Advertisement
ಸರ್ಕಾರ ವೈಮಾನಿಕ ಕ್ಷೇತ್ರವನ್ನು ಉತ್ತೇಜಿಸಲು ಏರೋಸ್ಪೇಸ್ ಪಾರ್ಕ್, ಏರೋಸ್ಪೇಸ್ ನೀತಿ ಸೇರಿದಂತೆ ಹಲವು ಘೋಷಣೆಗಳನ್ನು ಮಾಡಿದೆ. ಆದರೆ, ಅವುಗಳು ಕಾರ್ಯರೂಪದಲ್ಲಿ ಬರುತ್ತಿರುವುದು ವಿಳಂಬವಾಗುತ್ತಿರುವುದರಿಂದಪರೋಕ್ಷವಾಗಿ ರಾಜ್ಯದ ವೈಮಾನಿಕ ಕ್ಷೇತ್ರದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ. ಸರ್ಕಾರ ಸುಮಾರು ಏಳು ವರ್ಷಗಳ ಹಿಂದೆಯೇ ಏರೋಸ್ಪೇಸ್ ಪಾರ್ಕ್ ಘೋಷಿಸಿದೆ. 732 ಎಕರೆಯಲ್ಲಿ ವಿಮಾನ ತಯಾರಿಕೆ ಕಂಪನಿಗಳಿಗೆ ಹಾಗೂ 252 ಎಕರೆಯಲ್ಲಿ ವಿಶೇಷ ಆರ್ಥಿಕ ವಲಯ ಸೇರಿದಂತೆ 988 ಎಕರೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ
ವಿಮಾನ ನಿಲ್ದಾಣ (ಕೆಐಎಎಲ್) ಬಳಿ ಏರೋಸ್ಪೇಸ್ ಪಾರ್ಕ್ ಕೂಡ ತಲೆಯೆತ್ತಿದೆ. ಆದರೆ, ಇದುವರೆಗೆ ಅಲ್ಲಿ ಏಳು ಕಂಪನಿಗಳು ಕೂಡ ಬಂದಿಲ್ಲ.
ಏರೋಸ್ಪೇಸ್ ಪಾರ್ಕ್‌ನಲ್ಲಿ ಇನ್ನೂ ಸಮರ್ಪಕ ನೀರಿನ ಸೌಲಭ್ಯವಿಲ್ಲ. ವಿದ್ಯುತ್ ಸಂಪರ್ಕ ಇದ್ದರೂ, ಶಾಶ್ವತ ವಿದ್ಯುತ್ ಪೂರೈಕೆಗೆ ಅಲ್ಲೊಂದು ಗ್ರಿಡ್ ಸ್ಥಾಪಿಸಿಲ್ಲ. ಸೂಕ್ತ ಸಾರಿಗೆ ಸಂಪರ್ಕವೂ ಇಲ್ಲ. ಅಂದಾಜು ಮೂರು ಸಾವಿರ ಕೈಗಾರಿಕೆಗಳು ಬರುವ ಈ ಜಾಗದಲ್ಲಿ 30ರಿಂದ 40 ಉದ್ಯಮಗಳು ಬರುತ್ತಿವೆ. ಅದರಲ್ಲೂ ಏರೋಸ್ಪೇಸ್‌ಗೆ ಮೀಸಲಿಟ್ಟ
988 ಎಕರೆಯಲ್ಲಿ ಬೆರಳೆಣಿಕೆಯಷ್ಟು ಕೈಗಾರಿಕೆಗಳು ಮಾತ್ರ ಬಂದಿವೆ. ಇದರಿಂದ ವೈಮಾನಿಕ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಸ್ವತಃ ಏರೋಸ್ಪೇಸ್ ಪಾರ್ಕ್‌ನಲ್ಲಿ
ಕೈಗಾರಿಕೆಯನ್ನು ಸ್ಥಾಪಿಸುತ್ತಿರುವ ಕರ್ನಾಟಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಘ (ಕಾಸಿಯಾ) ಮಾಜಿ ಅಧ್ಯಕ್ಷ ವಿ.ಕೆ.ದೀಕ್ಷಿತ್ ಹೇಳುತ್ತಾರೆ.
Related Articles
Advertisement
ಹಂತ-ಹಂತವಾಗಿ ಬರಲಿವೆ; ಆಯುಕ್ತರು: ಆದರೆ, ಈಗಾಗಲೇ 20ರಿಂದ 23 ಕಂಪೆನಿಗಳು ಏರೋಸ್ಪೇಸ್ ಪಾರ್ಕ್‌ನಲ್ಲಿ ಬಂದಿವೆ. ಈ ಪೈಕಿ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಂಪೆನಿಗಳು ಇದೇ ಫೆ. 15ರಂದು ಉದ್ಘಾಟನೆಗೊಳ್ಳಲಿವೆ. ಮಾರ್ಚ್‌ನಲ್ಲಿ ಇನ್ನೂ ನಾಲ್ಕೈದು ಕಂಪೆನಿಗಳು ಕಾರ್ಯಾರಂಭ ಮಾಡಲಿವೆ. ಹೀಗೆ ಹಂತ-ಹಂತವಾಗಿ ಈ ಕೆಲಸ ಆಗುತ್ತಿದೆ. ಪ್ರಮುಖ ಮೂಲಸೌಕರ್ಯಗಳ ಕೊರತೆ ಯಾವುದೂ ಇಲ್ಲ ಎಂದು ಕೈಗಾರಿಕೆಇಲಾಖೆ ಆಯುಕ್ತ ಗೌರವ್ ಗುಪ್ತ ಸ್ಪಷ್ಟಪಡಿಸುತ್ತಾರೆ. “ನೀತಿ ಸಮರ್ಪಕ ಅನುಷ್ಠಾನ ಆಗ್ತಿಲ್ಲ’: ರಾಜ್ಯದಲ್ಲಿ ಏರೋಸ್ಪೇಸ್ ಪಾರ್ಕ್, ಏರೋಸ್ಪೇಸ್ ನೀತಿ ಇದೆ. ಆದರೆ, ಅದು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಮೂಲಸೌಕರ್ಯಗಳ ಕೊರತೆ ಒಂದೆಡೆಯಾದರೆ, ನೀತಿಯ ಸಮರ್ಪಕ ಅನುಷ್ಠಾನದ ಕೊರತೆ ಮತ್ತೂಂದೆಡೆ ಇದೆ. ಏರೋಸ್ಪೇಸ್ ನೀತಿ-2014-19ರಲ್ಲಿ ಐದು ವರ್ಷಗಳಲ್ಲಿ ಎಲ್ಲ ಮೂಲಸೌಕರ್ಯ ಕಲ್ಪಿಸಲಾಗುವುದು. ಏಕಗವಾಕ್ಷಿ ಪದ್ಧತಿ ಅಡಿ ಕೈಗಾರಿಕೆಗಳಿಗೆ ಸಂಬಂಧಿಸಿದ ಮಂಜೂರಾತಿ ದೊರೆಯಲಿದೆ ಎಂದು ಹೇಳಲಾಗಿದೆ. ಆದರೆ, ವಾಸ್ತವವಾಗಿ ಮಂಜೂರಾತಿಗೆ ತಿಂಗಳುಗಟ್ಟಲೆ ಅಲೆಯಬೇಕಿದೆ
ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ ಅಧ್ಯಕ್ಷ ಎ. ಪದ್ಮನಾಭ ಬೇಸರ ವ್ಯಕ್ತಪಡಿಸುತ್ತಾರೆ. *ವಿಜಯಕುಮಾರ್ ಚಂದರಗಿ