ಮಲ್ಪೆ: ಸರಕಾರ ಹೊಸ ಕ್ರೀಡಾ ನೀತಿಯನ್ನು ತರುವ ಅಂತಿಮ ಹಂತದಲ್ಲಿದೆ. ಈಗಾಗಲೇ 5 ಕಡೆಗಳಲ್ಲಿ ಸಭೆಯನ್ನು ಮಾಡಿ ಎಲ್ಲರ ಅಭಿಪ್ರಾಯವನ್ನು ಕ್ರೋಡೀಕರಿಸಿ ಕ್ರೀಡಾ ಪಟುಗಳ ಕ್ರೀಡಾ ನೀತಿಯನ್ನು ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಇನ್ನು ಒಂದು ತಿಂಗಳೊಳಗೆ ರಾಜ್ಯ ಹೊಸ ಕ್ರೀಡಾ ನೀತಿ ಜಾರಿಗೆ ಬರಲಿದೆ ಎಂದು ರಾಜ್ಯ ಮೀನುಗಾರಿಕಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಶುಕ್ರವಾರ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಅಂತರ್ ಕಾಲೇಜು ಮಟ್ಟದ ಮಹಿಳಾ ಹ್ಯಾಂಡ್‌ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿಗಳು ಕ್ರೀಡಾ ಇಲಾಖೆಗೆ ಕನಿಷ್ಠ 100 ಕೋಟಿ ರೂ. ಹೆಚ್ಚಿಗೆ ಬಜೆಟ್‌ನಲ್ಲಿ ಕೊಡುವ ಭರವಸೆಯನ್ನು ಕೊಟ್ಟಿದ್ದಾರೆ ಹಾಗಾಗಿ ಕ್ರೀಡಾ ಇಲಾಖೆಯಲ್ಲಿ ಅತ್ಯಂತ ಸುದೃಢವಾದ ಇಲಾಖೆಯನ್ನು ಮಾಡುವಲ್ಲಿ ಕಟಿಬದ್ದನಾಗಿದೇನೆ ಎಂದರು.ಕ್ರೀಡೆಯಲ್ಲಿ ಉತ್ತಮ ಸಾಧನೆಯನ್ನು ಮಾಡಿದವರಿಗೆ ಕೆಲಸದ ಅವಕಾಶವನ್ನು ಕಲ್ಪಿಸಲಾಗುತ್ತದೆ. ಒಲಂಪಿಕ್ಸ್‌ನಲ್ಲಿ ಚಿನ್ನ ಬೆಳ್ಳಿ ಪಡೆದವರಿಗೆ ಗ್ರೂಪ್ ಎ., ಏಷ್ಯಡ್ ಮತ್ತು ಕಾಮನ್‌ವೆಲ್ತ್‌ನಲ್ಲಿ ಚಿನ್ನ ಬೆಳ್ಳಿ ಪಡೆದವರಿಗೆ ಗ್ರೂಪ್ ಬಿ. ವರ್ಗಗಳಲ್ಲಿ ನೇರ ಉದ್ಯೋಗ ನೇಮಕಾತಿಯನ್ನು ಕೊಡಲಾಗುತ್ತದೆ ಎಂದರು.ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 1000 ಟಾಪ್ ಕ್ರೀಡೆಗಳನ್ನು ಪಟ್ಟಿ ಮಾಡಿ ಅವರಿಗೆ ಸರಕಾರದಿಂದ ಶಿಕ್ಷಣದ ವ್ಯವಸ್ಥೆ, ಕ್ರೀಡಾ ಚಟುವಟಿಕೆ ಸೇರಿದಂತೆ ಹಣಕಾಸಿನ ತೊಂದರೆ ಉಂಟಾಗದಂತೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.
ಕ್ರೀಡಾಳುಗಳು ಬಿಸಿಲಲ್ಲಿ
ನಿಲ್ಲುವುದು ಸಲ್ಲದು
ಕ್ರೀಡಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಗಂಟೆಗಟ್ಟಲೆ ಕ್ರೀಡಾಪಟುಗಳನ್ನು ಬಿಸಿಲಲ್ಲಿ ಕಾಯಿಸುವುದು ಸರಿಯಲ್ಲ. ಕ್ರೀಡಾಳುಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದರೆ ಅವರು ಆಟ ಆಡಲು ಸಜ್ಜಾಗುವ ಹೊತ್ತಿನಲ್ಲಿ ಅರ್ಧ ಎನರ್ಜಿ ಹೋಗಿರುತ್ತದೆ. ಇಂತಹ ಸಂಪ್ರದಾಯ ನಿಲ್ಲಬೇಕು. ಅದನ್ನು ನಿಲ್ಲಿಸುವಂತೆ ಕಾನೂನಿನ ರೂಪದಲ್ಲಿ ತರುವ ಪ್ರಯತ್ನ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ| ಬಾಲಕೃಷ್ಣ ಹೆಗ್ಡೆ ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯ ಶಾರೀರಿಕ ಶಿಕ್ಷಕ ಡಾ. ಕಿಶೋರ್ ಕುಮಾರ್ ಸಿ. ಕೆ., ತೆಂಕನಿಡಿಯೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ, ಕಾಲೇಜು ಅಭಿವೃದ್ಧಿ ಸಮಿತಿಯ ದಯಾನಂದ ಶೆಟ್ಟಿ ಕೊಜಕೊಳಿ, ಟೀಚರ್ ಕೋ.ಅಪರೇಟಿವ್ ಬ್ಯಾಂಕಿನ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಕುರ್ಕಾಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ದೈಹಿಕ ಶಿಕ್ಷಕ ರಾಮಚಂದ್ರ ಪಾಟ್ಕರ್ ಸ್ವಾಗತಿಸಿದರು. ಉಪನ್ಯಾಸಕ ದುಗ್ಗಪ್ಪ ಕಜೆಕಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.