ಸಕಲೇಶಪುರ: ವಿಧಾನಸಭೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ, ಸ್ಪರ್ಧಿಗಳ ಪತ್ನಿಯರು ಅಖಾಡಕ್ಕೆ ಧುಮುಕಿದ್ದು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ತಾಲೂಕಿನಲ್ಲಿ ಜೆಡಿಎಸ್ ಪರವಾಗಿ ಜಿಪಂ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ ಅವರು ತಮ್ಮ ಪತಿಯ ಪರ ಭರ್ಜರಿ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಇವರಿಗೆ ಸಡ್ಡು ಹೊಡೆ ಯಲು ಕಾಂಗ್ರೆಸ್ ಅಭ್ಯರ್ಥಿ ಮುರಳಿ ಮೋಹನ್‌ರ ಪತ್ನಿ ನಂದಿನಿ ಮುರಳಿಮೋಹನ್ ಅವರು ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ.
ಮತಬೇಟೆ: ಕಾಂಗ್ರೆಸ್‌ಗೆ ಸಾಂಪ್ರದಾಯಿಕವಾಗಿ ದಲಿತ, ಅಲ್ಪಸಂಖ್ಯಾತ ಮತಬ್ಯಾಂಕ್ ಇದ್ದು ಈ ಹಿನ್ನೆಲೆ ಒಕ್ಕಲಿಗ ಹಾಗೂ ವೀರಶೈವ ಮತ ಸೆಳೆದು ಗೆಲುವು ಸಾಧಿಸಲು ಹೆಚ್ಚಿನ ಪ್ರಯತ್ನ ಮಾಡ ಬೇಕಿದೆ. ಹೀಗಾಗಿ ನಂದಿನಿ ಮುರಳಿ ಮೋಹನ್ ಭರ್ಜರಿ ಮತಬೇಟೆಗೆಇಳಿದಿದ್ದಾರೆ.
ಕ್ಷೇತ್ರದಲ್ಲಿ ಬಹಿರಂಗವಾಗಿ ಕಾಣಿಸುತ್ತಿಲ್ಲ: ಇದೇ ವೇಳೆ ಬಿಜೆಪಿ ಪ್ರಬಲ ಟಿಕೆಟ್ ಅಕಾಂಕ್ಷಿ ಸಿಮೆಂಟ್ ಮಂಜುನಾಥ್ ಪರ ಪ್ರತಿಭಾ ಮಂಜುನಾಥ್ ಸಹ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಇನ್ನೂ ಬಿಜೆಪಿ ಟಿಕೆಟ್ ಘೋಷಣೆಯಾಗದ ಕಾರಣ ಬಹಿರಂಗವಾಗಿ ಹೆಚ್ಚಾಗಿ ಕಾಣುತ್ತಿಲ್ಲ. ಇನ್ನು ಕಳೆದ ಬಾರಿ ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾರ್ವೆ ಸೋಮಶೇಖರ್‌ರ ಧರ್ಮಪತ್ನಿ ದಾಮಿನಿ ಸಹ ಈಗಾಗಲೇ ಕ್ಷೇತ್ರಕ್ಕೆ ಆಗಮಿಸಿ ಒಂದು ಸುತ್ತು ಬಿಜೆಪಿಯ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಹೋಗಿದ್ದರೆ. ಮುರಳಿ ಮೋಹನ್ ಹಾಗೂ ಸಿಮೆಂಟ್ ಮಂಜುನಾಥ್‌ರ ಪತ್ನಿಯರು ತಮ್ಮ ಚಿಕ್ಕ ಮಕ್ಕಳನ್ನು ನಿಭಾಯಿಸುವ ಜತೆಗೆ ಅನಿವಾರ್ಯವಾಗಿ ರಾಜಕೀಯ ರಂಗ ಪ್ರವೇಶ ಮಾಡಬೇಕಾಗಿದೆ.
ಮಹಿಳಾ ಮತಕ್ಕೆ ಕಾರ್ಯತಂತ: ಕಳೆದ 3 ಚುನಾ ವಣೆಗಳಲ್ಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಗೆಲುವಿನ ಹಿಂದೆ ಅವರ ಧರ್ಮಪತ್ನಿ ಚಂಚಲಾ ಕುಮಾರಸ್ವಾಮಿ ಅವರ ಪಾತ್ರವೂ ಬಹಳ ದೊಡ್ಡದಿದೆ. ಮಹಿಳೆಯರ ಮತಗಳನ್ನು ಮಾತ್ರವಲ್ಲ, ಎಲ್ಲಾ ವರ್ಗದವರ ಮತಗಳನ್ನು ಜೆಡಿಎಸ್ ಪರ ಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ನಾಲ್ಕನೇ ಬಾರಿಗೆ ತಮ್ಮ ಪತಿಯನ್ನು ಗೆಲ್ಲಿಸಿಕೊಂಡು ಬರಲು ಈಗಾಗಲೇ ಭರ್ಜರಿ ಚುನಾವಣೆ ಕಾರ್ಯತಂತ್ರ ರೂಪಿಸಿದ್ದಾರೆ.
ಈ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಮುರಳಿಮೋಹನ್ ಸಹ ಚುನಾವಣಾ ಅಖಾಡಕ್ಕೆ ತಮ್ಮ ಪತ್ನಿ ನಂದಿನಿ ಮುರಳಿಮೋಹನ್‌ರನ್ನು ಇಳಿಸಿದ್ದು ಕಳೆದ 1 ತಿಂಗಳಿನಿಂದ ಕ್ಷೇತ್ರವನ್ನು ಪ್ರತ್ಯೇಕವಾಗಿ ಅವರು ಸುತ್ತುತ್ತಿದ್ದಾರೆ. ಈ ಮೂಲಕ, ಮಹಿಳೆಯರ ಮತ ಗಳನ್ನು ಸೆಳೆಯಲು ಹೆಚ್ಚಿನ ಪ್ರಯತ್ನ ಮಾಡುತ್ತಿದ್ದಾರೆ.
ಕ್ಷೇತ್ರ ದೊಡ್ಡದಾಗಿದ್ದು ಕುಮಾರಸ್ವಾಮಿ ಅವರ ಜತೆ ನಾನು ಪ್ರತಿ ಬಾರಿಯಂತೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ಇದರಲ್ಲಿ ವಿಶೇಷತೆ ಏನಿಲ್ಲ. ಈ ಬಾರಿಯೂ ಗೆಲುವು ಸಾಧಿಸುತ್ತಾರೆ.
● ಚಂಚಲಾ ಕುಮಾರಸ್ವಾಮಿ, ಜೆಡಿಎಸ್
ಕಳೆದ ಒಂದು ದಶಕದಿಂದ ಮುರಳಿಮೋಹನ್ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು ಪ್ರಪ್ರಥಮವಾಗಿ ಚುನಾವಣೆ ಎದುರಿಸುತ್ತಿದ್ದಾರೆ. ಉತ್ತಮ ಸ್ಪಂದನೆ ದೊರಕುತ್ತಿದ್ದು ಕಾಂಗ್ರೆಸ್ ಗೆಲುವು ಖಚಿತ.
● ನಂದಿನಿ, ಮುರಳಿ ಮೋಹನ್‌ರ ಪತ್ನಿ
–ಸುಧೀರ್ ಎಸ್.ಎಲ್