ಕೊಚ್ಚಿ: ಚಿಕಿತ್ಸೆ ನೀಡುವ ವೇಳೆ ವೈದ್ಯೆಯನ್ನೇ ವ್ಯಕ್ತಿಯೊಬ್ಬ ಚುಚ್ಚಿ ಕೊಲೆಗೈದಿರುವ ಘಟನ ಕೇರಳದ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಬುಧವಾರ ( ಮೇ 10 ರಂದು) ನಡೆದಿರುವುದು ವರದಿಯಾಗಿದೆ.
ಘಟನೆ ಹಿನ್ನೆಲೆ: ಪುಯಪಲ್ಲಿ ಚೆರುಕರಕೋಣಂ ನಿವಾಸಿ, ವೃತ್ತಿಯಲ್ಲಿ ಶಿಕ್ಷಕರಾಗಿರುವ ಸಂದೀಪ್ (42) ಎಂಬ ವ್ಯಕ್ತಿ ಪೊಲೀಸರ ತುರ್ತು ಸಂಖ್ಯೆಗೆ ʼನನ್ನನ್ನು ನನ್ನ ಕುಟುಂಬದಿಂದ ರಕ್ಷಿಸಿʼ ಎಂದು ಕುಡಿದ ಮತ್ತಿನಲ್ಲಿ ಕರೆ ಮಾಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ ವೇಳೆ ಕರೆ ಮಾಡಿದ್ದ ಸಂದೀಪ್ ಕಾಲಿಗೆ ಗಾಯ ಮಾಡಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಅವರನ್ನು ಪೊಲೀಸರು ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ವೇಳೆ 22 ವರ್ಷದ ವಂದನಾ ದಾಸ್ ಎಂಬ ವೈದ್ಯೆಯೊಬ್ಬರು ಸಂದೀಪ್ ಅವರ ಗಾಯಗೊಂಡ ಕಾಲಿಗೆ ಬ್ಯಾಂಡೇಜ್ ಮಾಡಲು ಹೋಗಿದ್ದಾರೆ. ಬ್ಯಾಂಡೇಜ್ ಮಾಡುವಾಗ ಸಂದೀಪ್ ಇದ್ದಕ್ಕಿದ್ದಂತೆ ಅಲ್ಲೇ ಇದ್ದ ಕತ್ತರಿ ಮತ್ತು ಒಂದು ಚಿಕ್ಕಚಾಕುವಿನಿಂದ ವೈದ್ಯೆ ಮೇಲೆ ಹಲ್ಲೆ ಮಾಡಿದ್ದಾನೆ. ಜೀವ ಭಯದಿಂದ ಗಾಯಗೊಂಡು ಹೊರಬಂದ ವೈದ್ಯೆ ಕಾಪಾಡಿ ಎಂದಿದ್ದಾರೆ. ಸಿಟ್ಟಿನಲ್ಲಿದ್ದ ಸಂದೀಪ್ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಮತ್ತೆ ಹಲ್ಲೆಗೈದಿದ್ದಾನೆ.
ಆಸ್ಪತ್ರೆ ಕೋಣೆ ಹೊರಗಿದ್ದ ಪೊಲೀಸರು ಆತನನ್ನು ತಡೆಯಲು ಯತ್ನಿಸಿದ್ದಾಗ ಪೊಲೀಸರ ಮೇಲೂ ಹಲ್ಲೆಗೈದು, ಆಸ್ಪತ್ರೆಯ ಕೆಲ ಸಾಮಾಗ್ರಿಗಳನ್ನು ಪುಡಿಗೈದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ವೈದ್ಯೆಯನ್ನು ಹೆಚ್ಚಿನ ಚಿಕಿತ್ಸೆಗೆ ತಿರುವನಂತಪುರಂ ಆಸ್ಪತ್ರೆಗೆ ದಾಖಲು ಮಾಡಿದರೂ ಆಕೆ ಮೃತಪಟ್ಟಿದ್ದಾರೆ.
ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವೈದ್ಯೆಗೆ ಹಲ್ಲೆಗೈದು ಹತ್ಯೆ ಮಾಡಲು ಕಾರಣ ಏನು ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಖಂಡಿಸಿ ಕೇರಳದಲ್ಲಿ ವೈದ್ಯರು ಪ್ರತಿಭಟನೆ ನಡೆಸಿ ಬೀದಿಗೆ ಇಳಿದಿದ್ದಾರೆ.