ಬೆಂಗಳೂರು: ತನಗೆ ಕೋವಿಡ್-19 ಸೋಂಕು ತಾಗಿರುವ ಕಾರಣದಿಂದ ನೊಂದು ಸೋಂಕಿತ ಮಹಿಳೆಯೋರ್ವರು ಆಸ್ಪತ್ರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಇಂದು ಮುಂಜಾನೆ 2.30ರ ಸುಮಾರಿಗೆ ಮಹಿಳೆಯೋರ್ವರು ಆಸ್ಪತ್ರೆಯ ಬಾತ್ ರೂಮ್ ನಲ್ಲಿ ತನ್ನ ಸೀರೆಯನ್ನು ಬಳಸಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಶರಣಾದ 60 ವರ್ಷ ಪ್ರಾಯದ ಮಹಿಳೆ ಕುಣಿಗಲ್ ಮೂಲದವರಾಗಿದ್ದಾರೆ. ಸದ್ಯ ರಾಜಗೋಪಾಲ ನಗರದಲ್ಲಿ ವಾಸವಾಗಿದ್ದರು. ಇದೇ ತಿಂಗಳ 18ರಂದು ಇವರಿಗೆ ಕೋವಿಡ್-19 ಸೋಂಕು ಪಾಸಿಟಿವ್ ಕಂಡು ಬಂದಿತ್ತು. ಹೀಗಾಗಿ ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಮಹಿಳೆಯ ಮಗ, ಸೊಸೆ ಮತ್ತು ಮೊಮ್ಮಗುವಿಗೂ ಕೋವಿಡ್ ಸೋಂಖು ದೃಢಪಟ್ಟಿದೆ. ಈ ಕಾರಣದಿಂದ ನೊಂದು ಮಹಿಳೆ ಇಂತಹ ನಿರ್ಧಾರ ಕೈಗೊಂಡಿರಬಹುದು ಎನ್ನಲಾಗಿದೆ. ಮಲ್ಲಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತರೊಬ್ಬರು ಆಸ್ಪತ್ರೆಯ ಕಟ್ಟಡದಿಂದ ಕೆಳಕ್ಕೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದು ರಾಜ್ಯದ ಪ್ರಥಮ ಕೋವಿಡ್-19 ಕಾರಣವಲ್ಲದ ಸೋಂಕಿತರ ಮರಣ ಪ್ರಕರಣವಾಗಿತ್ತು.