Advertisement

ವನಿತಾ ಕ್ರಿಕೆಟ್‌ ಕೋಚ್‌; ಇಂದು ಸಂದರ್ಶನ

06:00 AM Dec 20, 2018 | Team Udayavani |

ಮುಂಬಯಿ: ಭಾರೀ ವಿವಾದವನ್ನು ಸೃಷ್ಟಿಸಿರುವ ಭಾರತೀಯ ವನಿತಾ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ಗುರುವಾರ ಸಂದರ್ಶನ ನಡೆಯಲಿದೆ. ಒಟ್ಟು 28 ಮಂದಿ ಉಮೇದುವಾರರು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಈ ಯಾದಿಯನ್ನೀಗ ಕಿರಿದುಗೊಳಿಸಲಾಗಿದೆ.

Advertisement

ಕಿರಿದುಗೊಂಡ ಈ ಪಟ್ಟಿಯಲ್ಲಿ ವಿವಾದಕ್ಕೆ ಕಾರಣರಾದ ರಮೇಶ್‌ ಪೊವಾರ್‌ ಕೂಡ ಇರುವುದು ವಿಶೇಷ. ಉಳಿದಂತೆ 10 ಮಂದಿ ವಿದೇಶಿ ಅಭ್ಯರ್ಥಿಗಳಿದ್ದಾರೆ. ಇವರಲ್ಲಿ ಗ್ಯಾರಿ ಕರ್ಸ್ಟನ್‌, ಹರ್ಶಲ್‌ ಗಿಬ್ಸ್, ಟ್ರೆಂಟ್‌ ಜಾನ್‌ಸ್ಟನ್‌, ಡಿಮಿಟ್ರಿ ಮಸ್ಕರೇನಸ್‌ ಪ್ರಮುಖರು. ಡಬ್ಲ್ಯು.ವಿ. ರಾಮನ್‌, ವೆಂಕಟೇಶ ಪ್ರಸಾದ್‌, ಮನೋಜ್‌ ಪ್ರಭಾಕರ್‌ ಭಾರತದ ಉಮೇದುವಾರರಾಗಿದ್ದಾರೆ. “ಶಾರ್ಟ್‌ ಲಿಸ್ಟ್‌’ನಲ್ಲಿ ಒಟ್ಟು ಎಷ್ಟು ಮಂದಿ ಅಭ್ಯರ್ಥಿಗಳಿದ್ದಾರೆ ಎಂಬದು ಖಚಿತಪಟ್ಟಿಲ್ಲ.

ಅಡ್‌-ಹಾಕ್‌ ಸಮಿತಿಯಿಂದ ಸಂದರ್ಶನ
ಭಾರತದ ಮಾಜಿ ಕ್ರಿಕೆಟಿಗರಾದ ಕಪಿಲ್‌ದೇವ್‌, ಅಂಶುಮನ್‌ ಗಾಯಕ್ವಾಡ್‌ ಮತ್ತು ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ಅಡ್‌-ಹಾಕ್‌ ಸಮಿತಿ ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ. ವಿದೇಶಿ ಆಟಗಾರರು ಸ್ಕೈಪ್‌ ಮೂಲಕ ಸಂದರ್ಶನ ನೀಡಿದರೆ, ಭಾರತದ ಅಭ್ಯರ್ಥಿಗಳು ಸ್ಥಳಕ್ಕೆ ಹಾಜರಾಗುವರು.

“ದೇಶದ ಖ್ಯಾತ ಮಾಜಿ ಆಟಗಾರರು ಅಡ್‌-ಹಾಕ್‌ ಸಮಿತಿಯ ಸದಸ್ಯರಾಗಿದ್ದು, ಇವರು ಸೂಕ್ತ ಅಭ್ಯರ್ಥಿಯನ್ನು ಆರಿಸುವರೆಂಬ ವಿಶ್ವಾಸವಿದೆ’ ಎಂಬಿದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ರಾಯ್‌-ಎಡುಲ್ಜಿ ಭಿನ್ನಾಭಿಪ್ರಾಯ
ಸರ್ವೋಚ್ಚ ನ್ಯಾಯಾಲಯದಿಂದ ನಿಯೋಜಿಸಲ್ಪಟ್ಟ ಆಡಳಿತಾಧಿಕಾರಿಗಳ ಸಮಿತಿಯ (ಸಿ.ಒ.ಎ.) ಅಧ್ಯಕ್ಷ ವಿನೋದ್‌ ರಾಯ್‌ ಮತ್ತು ಸದಸ್ಯೆ ಡಯಾನಾ ಎಡುಲ್ಜಿ ನಡುವೆ ಕೋಚ್‌ ಆಯ್ಕೆ ವಿಷಯದಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಕನಿಷ್ಠ ಮುಂದಿನ ತಿಂಗಳ ನ್ಯೂಜಿಲ್ಯಾಂಡ್‌ ಪ್ರವಾಸದ ವರೆಗಾದರೂ ರಮೇಶ್‌ ಪೊವಾರ್‌ ಅವರನ್ನೇ ಈ ಹುದ್ದೆಯಲ್ಲಿ ಮುಂದುವರಿಸಿ ಎಂಬುದಾಗಿ ಎಡುಲ್ಜಿ ಸಲಹೆ ಮಾಡಿದ್ದರು. ಆದರೆ ಈಗಾಗಲೇ ಅರ್ಜಿಗಳನ್ನು ಕರೆದಾಗಿದೆ, ಸಂದರ್ಶನದ ಮೂಲಕವೇ ಕೋಚ್‌ ಆಯ್ಕೆ ನಡೆಯಲಿ ಎಂಬುದು ರಾಯ್‌ ವಾದವಾಗಿತ್ತು.

Advertisement

ಭಾರತದ ಏಕದಿನ ತಂಡದ ನಾಯಕಿ, ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ ಅವರನ್ನು ಕಳೆದ ಟಿ20 ವಿಶ್ವಕಪ್‌ ಸೆಮಿಫೈನಲ್‌ ವೇಳೆ ವಿನಾ ಕಾರಣ ಹೊರಗಿರಿಸಿದ ಬಳಿಕ “ವನಿತಾ ಕ್ರಿಕೆಟ್‌ ರಾಜಕೀಯ’ ಬಯಲಾಗತೊಡಗಿತ್ತು. ಮಿಥಾಲಿ, ಪೊವಾರ್‌ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತ  ಮಾಧ್ಯಮಗಳಿಗೆ ಆಹಾರವಾಗಿದ್ದರು. ವಿಂಡೀಸ್‌ನಲ್ಲಿ ನಡೆದ ವಿಶ್ವಕಪ್‌ ಮುಗಿದ ಬೆನ್ನಲ್ಲೇ ಪೊವಾರ್‌ ಅವರ ಒಪ್ಪಂದದ ಅವಧಿ ಕೂಡ ಮುಗಿದಿತ್ತು. ಆದರೆ ಟಿ20 ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮತ್ತು ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರು ರಮೇಶ್‌ ಪೊವಾರ್‌ ಬೆಂಬಲಕ್ಕೆ ನಿಂತು, ಅವರನ್ನೇ ಕೋಚ್‌ ಹುದ್ದೆಯಲ್ಲಿ ಮುಂದುವರಿಸಬೇಕೆಂದು ಬಿಸಿಸಿಐಗೆ ಪತ್ರ ಬರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next