Advertisement

Puttur: ಟ್ರೀ ಪಾರ್ಕ್‌ ನಿರ್ಲಕ್ಷ್ಯಕ್ಕೆ ದುಡ್ಡಿನ ಕೊರತೆ ನೆಪ

02:44 PM Sep 25, 2024 | Team Udayavani |

ಪುತ್ತೂರು: ನಗರದ ಬೀರಮಲೆ ಸಾಲುಮರದ ತಿಮ್ಮಕ್ಕ ಪಾರ್ಕ್‌ ನಿರ್ವಹಣೆಗೆ ಬಿಡಿಗಾಸು ಅನುದಾನ ನೀಡುತ್ತಿಲ್ಲ ಅನ್ನುವ ಕಾರಣ ನೆಪವಾಗಿಟ್ಟುಕೊಂಡು ವೃಕ್ಷೋದ್ಯಾನವನ ಪಾಳು ಬಿದ್ದಿದೆ ಅನ್ನುವ ಅಂಶವೀಗ ಬೆಳಕಿಗೆ ಬಂದಿದೆ.

Advertisement

ಪಾರ್ಕ್‌ ಅವ್ಯವಸ್ಥೆಯ ಬಗ್ಗೆ ಸೆ.24 ರಂದು ಉದಯವಾಣಿ ಸುದಿನ ಪ್ರಕಟಿಸಿದ ಸಮಗ್ರ ವರದಿ ಸಂಚಲನ ಮೂಡಿಸಿದೆ. ಪರಿಸರ ಪ್ರೇಮಿಯೋರ್ವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪಾರ್ಕ್‌ ನಿರ್ವಹಣೆಗೆ ಅರಣ್ಯ ಇಲಾಖೆ ಕಾಳಜಿ ತೋರದಿರುವ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಅರಣ್ಯ ಇಲಾಖೆಗೆ ಕರೆ ಮಾಡಿ ನಿರ್ವಹಣೆ ಸಾಧ್ಯವಿಲ್ಲದಿದ್ದರೆ ಪಾರ್ಕ್‌ ಹೆಸರು ಬದಲಾಯಿಸುವಂತೆ ಆಗ್ರಹಿಸಿದ್ದಾರೆ.

ನಿರ್ವಹಣೆಗೆ ದುಡ್ಡಿಲ್ಲ
ನಿರ್ವಹಣೆ ವಿಚಾರದಲ್ಲಿ ಅರಣ್ಯ ಇಲಾಖೆಯೊಳಗೆ ಸಮನ್ವಯತೆ ಇಲ್ಲ ಅನ್ನುವ ಆರೋಪವೂ ಕೇಳಿ ಬಂದಿದೆ. ಒಂದು ಮೂಲಗಳ ಮಾಹಿತಿ ಪ್ರಕಾರ ನಿರ್ವಹಣೆಗೆ ದುಡ್ಡು ಬರುತ್ತಿದೆ. ಆದರೆ ಅದನ್ನು ಸಮರ್ಪಕವಾಗಿ ವಿನಿಯೋಗಿಸುತ್ತಿಲ್ಲ. ಅನುದಾನ ದುರ್ಬಳಕೆ ಆಗುತ್ತಿದೆ ಎನ್ನುವ ಆರೋಪ ಕೇಳಿ ಬಂದರೆ, ಇನ್ನೊಂದು ಮೂಲಗಳು ಕಳೆದ ಕೆಲ ವರ್ಷಗಳಿಂದ ನಿರ್ವಹಣೆಗೆ ಸರಕಾರದಿಂದ ದುಡ್ಡು ಬಂದಿಲ್ಲ. ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಬಿಡುಗಡೆಯಾಗಿಲ್ಲ ಎಂಬ ಮಾತು ಕೇಳಿ ಬಂದಿದೆ.

