Advertisement

High Court: ನಕ್ಸಲ್‌ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶನ

09:36 AM Nov 22, 2024 | Team Udayavani |

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಪೊಲೀಸ್‌ ಠಾಣೆಯಲ್ಲಿ 2012ರಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳ ಸಂಬಂಧ ವಿಚಾರಣೆಗೆ ಒಳಪಡಿಸಲು ನಕ್ಸಲ್‌ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಕೇರಳ ಪೋಲೀಸರಿಂದ ಬಂಧನಕ್ಕೆ ಒಳಗಾಗಿರುವ ಸಾವಿತ್ರಿ ವಿರುದ್ಧ ಬಾಡಿ ವಾರಂಟ್‌ ಜಾರಿಗೊಳಿಸಬೇಕು ಎಂದು ಕೋರಿ ರಾಜ್ಯ ಸರಕಾರ ಸಲ್ಲಿಸಿರುವ ಮನವಿಯನ್ನು ಮರು ಪರಿಶೀಲಿಸುವಂತೆ ಬೆಳ್ತಗಂಡಿಯ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

Advertisement

ಈ ಕುರಿತು ಬೆಳ್ತಂಡಿಯ ವೇಣೂರು ಠಾಣೆ ಪೊಲೀಸರು ಸಲ್ಲಿಸಿದ್ದ ಎರಡು ಪ್ರತ್ಯೇಕ ಕ್ರಿಮಿನಲ್‌ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣವನ್ನು ಬೆಳ್ತಂಗಡಿ ಎಸಿಜೆ ಮತ್ತು ಜೆಎಂಎಫ್ಸಿ ಕೋರ್ಟ್‌ಗೆ ಹಿಂದಿರುಗಿಸಿತು. ಅಲ್ಲದೆ ಸರಕಾರದ (ಪೊಲೀಸರ) ಮನವಿಯನ್ನು ಮರು ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ಅಧೀನ ನ್ಯಾಯಾಲಯಕ್ಕೆ ನಿರ್ದೇಶಿಸಿ ಅರ್ಜಿಗಳನ್ನು ಇತ್ಯರ್ಥಪಡಿಸಿತು.

ಪೊಲೀಸರ ಪರ ರಾಜ್ಯ ಹೆಚ್ಚುವರಿ ಸರಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ವಾದ ಮಂಡಿಸಿ, ನಕ್ಸಲ್‌ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಕೇರಳ ಪೊಲೀಸರಿಂದ ಸಾವಿತ್ರಿ ಅಲಿಯಾಸ್‌ ಉಷಾ ಬಂಧನಕ್ಕೆ ಒಳಗಾಗಿದ್ದಾರೆ. ಸದ್ಯ ಆಕೆ ಕೇರಳದ ತೃಶ್ಶೂರ್‌ ಜೈಲಿನಲ್ಲಿದ್ದಾರೆ. ಆದರೆ 2012ರಲ್ಲಿ ಬೆಳ್ತಂಗಡಿಯ ವೇಣೂರು ಠಾಣೆಯಲ್ಲಿ ದಾಖಲಾಗಿರುವ 2 ಪ್ರಕರಣಗಳ ಸಂಬಂಧ ಸಾವಿತ್ರಿಯನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅಲ್ಲದೆ ಸಾವಿತ್ರಿ ವಿರುದ್ಧ ಬಾಡಿ ವಾರಂಟ್‌ ಜಾರಿಗೊಳಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬೆಳ್ತಂಗಡಿ ಎಸಿಜೆ ಮತ್ತು ಜೆಎಂಎಫ್ಸಿ ಕೋರ್ಟ್‌ 2022ರ ಜೂ. 22ರಂದು ಆದೇಶಿಸಿದೆ. ಪ್ರಕರಣವು ತನ್ನ ಮುಂದಿಲ್ಲ. ಪ್ರಕರಣದ ವಿಚಾರಣೆ ವ್ಯಾಪ್ತಿ ಹೊಂದಿರುವ ಕೋರ್ಟ್‌ ಮುಂದೆ ಅರ್ಜಿ ಸಲ್ಲಿಸುವಂತೆ ಅಧೀನ ನ್ಯಾಯಾಲಯ ಆದೇಶಿಸಿದೆ.

ಆದರೆ ಸರಕಾರದ ಮನವಿಯನ್ನು ಪರಿಶೀಲನೆ ನಡೆಸುವ ಅಧಿಕಾರ ವ್ಯಾಪ್ತಿ ಈ ಅಧೀನ ನ್ಯಾಯಾಲಯ ಹೊಂದಿದೆ. ಅದರಂತೆ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು. ಸರಕಾರದ ಮನವಿಯನ್ನು ಮರು ಪರಿಶೀಲಿಸಲು ಅಧೀನ ನ್ಯಾಯಾಲಯಕ್ಕೆ ಸೂಚಿಸಬೇಕು ಎಂದು ಕೋರಿದರು. ಈ ಮನವಿಯನ್ನು ಹೈಕೋರ್ಟ್‌ ಪರಿಗಣಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next