೆಯ ಬೇರೆ ಬೇರೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.