ಆ್ಯಂಟಿಗುವಾ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಶಾಯ್ ಹೋಪ್ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ಬೃಹತ್ ಮೊತ್ತ ಚೇಸ್ ಮಾಡಿದೆ.
ಆ್ಯಂಟಿಗುವಾದ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 325 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 48.5 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ ಅರ್ಧಶತಕ ಬಾರಿಸಿ ಮಿಂಚಿದರು. ಬ್ರೂಕ್ 71 ರನ್ ಮಾಡಿದರೆ, ಫಿಲ್ ಸಾಲ್ಟ್ 45 ರನ್, ಜ್ಯಾಕ್ ಕ್ರಾವ್ಲಿ 48 ರನ್, ಸ್ಯಾಮ್ ಕರ್ರನ್ 38 ರನ್ ಮತ್ತು ಬ್ರೈಡನ್ ಕರ್ಸ್ ಅಜೇಯ 31 ರನ್ ಗಳಿಸಿದರು.
ವಿಂಡೀಸ್ ಪರ ರೊಮಾರಿಯೊ ಶೆಫರ್ಡ್, ಮೊಟಿ ಮತ್ತು ಒಶಾನ್ ಥಾಮಸ್ ತಲಾ ಎರಡು ವಿಕೆಟ್ ಪಡೆದರು. ಕ್ಯಾರಿ ಮತ್ತು ಜೋಸೆಫ್ ತಲಾ ಒಂದು ವಿಕೆಟ್ ಕಿತ್ತರು.
ಚೇಸಿಂಗ್ ಆರಂಭಿಸಿದ ವಿಂಡೀಸ್ ಗೆ ಅಥನಾಜೆ ಮತ್ತು ಬ್ರಾಂಡನ್ ಕಿಂಗ್ ಮೊದಲ ವಿಕೆಟ್ ಗೆ ಶತಕದ ಜೊತೆಯಾಟದ ನೆರವು ನೀಡಿದರು. ಅಥನಾಜೆ 66 ರನ್ ಮಾಡಿದರೆ ಕಿಂಗ್ 35 ರನ್ ಗಳಿಸಿದರು. ಹೆಟ್ಮೈರ್ 32 ರನ್ ಮಾಡಿದರು. ಆದರೆ ಗಟ್ಟಿಯಾಗಿ ನಿಂತ ನಾಯಕ ಹೋಪ್ ಕೇವಲ 83 ಎಸೆತಗಳಲ್ಲಿ ಏಳು ಸಿಕ್ಸರ್ ನೆರವಿನಿಂದ ಅಜೇಯ 109 ರನ್ ಗಳಿಸಿದರು.
ಅದರಲ್ಲೂ ಕೊನೆಯ ಎರಡ ಓವರ್ ಗಳಲ್ಲಿ 19 ರನ್ ಬೇಕಿದ್ದಾಗ ಸ್ಯಾಮ್ ಕರ್ರನ್ ಅವರ ಒಂದೇ ಓವರ್ ನಲ್ಲಿ ಮೂರು ಸಿಕ್ಸರ್ ಸಿಡಿಸಿ ತಂಡಕ್ಕೆ ಜಯ ತಂದಿತ್ತರು.