ಧಾರವಾಡ: ಸಮಾಜದ ಸ್ವಾಸ್ಥ ಕಾಪಾಡುವುದು ಮಹಿಳೆಯರ ಕೈಯಲ್ಲಿಯೇ ಇದೆ ಎಂದು ಹೃದ್ರೋಗ ತಜ್ಞೆ ಹಾಗೂ ವಿಚಾರವಾದಿ ಡಾ| ವಿಜಯಲಕೀ ಬಾಳೇಕುಂದ್ರಿ ಹೇಳಿದರು. ನಗರದ ಕವಿಸಂನಲ್ಲಿ ಮಹಿಳಾ ಮಂಟಪದ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶ-2017ರ ಸಮಕಾಲೀನ ಸಂದರ್ಭದಲ್ಲಿ ಮಹಿಳೆ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಹೆಣ್ಣು ಮನಸ್ಸು ಮಾಡಿದರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ನಮ್ಮ ಸಂಸ್ಕೃತಿಯ ಉಳಿವು ಹೆಣ್ಣು ಮಕ್ಕಳ ಕೈಯಲ್ಲಿದ್ದು, ಕೋಪ ಬಿಟ್ಟು ಪ್ರೀತಿ ಹಂಚಬೇಕು. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ನಮ್ಮತನ ನಾವು ಉಳಿಸಬೇಕು.
ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ನಮ್ಮ ಹಿರಿಯರು ಕಲಿಸಿ ಕೊಟ್ಟಿದ್ದು, ಅದೇ ಮಾರ್ಗದಲ್ಲಿ ನಾವು ಮುನ್ನಡೆಯಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ| ಪಾಟೀಲ್ ಪುಟ್ಟಪ್ಪ ಮಾತನಾಡಿ, ಮನುಷ್ಯ ಯಾವಾಗಲು ಸರಳವಾಗಿ ಬದುಕಬೇಕು.
ಕಡಿಮೆ ಆಹಾರ ಸೇವಿಸುವುದರಿಂದ ದೀರ್ಘ ಆಯುಷ್ಯ ಪಡೆಯಬಹುದು. ಇಂದು ಮಹಿಳೆಯರು ಉನ್ನತ ಸ್ಥಾನಗಳಲ್ಲಿ ಮಿಂಚುತ್ತಿರುವುದು ಖುಷಿಯ ವಿಷಯ. ಮಹಿಳಾ ಚಿಂತನೆಗಳಿಗೆ ಸಂಬಂಧಿಸಿದ ಪುಸ್ತಕಗಳು ಹೆಚ್ಚು-ಹೆಚ್ಚು ಹೊರಬರಲಿ ಎಂದರು.
ಇದೇ ವೇಳೆ ಮಹಿಳೆಯ ಮಾನಸಿಕ ಹಾಗೂ ದೈಹಿಕ ಆರೋಗ್ಯ ಗೋಷ್ಠಿಯಲ್ಲಿ ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಕೃಷ್ಣ ಜೋಶಿ, ಜಾನಪದ ಕಲಾವಿದೆ ವಿಶ್ವೇಶ್ವರಿ ಹಿರೇಮಠ, ದೂರದರ್ಶನ ನಿರ್ದೇಶಕ ಮಹೇಶ ಜೋಶಿ, ಡಾ|ಜೀನದತ್ತ ಹಡಗಲಿ, ಲಲಿತಾ ಪಾಟೀಲ್, ಭಾಗೀರಥಿ ಕಲಕಾಮಕರ, ಪದ್ಮಜಾ ಉಮರ್ಜಿ, ಡಾ| ಇಸಾಬೆಲ್ಲಾ ಜೆ. ಇತರರಿದ್ದರು.