ಶಿವಮೊಗ್ಗ: ದೇಶದಲ್ಲಿ ಆರ್ ಎಸ್ಎಸ್ ಇಲ್ಲದಿದ್ದರೆ ಭಾರತವಿಂದು ಭಾರತವಾಗಿ ಉಳಿಯುತ್ತಿರಲಿಲ್ಲ, ಪಾಕಿಸ್ಥಾನದಂತಾಗುತ್ತಿತ್ತು. ಹಿಂದುಸ್ಥಾನವು ಹಿಂದುಸ್ಥಾನವಾಗಿ ಉಳಿಯಲು ದೇಶಭಕ್ತರನ್ನು ತಯಾರಿಸುತ್ತಿರುವ ಆರ್ ಎಸ್ಎಸ್ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಕೋವಿಂದ್, ಕರ್ನಾಟಕದ ರಾಜ್ಯಪಾಲ ತ್ಯಾವರಚಂದ್ ಗೆಹ್ಲೋಟ್, ನಾನು ಎಲ್ಲರೂ ಆರ್ ಎಸ್ ಎಸ್ ನವರೇ. ದೇಶದಲ್ಲಿ, ರಾಜ್ಯದಲ್ಲಿ ಇಂದು ಆರ್ ಎಸ್ಎಸ್ ನವರು ನಿಜವಾಗಿಯೂ ಆಡಳಿತ ನಡೆಸುತ್ತಿದ್ದೇವೆ. ಬದಲಾಗಿ ಆರ್ ಎಸ್ಎಸ್ ಆಡಳಿತ ನಡೆಸುತ್ತಿಲ್ಲ ಎಂದರು.
ದೇಶ, ರಾಜ್ಯದ ಜನರಿಗೆ ಮೂಲಸೌಕರ್ಯ ಕೊಡಲು, ಅಭಿವೃದ್ಧಿ ಮಾಡಲು ಏನು ಮಾಡಬೇಕು ಎಂಬ ಸಂಸ್ಕಾರವನ್ನು ನಮಗೆ ಆರ್ ಎಸ್ಎಸ್ ನೀಡಿದೆ. ಇದರ ಪರಿಕಲ್ಪನೆಯೇ ಎಚ್.ಡಿ.ಕುಮಾರಸ್ವಾಮಿಯವರಿಗಿಲ್ಲ. ಅವರ ಮೆದುಳಿಗೆ ಪೊರೆ ಬಂದಿದೆ. ಇಡೀ ಹಿಂದು ಸಮುದಾಯ ನರೇಂದ್ರ ಮೋದಿ ಅವರ ಜೊತೆಗಿದೆ. ದೇಶಭಕ್ತ ಮುಸ್ಲಿಮರು ಬಿಜೆಪಿ ಜೊತೆಗೆ ಬರುತ್ತಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಿಂದುಗಳ ಓಟಂತೂ ನಮಗೆ ಸಿಗುವುದಿಲ್ಲ ಎಂದು ಮುಸ್ಲಿಮರನ್ನು ಸಂತೃಪ್ತಗೊಳಿಸಬೇಕು ಎಂದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಆಗಾಗ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಪರವಾಗಿ ಮಾತನಾಡುತ್ತಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಥಮ ಮಹಿಳೆ ಸವಿತಾ ಕೋವಿಂದ್ ಚಹಾಕೂಟ
ಇಂದು ಎಲ್ಲ ಕ್ಷೇತ್ರದಲ್ಲೂ ಆರ್ ಎಸ್ಎಸ್ ಇದೆ. ಹಾಗೆಂದ ಮಾತ್ರಕ್ಕೆ ಆರ್ ಎಸ್ಎಸ್ ಆಡಳಿತ ನಡೆಸುತ್ತಿದೆ ಎಂಬುದು ವಿಪಕ್ಷಗಳ ಭ್ರಮೆ. ಮುಸ್ಲಿಮರ ಓಟಿಗಾಗಿ ಆರ್ ಎಸ್ ಎಸ್ ಟೀಕೆ ಮಾಡಿದರೆ ನಮ್ಮ ಅಭ್ಯಂತವಿಲ್ಲ. ಆದರೆ ಆರ್ ಎಸ್ಎಸ್ ಟೀಕೆ ಮಾಡುವುದರಿಂದ ಅಲ್ಲೊಂದು ಇಲ್ಲೊಂದು ಸೀಟುಗಳನ್ನು ಗೆಲ್ಲುತ್ತಿರುವ ಕಾಂಗ್ರೆಸ್ ಜೆಡಿಎಸ್ ಗೆ ಅವುಗಳನ್ನು ಗೆಲ್ಲಲೂ ಸಾಧ್ಯವಿಲ್ಲ. ಆಗ ಇಡೀ ದೇಶದಲ್ಲಿ ಕಾಂಗ್ರೆಸ್ ಅನ್ನು ಹುಡುಕುವ ಕಾಲ ಬರಲಿದೆ.
ಗಾಂಧಿಗೆ ಅವಮಾನ: ವಿಪಕ್ಷಗಳು ಆರ್ ಎಸ್ಎಸ್ ಟೀಕೆ ಮಾಡಿದರೆ ಮಹಾತ್ಮ ಗಾಂಧಿಯವರನ್ನೇ ಅಪಮಾನ ಮಾಡಿದಂತೆ. ಆರ್ ಎಸ್ಎಸ್ ಎಲ್ಲರಿಗೂ ಸಂಸ್ಕಾರ ನೀಡುತ್ತಿದೆ. ಶಿಕ್ಷಣ ನೀಡುತ್ತಿದೆ. ವೈದ್ಯಕೀಯ ಸೇವೆ ನೀಡುತ್ತಿದೆ. ಆರ್ ಎಸ್ಎಸ್ ನಲ್ಲಿ ತಯಾರಾದವರು ದೇಶವನ್ನು ಸಂರಕ್ಷಣೆ ಮಾಡುತ್ತಾರೆ. ಆರ್ ಎಸ್ಎಸ್ ನಿಂದ ಪ್ರೇರಣೆ ಪಡೆದ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದರೆ ತಪ್ಪೇನಿದೆ. ಕೂಡಲೇ ಎಚ್.ಡಿ.ಕುಮಾರಸ್ವಾಮಿ ಅವರ ಕ್ಷಮೆ ಕೇಳಬೇಕು ಎಂದು ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.