Advertisement

ವನಿತಾ ಏಕದಿನ ವಿಶ್ವಕಪ್‌: ಭಾರತಕ್ಕಿಂದು ನ್ಯೂಜಿಲೆಂಡ್‌ ಸವಾಲು

09:29 PM Mar 09, 2022 | Team Udayavani |

ಹ್ಯಾಮಿಲ್ಟನ್‌: ವಿಶ್ವಕಪ್‌ ಕೂಟದ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಖುಷಿಯಲ್ಲಿರುವ ಭಾರತಕ್ಕೆ ಗುರುವಾರ ಕಠಿಣ ಸವಾಲೊಂದು ಎದುರಾಗಲಿದೆ.

Advertisement

ಮಿಥಾಲಿ ಪಡೆ ಆತಿಥೇಯ ನ್ಯೂಜಿಲೆಂಡ್‌ ವಿರುದ್ಧ ಅಗ್ನಿಪರೀಕ್ಷೆಗೆ ಇಳಿಯಲಿದೆ. ಇಲ್ಲಿ ಗೆದ್ದರೆ ಭಾರತ ದೊಡ್ಡ ಹರ್ಡಲ್ಸ್‌ ಒಂದನ್ನು ದಾಟಿದಂತಾಗುತ್ತದೆ.

ಪಾಕಿಸ್ತಾನ ವಿರುದ್ಧ ಭಾರತದ ಗೆಲುವು ನಿರೀಕ್ಷಿತ. ಏಕೆಂದರೆ ಅದು ಕೂಟದಲ್ಲೇ ಅತ್ಯಂತ ದುರ್ಬಲ ತಂಡ. ಜತೆಗೆ ಪಾಕ್‌ ವಿಶ್ವಕಪ್‌ ದಾಖಲೆ ಕೂಡ ಕಳಪೆ. ಆದರೆ ಪಾಕಿಸ್ತಾನ ವಿರುದ್ಧ ಭಾರತದ ಬ್ಯಾಟಿಂಗ್‌ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. 114 ರನ್‌ ಗಳಿಸುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ತೀವ್ರ ಒತ್ತಡ ಎದುರಿಸಿತ್ತು. ಕೊನೆಯಲ್ಲಿ ಸ್ನೇಹ್‌ ರಾಣಾ-ಪೂಜಾ ವಸ್ತ್ರಾಕರ್‌ ದಿಟ್ಟ ಜತೆಯಾಟ ನಡೆಸಿದ ಫ‌ಲವಾಗಿ ಸ್ಕೋರ್‌ 244ರ ತನಕ ಸಾಗಿತು.

ಆದರೆ ಪಾಕ್‌ಗಿಂತ ನ್ಯೂಜಿಲೆಂಡ್‌ ಬಳಿಷ್ಠ ಎಂಬುದು ಭಾರತಕ್ಕೆ ಈಗಾಗಲೇ ಚೆನ್ನಾಗಿ ಅರಿವಾಗಿದೆ. ವಿಶ್ವಕಪ್‌ಗೆ ಒಂದು ತಿಂಗಳಿರುವಾಗಲೇ ಇಲ್ಲಿಗೆ ಆಗಮಿಸಿ ಒಂದು ಟಿ20, 5 ಪಂದ್ಯಗಳ ಏಕದಿನ ಸರಣಿ ಆಡಿತ್ತು. ಕೊನೆಯ ಏಕದಿನ ಹೊರತುಪಡಿಸಿ ಉಳಿದೆಲ್ಲದರಲ್ಲೂ ಭಾರತಕ್ಕೆ ಸೋಲೇ ಸಂಗಾತಿಯಾಗಿತ್ತು.

ಈ ಸರಣಿಯಲ್ಲಿ ಭಾರತದ ಬ್ಯಾಟಿಂಗ್‌ ಗಮನಾರ್ಹ ಮಟ್ಟದಲ್ಲಿದ್ದರೂ ಬೌಲಿಂಗ್‌ ಕೈಕೊಟ್ಟಿತ್ತು. 270-280ರ ಮೊತ್ತವನ್ನು ಉಳಿಸಿಕೊಳ್ಳಲೂ ಮಿಥಾಲಿ ಬಳಗದಿಂದ ಸಾಧ್ಯವಾಗಿರಲಿಲ್ಲ. ಇದೇ ಸಮಸ್ಯೆ ಪುನರಾವರ್ತನೆಗೊಳ್ಳದಂತೆ ನೋಡಿಕೊಂಡರಷ್ಟೇ ಭಾರತದ ಮೇಲುಗೈ ನಿರೀಕ್ಷಿಸಬಹುದು.

