Advertisement

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

04:39 PM Oct 15, 2024 | Team Udayavani |

■ ಉದಯವಾಣಿ ಸಮಾಚಾರ
ನರಗುಂದ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆಯಡಿ ರೈತರಿಂದ ಖರೀದಿ ಮಾಡಲು ಪ್ರಾರಂಭಿಸಲಾದ ಹೆಸರು ಕಾಳು ಖರೀದಿ ಕೇಂದ್ರದಲ್ಲಿ ಖಾಲಿ ಚೀಲಗಳ ಕೊರತೆಯಿಂದ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದೆ!

Advertisement

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ವತಿಯಿಂದ ಪಟ್ಟಣದ ಟಿಎಪಿಸಿಎಂಎಸ್‌ ಆಶ್ರಯದಲ್ಲಿ ಪ್ರತಿ ಕ್ವಿಂಟಲ್‌ಗೆ 8682 ರೂ. ದರದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಹೆಸರು ಕಾಳು ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ.

ಈಗಾಗಲೇ ಆ. 24ರಿಂದ ಸರ್ಕಾರದ ಆದೇಶವಾಗಿದ್ದು, ಅಂದಿನಿಂದ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ರೈತರಿಂದ ಹೆಸರು ನೋಂದಣಿ ಬಳಿಕ ಸೆ. 24ರಿಂದ ಹೆಸರು ಕಾಳು ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಆದರೆ ಕೇಂದ್ರಕ್ಕೆ ಅಗತ್ಯ ಖಾಲಿ ಚೀಲ (ಗೋಣಿ ಚೀಲ) ಪೂರೈಕೆಯಲ್ಲಿ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಅ. 5ರಿಂದ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿರುವ ರೈತರು ಉತ್ಮನ್ನ ಮಾರಾಟ ಮಾಡಲು ನಿತ್ಯ ಖರೀದಿ ಕೇಂದ್ರಕ್ಕೆ ಅಲೆದಾಡುವಂತಾಗಿದೆ. ಇಂದು ಖರೀದಿ ಕೇಂದ್ರದ ಎದುರು ಪ್ರತಿಭಟನೆ ನಡೆಸಿದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ದಿವಟರ, ಮುತ್ತು ಮಣಕವಾಡ, ಪರಶುರಾಮ ಕೀಲಿಕೈ, ಯಲ್ಲಪ್ಪ ಸೊಪ್ಪಿನ, ರಫೀಕಸಾಬ್‌  ತಹಶೀಲ್ದಾರ್‌, ಯೋಗೇಶ ಗುಡಾರದ, ನಾರಾಯಣ ದಿವಟರ, ರವಿ ಕುರಹಟ್ಟಿ, ಕುಬೇರಗೌಡ ಪಾಟೀಲ, ಶರಣಪ್ಪ ಪಾರ್ವತಿಯವರ, ಪಾಲಾಕ್ಷ ನವಲಗುಂದ, ಮುನ್ನಾ ಮನಿಗಾರ ಇದ್ದರು. ಖರೀದಿ  ಕೇಂದ್ರದಲ್ಲಿ 1394 ರೈತರು ಉತ್ಮನ್ನ ಮಾರಾಟಕ್ಕೆ ಹೆಸರು ನೋಂದಣಿ ಮಾಡಿದ್ದಾರೆ. ಇದುವರೆಗೆ 550 ರೈತರಿಂದ 5125 ಕ್ವಿಂಟಲ್‌  ಹೆಸರು ಕಾಳು ಖರೀದಿ ಮಾಡಲಾಗಿದೆ.

ಈವರೆಗೆ 10,500 ಖಾಲಿ ಚೀಲ ಪೂರೈಕೆ ಆಗಿದ್ದು, ಇನ್ನೂ 20 ಸಾವಿರ ಖಾಲಿ ಚೀಲ ಬೇಡಿಕೆಯಿದೆ ಎಂದು ತಿಳಿದು ಬಂದಿದೆ. ಇಂದು ಪ್ರತಿಭಟನೆ ನಡೆಸಿದ ರೈತರು, ಬಳಿಕ ಪಟ್ಟಣದ ಹಳೆ ಎಪಿಎಂಸಿ ಯಾಡ್‌ ìನಲ್ಲಿರುವ ಮಹಾಮಂಡಳ ಕಚೇರಿಗೆ ತೆರಳಿ
ಕಚೇರಿ ವ್ಯವಸ್ಥಾಪಕರನ್ನು ಭೇಟಿಯಾದಾಗ, ಖಾಲಿ ಚೀಲ ಕೊರತೆಯಿಂದ ಖರೀದಿ ಪ್ರಕ್ರಿಯೆ ಸ್ಥಗಿತ ಮಾಡಲಾಗಿತ್ತು. ಅ. 15ರಿಂದ
ಮತ್ತೇ ಖರೀದಿ ಕೇಂದ್ರ ಪ್ರಾರಂಭಿಸಲಾಗುತ್ತದೆ. ಪ್ರಸ್ತುತ 32 ಸಾವಿರ ಖಾಲಿ ಚೀಲ ಪೂರೈಕೆ ಆಗಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next