ಥಾಣೆ: ಭೇಟಿ ಆಗಬೇಕೆಂದು ಕರೆಸಿಕೊಂಡು, ತನ್ನ ಸಹಚರರೊಂದಿಗೆ ಮಹಿಳೆಯೊಬ್ಬಳು ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ನಗದನ್ನು ಲೂಟಿ ಮಾಡಿ ನಡು ರಸ್ತೆಯಲ್ಲೇ ಬೆತ್ತಲೆ ಮಾಡಿ ಪರಾರಿ ಆಗಿರುವ ಘಟನೆ ಥಾಣೆಯ ಶಹಾಪುರ ಹೆದ್ದಾರಿಯಲ್ಲಿ ನಡೆದಿರುವುದು ವರದಿಯಾಗಿದೆ.
ಘಟನೆ ಹಿನ್ನೆಲೆ:
ಕಟ್ಟಡ ನಿರ್ಮಾಣ ಉದ್ಯಮ ಹೊಂದಿರುವ ಶಹಾಪುರ ನಿವಾಸಿ ಬಾಲಾಜಿ ಶಿವಭಗತ್ ಎಂಬಾತ ಶಹಾಪುರ ನಿವಾಸಿ ಭಾವಿಕಾ ಭೋಯಿರ್ ಎಂಬ ಮಹಿಳೆಯನ್ನು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಜೂ.28 ರಂದು ಭಾವಿಕಾ ಅಟ್ಗಾಂವ್ ಹೆದ್ದಾರಿಯಲ್ಲಿ ಭೇಟಿಯಾಗುವಂತೆ ಶಿವಭಾಗತ್ ಅವರನ್ನು ಕರೆದಿದ್ದಾರೆ. ಈ ವೇಳೆ ಪ್ರಿಯತಮೆ ಹೇಳಿದ ದುಬಾರಿ ಉಡುಗೊರೆಯನ್ನು ಶಿವಭಾಗತ್ ತೆಗೆದುಕೊಂಡು ಹೋಗಿದ್ದಾರೆ. ಸಂಜೆ 4:30 ರ ಸಮಯದಲ್ಲಿ ಕಾರಿನಲ್ಲಿ ಇಬ್ಬರು ಕೂತಿದ್ದ ವೇಳೆ ನಾಲ್ವರು ಬಂದು ಕಾರಿನ ಡೋರ್ ತೆಗೆದು ಏಕಾಏಕಿಯಾಗಿ ಶಿವಭಾಗತ್ ಅವರ ಮೇಲೆ ಹಲ್ಲೆ ನಡೆಸಿ, ಅವರ ಕಾರನ್ನೇ ಡ್ರೈವ್ ಮಾಡಿಕೊಂಡು ಹೋಗಿ ಹೊಟೇಲ್ ವೊಂದರಲ್ಲಿ ಶಿವಭಾಗತ್ ಅವರನ್ನು ಕೂಡಿಹಾಕಿ ಅವರ ಬಳಿಯಿಂದ ಲಕ್ಷಾಂತರ ರೂ. ನಗದನ್ನು ಲೂಟಿ ಮಾಡಿ, ಕೈಯಿಂದ ಚಿನ್ನದ ರಿಂಗ್ ಹಾಗೂ ಇತರ ದುಬಾರಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದಾದ ಬಳಿಕ ಮರುದಿನ ಮುಂಜಾನೆ 5 ಗಂಟೆಯ ಸಮಯಕ್ಕೆ ಖಾರದ ಪುಡಿಯನ್ನು ಎರಚಿ ಬೆತ್ತಲೆ ಮಾಡಿ ನಡುರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಇದನ್ನೂ ಓದಿ: Ashes23 ಆಸ್ಟ್ರೇಲಿಯಾವು ಕ್ರೀಡಾ ಸ್ಪೂರ್ತಿ ತೋರಿಸಲಿಲ್ಲ: ಇಂಗ್ಲೆಂಡ್ ಪ್ರಧಾನಿ ರಿಷಿ ಸುನಾಕ್
ಈ ಬಗ್ಗೆ ಮಾತನಾಡುವ ದೂರುದಾರ ಶಿವಭಾಗತ್ “ನಾನು ಆಕೆಗಾಗಿ ಎಲ್ಲವನ್ನೂ ಮಾಡಿದ್ದೇನೆ. ಆಕೆಗಾಗಿ ಅವಳ ಕನಸಿನಂತೆ ಸಣ್ಣ ಮನೆಯೊಂದನ್ನು ನಿರ್ಮಿಸಿದ್ದೇನೆ. ಭೇಟಿ ಆಗುವಾಗ ಸೀರೆ, ಚಿನ್ನದ ಕಿವಿಯೋಲೆಗಳು, ಚಿನ್ನದ ಕಾಲುಂಗುರಗಳು ಮತ್ತು ಬಳೆಗಳು, ಹೊಸ ಮಾನ್ಸೂನ್ ಶೂಗಳು ಮತ್ತು ಛತ್ರಿಯನ್ನು ತರಲು ಹೇಳಿದ್ದಳು. ಅದರಂತೆ ಎಲ್ಲವನ್ನು ಖರೀದಿಸಿ ನಾನು ಹೋಗಿದ್ದೆ. ಆದರೆ ನಾಲ್ವರು ಬಂದು ನನ್ನ ಮೇಲೆ ಹಲ್ಲೆ ನಡೆಸಿ, ನನ್ನನ್ನು ಲೂಟಿ, ಬೆತ್ತಲು ಮಾಡಿ ಪರಾರಿ ಆಗಿದ್ದಾರೆ. ಅವಳು ಬೇರೊಬ್ಬನಿಗಾಗಿ ನನಗೆ ಮೋಸ ಮಾಡಿದ್ದಳು” ಎಂದು ಆದ ಘಟನೆಯ ಆಘಾತದಲ್ಲೇ ಹೇಳಿದ್ದಾರೆ.
ಹಲ್ಲೆಗೊಳಗಾಗಿ ಬೆತ್ತಲಾಗಿ ರಸ್ತೆಯಲ್ಲಿ ಬಿದ್ದಿದ ಶಿವಭಾಗತ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೊಲೀಸರು ಐವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಅವರನ್ನು ಭಾವಿಕಾ ಭೋಯಿರ್ ಮತ್ತು ನಾದಿಮ್ ಖಾನ್ ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 365 (ಅಪಹರಣ), 506 (ಕ್ರಿಮಿನಲ್ ಬೆದರಿಕೆ) ಜೊತೆಗೆ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.