Advertisement

ಶಫಾಲಿ ಬ್ಯಾಟಿಂಗ್‌ ಚಿಂತೆ
ಭಾರತದ ಪಾಲಿನ ಚಿಂತೆಯ ಸಂಗತಿಯೆಂದರೆ ಹಾರ್ಡ್‌ ಹಿಟ್ಟರ್‌ ಶಫಾಲಿ ವರ್ಮ ಅವರ ಕೈಕೊಟ್ಟ ಫಾರ್ಮ್. ಒಂದು ಅಭ್ಯಾಸ ಪಂದ್ಯ ಸೇರಿದಂತೆ ಕಳೆದ 7 ಪಂದ್ಯಗಳಲ್ಲಿ ಶಫಾಲಿಯಿಂದ ಗಳಿಸಲು ಸಾಧ್ಯವಾದದ್ದು ಒಂದು ಅರ್ಧ ಶತಕ ಮಾತ್ರ. ಉಳಿದೆಲ್ಲವೂ ಲೋ ಸ್ಕೋರ್‌. ಕಿವೀಸ್‌ ವಿರುದ್ಧ ಶಫಾಲಿ ಸಿಡಿದರೆ ಭಾರತಕ್ಕೆ ಅದು ಬಂಪರ್‌ ಆಗಲಿದೆ. ಪಾಕಿಸ್ಥಾನ ವಿರುದ್ಧ ಮಿಥಾಲಿ, ಹರ್ಮನ್‌ಪ್ರೀತ್‌ ಕೌರ್‌ ಕೂಡ ಮಿಂಚಿಲ್ಲ ಎಂಬುದನ್ನು ಗಮನಿಸಬೇಕು. ಕಿವೀಸ್‌ ವಿರುದ್ಧ ಇವರ ಬ್ಯಾಟ್‌ ಕೂಡ ಮಾತಾಡಬೇಕಿದೆ.

ಭಾರತದ ಆಲ್‌ರೌಂಡರ್ ಉತ್ತಮ ಲಯದಲ್ಲಿದ್ದಾರೆ. ಆದರೆ ಬೌಲಿಂಗ್‌ ಇನ್ನಷ್ಟು ಘಾತಕವಾಗಿ ಪರಿಣಮಿಸಬೇಕಿದೆ.
ಹ್ಯಾಮಿಲ್ಟನ್‌ನ ಸೆಡ್ಡನ್‌ ಪಾರ್ಕ್‌’ ಬ್ಯಾಟಿಂಗ್‌ಗೆ ಹೆಚ್ಚಿನ ನೆರವು ನೀಡಲಿದೆ ಎಂಬುದೊಂದು ಲೆಕ್ಕಾಚಾರ. ಹೀಗಾಗಿ ಸೋಫಿ ಡಿವೈನ್‌, ಸುಝೀ ಬೇಟ್ಸ್‌, ಆ್ಯಮಿ ಸ್ಯಾಟರ್‌ವೆàಟ್‌, ಅಮೇಲಿಯಾ ಕೆರ್‌ ಅವರೆಲ್ಲ ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದ್ದೇ ಇದೆ. ಆದರೆ ನ್ಯೂಜಿಲ್ಯಾಂಡನ್ನೂ ಮಣಿಸಬಹುದು ಎಂಬುದನ್ನು ಉದ್ಘಾಟನಾ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತೋರಿಸಿ ಕೊಟ್ಟಿದೆ!

ಭಾರತ-ನ್ಯೂಜಿಲೆಂಡ್‌
ಸ್ಥಳ: ಹ್ಯಾಮಿಲ್ಟನ್‌
ಆರಂಭ: ಬೆಳಗ್ಗೆ 6.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next