ಲಕ್ನೋ: ಲೋಕಸಭೆ ಚುನಾವಣೆ ಫಲಿತಾಂಶದ ಮಾರನೇ ದಿನವೇ ಉತ್ತರ ಪ್ರದೇಶದ ಕಾಂಗ್ರೆಸ್ ಕಚೇರಿ ಮುಂದೆ ಮಹಿಳೆಯರು ಸಾಲುಗಟ್ಟಿ ನಿಂತಿದ್ದರು! ಏಕೆ ಗೊತ್ತಾ? ಕಾಂಗ್ರೆಸ್ ಘೋಷಿಸಿ ರುವ “1 ಲಕ್ಷ ರೂ.ಗಳ ಗ್ಯಾರಂಟಿ’ಯನ್ನು ಪಡೆಯಲು!
ಹೌದು, ಈ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ವಿಪಕ್ಷಗಳ ಇಂಡಿಯಾ ಒಕ್ಕೂಟ ಹೆಚ್ಚಿನ ಲೋಕಸಭಾ ಸ್ಥಾನಗಳನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಲಕ್ನೋದಲ್ಲಿ ಹಲವು ಮಹಿಳೆಯರು ಕಾಂಗ್ರೆಸ್ ಹಂಚಿರುವ ಗ್ಯಾರಂಟಿ ಕಾರ್ಡ್‌ನಲ್ಲಿನ ಆಶ್ವಾಸನೆಯಂತೆ 1 ಲಕ್ಷ ರೂ. ಪಡೆಯಲು ಕಾಂಗ್ರೆಸ್ ಕಚೇರಿಗೆ ಮುಗಿಬಿದ್ದಿದ್ದಾರೆ.
ಇದನ್ನೂ ಓದಿ:Water Crisis: ದೆಹಲಿಗೆ ಹಿಮಾಚಲ್ ಪ್ರದೇಶದಿಂದ ಹೆಚ್ಚುವರಿ ನೀರು ಬಿಡುಗಡೆ: ಸುಪ್ರೀಂ ಆದೇಶ
ಪ್ರಚಾರದ ವೇಳೆ ಕಾಂಗ್ರೆಸ್ ಪ್ರತಿ ಬಡ ಕುಟುಂಬದ ಮಹಿಳಾ ಮುಖ್ಯ ಸದಸ್ಯೆಗೆ ಮಾಸಿಕ 8,500 ರೂ. ಗಳಂತೆ ವರ್ಷಕ್ಕೆ 1 ಲಕ್ಷ ರೂ. ನೀಡುವುದಾಗಿ ಆಶ್ವಾಸನೆ ನೀಡಿತ್ತು. ಅದರಂತೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ ನಂತರ, ನೂರಾರು ಮುಸ್ಲಿಂ ಮಹಿಳೆಯರು ಸುಡು ಬಿಸಿಲಿನಲ್ಲಿ ಕಾಂಗ್ರೆಸ್ ಕಚೇರಿ ಎದುರು ಗ್ಯಾರಂಟಿ ಕಾರ್ಡ್ ಹಿಡಿದುಕೊಂಡು ಸಾಲುಗಟ್ಟಿ ನಿಂತಿದ್ದರು.
ಹಲವು ಮಹಿಳೆಯರು ಅರ್ಜಿ ತುಂಬಿ ಕಚೇರಿಯಿಂದ ರಸೀದಿ ಪಡೆದರೆ, ಹಣ ಬ್ಯಾಂಕ್ ಖಾತೆಗೆ ಬರುವುದಾಗಿ ನಂಬಿದ್ದರು. ಬಹಳ ಹೊತ್ತು ಕಾದ ಬಳಿಕ “ಬಂದ ದಾರಿಗೆ ಸುಂಕವಿಲ್ಲ’ ಎಂದು ವಾಪಸ್ ಹೋಗಿದ್ದಾರೆ.