ಬೆಂಗಳೂರು: ಪೇಯಿಂಟ್ ಮಿಕ್ಸ್ ಮಾಡುವ ಯಂತ್ರಕ್ಕೆ ಕೂದಲು ಸಿಲುಕಿ ಮಹಿಳೆಯ ತಲೆ ತುಂಡಾಗಿರುವ ದಾರುಣ ಘಟನೆ ಪೀಣ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರ ಮೂಲದ ಶ್ವೇತಾ(34) ಮೃತ ಮಹಿಳೆ. ಈ ಸಂಬಂಧ ಆಕೆ ಕೆಲಸ ಮಾಡುತ್ತಿದ್ದ ಶ್ರೀಪೇಯಿಂಟ್ಸ್ ಎಂಬ ಕಾರ್ಖಾನೆ ಮಾಲೀಕನ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ ಎಂದು ಪೊಲೀಸರು ಹೇಳಿದರು.
ಶ್ವೇತಾ ರಾಮನಗರ ಮೂಲದ ಸುರೇಶ್ ಎಂಬುವರನ್ನು ಮದುವೆಯಾಗಿದ್ದು, ದಂಪತಿಗೆ ಒಂದು ಮಗು ಇದೆ. ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದಾರೆ. ಸುರೇಶ್ ಗಾರೆ ಕೆಲಸ ಮಾಡಿಕೊಂಡಿದ್ದು, ಶ್ವೇತಾ ನೆಲಗೆದರನಹಳ್ಳಿಯಲ್ಲಿರುವ ಶ್ರೀ ಪೇಯಿಂಟ್ಸ್ ಎಂಬ ಸಣ್ಣ ಪೇಯಿಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಪೇಯಿಂಟ್ ತಯಾರಿಸಲು ಬಳಸುವ ಕಚ್ಚಾ ವಸ್ತುಗಳನ್ನು ಮಿಕ್ಸ್ ಮಾಡುವ ಯಂತ್ರಕ್ಕೆ ಹಾಕಲಾಗಿತ್ತು. ಯಂತ್ರದ ಸ್ವಿಚ್ ಆಫ್ ಮಾಡಿ ಪೇಯಿಂಟ್ ತೆಗೆದುಕೊಳ್ಳುವ ಬದಲು ಶ್ವೇತಾ, ಹಾಗೆಯೇ ಪೇಯಿಂಟ್ ತೆಗೆಯುತ್ತಿದ್ದರು. ಈ ವೇಳೆ ಕೂದಲು ಗ್ರೈಂಡರ್‌ಗೆ ಸಿಲುಕಿಕೊಂಡಿದೆ. ಆಗ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಆದರೆ, ಗ್ರೈಂಡರ್‌ನ ಸದ್ದಿಗೆ ಯಾರಿಗೂ ಕೇಳಿಸಿಲ್ಲ. ಪರಿಣಾಮ ಗ್ರೈಂಡರ್ ತಿರುಗುವಾಗ ಶ್ವೇತಾರ ತಲೆ ತುಂಡಾಗಿದೆ. ಕೆಲ ಹೊತ್ತಿನ ಬಳಿಕ ಗ್ರೈಂಡರ್ ಬಳಿ ಸಹಕಾರ್ಮಿಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಪೊಲೀಸರು ಮತ್ತು ಕಾರ್ಖಾನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಗ್ರೈಂಡರ್ ನಿಂದ ಹೊರ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಶ್ವೇತಾ ಪತಿ ಸುರೇಶ್ ನೀಡಿದ ದೂರಿನ ಮೇರೆಗೆ ಶ್ರೀಪೇಯಿಂಟ್ಸ್ ಕಾರ್ಖಾನೆ ಮಾಲೀಕರ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.