ದುರಸ್ತಿಗೂ ಅನುಮತಿ ಬೇಕಂತೆ..?
ಪಾರ್ಕ್‌ನಲ್ಲಿ ಏಜೆನ್ಸಿ ವತಿಯಿಂದ ಓರ್ವ ಸಿಬಂದಿ, ಅರಣ್ಯ ಇಲಾಖೆಯಿಂದ ಓರ್ವ ಸಿಬಂದಿಯನ್ನು ನಿಯೋಜಿಸಲಾಗಿದೆ. ಈ ಸಿಬಂದಿ ಪ್ರವಾಸಿಗರ ಮೇಲೆ ನಿಗಾ ಇರಿಸುವುದಷ್ಟೇ. ನಿರ್ವಹಣೆ ಜವಾಬ್ದಾರಿ ಯಾರು ಎನ್ನುವ ಬಗ್ಗೆ ಯಾರಲ್ಲೂ ಸ್ಪಷ್ಟ ಮಾಹಿತಿ ಇಲ್ಲ. ವಾಕಿಂಗ್‌ ಪಾಥ್‌ಗೆ ಮರ ಬಿದ್ದು ಸಂಪರ್ಕವೇ ಕಡಿತಗೊಂಡಿದ್ದರೂ ಅರಣ್ಯ ಇಲಾಖೆಯ ಸ್ಥಳೀಯ ಸಿಬಂದಿಗೆ ತೆರವು ಮಾಡುವ ಅಧಿಕಾರ ಇಲ್ಲ. ಮಹಜರು ನಡೆಸಿ ಡಿಎಫ್‌ಒಗೆ ವರದಿ ಸಲ್ಲಿಸಿ ಅಲ್ಲಿಂದ ಅನುಮತಿಗೆ ಕಾಯಬೇಕು. ಇಂತಹ ದುಃಸ್ಥಿತಿಯಿಂದ ದುರಸ್ತಿ ಕಾರ್ಯ ಬೇಗ ಆಗದು ಅನ್ನುವ ಪರಿಸ್ಥಿತ ಇದೆ.

ಸಾಲು ಮರದ ತಿಮ್ಮಕ್ಕ ಪಾರ್ಕ್‌ ದುಸ್ಥಿತಿಯ ಬಗ್ಗೆ ಅರಣ್ಯ ಇಲಾಖೆಯ ಡಿಎಫ್‌ಒ ಅವರ ಬಳಿ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.
-ಮುಲ್ಲೈ ಮುಗಿಲನ್‌ ಜಿಲ್ಲಾಧಿಕಾರಿ ದ.ಕ.

Advertisement

ಪಾರ್ಕ್‌ ನಿರ್ವಹಣೆ ಸಮಸ್ಯೆಯ ವಿಚಾರ ಗಮನಕ್ಕೆ ಬಂದಿದೆ. ಅನುದಾನ ಕಡಿಮೆ ಇರುವ ಕಾರಣ ಕೆಲಸ ಆಗಿಲ್ಲ. ಬೇರೆ ಮೂಲಗಳನ್ನು ಬಳಸಿಕೊಂಡು ದುರಸ್ತಿಗೆ ಬಗ್ಗೆ ಯೋಜನೆ ರೂಪಿಸಲಾಗುವುದು.
-ಸುಬ್ಬಯ್ಯ ಎಸಿಎಫ್‌,ಪುತ್ತೂರು ಉಪ ವಲಯ ಅರಣ್ಯ ವಿಭಾಗ

ಟ್ರೀ ಪಾರ್ಕ್‌ ನಮ್ಮ ವ್ಯಾಪ್ತಿಗೆ ಬರುತ್ತಿದ್ದು ದುರಸ್ತಿ ನಡೆಸಲು ಅನುದಾನ ಬಂದಿಲ್ಲ. ಪಾರ್ಕ್‌ನ ಸ್ವಂತ ಆದಾಯದಿಂದಲೇ ನಿರ್ವಹಣೆ ಮಾಡಬೇಕು. ಆದರೆ ಅಷ್ಟು ಆದಾಯ ಅಲ್ಲಿ ಸಂಗ್ರಹವಾಗುತ್ತಿಲ್ಲ .ಅಲ್ಲಿನ ಕೆಲವು ಅಗತ್ಯಗಳ ಬಗ್ಗೆ ಪಟ್ಟಿ ಮಾಡಿ ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನ ಬಿಡುಗಡೆಯಾದ ಬಳಿಕ ಕೆಲಸ ಪ್ರಾರಂಭಗೊಳ್ಳಲಿದೆ.
-ಉಲ್ಲಾಸ್‌, ಉಪವಲಯ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next