Advertisement

Mangaluru: ವಕ್ಫ್‌ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ

02:33 AM Nov 21, 2024 | Team Udayavani |

ಮಂಗಳೂರು: ರಾಜ್ಯದಲ್ಲಿ ಒತ್ತುವರಿಯಾಗಿರುವ ವಕ್ಫ್ ಭೂಮಿಯನ್ನು ತೆರವು ಮಾಡಬೇಕು. ಈ ಬಗ್ಗೆ ಸಲ್ಲಿಸಲಾಗಿರುವ ವರದಿ ಬಗ್ಗೆ ತನಿಖೆ ನಡೆಸಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಮತ್ತು ರಾಜ್ಯ ಅಲ್ಪಸಂಖ್ಯಾಕ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ  ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

Advertisement

29,000 ಎಕ್ರೆ ವಕ್ಫ್ ಭೂಮಿ ಒತ್ತುವರಿಯಾಗಿದೆ. ಅದನ್ನು ಮತ್ತೆ ವಕ್ಫ್ ಸುಪರ್ದಿಗೆ ಒಪ್ಪಿಸಬೇಕು. ಒತ್ತುವರಿ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ರೈತರು ಒತ್ತುವರಿ ಮಾಡಿಲ್ಲ. ರಾಜಕಾರಣಿಗಳು, ಇತರರು ಒತ್ತುವರಿ ಮಾಡಿದ್ದಾರೆ. ವಕ್ಫ್ ಆಸ್ತಿ ಒತ್ತುವರಿ ಕುರಿತು ನಾನು ಸಲ್ಲಿಸಿದ ವರದಿಯನ್ನು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಹಾಗೂ ಲೋಕಾಯುಕ್ತ ನ್ಯಾಯಾಲಯ ಒಪ್ಪಿಕೊಂಡಿದೆ. ಹಾಗಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಿಂದಿನ ಗೆಜೆಟ್‌ ನೋಟಿಫಿಕೇಷನ್‌ಗಳನ್ನು ಪರಿಶೀಲಿಸಿದರೆ ಸಮರ್ಪಕವಾದ ಮಾಹಿತಿ ದೊರೆಯಲಿದೆ ಎಂದು ಮಾಣಿಪ್ಪಾಡಿ ಹೇಳಿದರು.

ಪ್ರಮೋದ್‌ ಮುತಾಲಿಕ್‌ ಮಾತನಾಡಿ, ಅನ್ವರ್‌ ಮಾಣಿಪ್ಪಾಡಿ ನೀಡಿರುವ ವರದಿಯನ್ನು ಅನುಷ್ಠಾನಗೊಳಿಸಬೇಕು. ಒತ್ತುವರಿ ಮಾಡಿರುವವರನ್ನು ಶಿಕ್ಷಿಸಬೇಕು ಎಂದು ಹೇಳಿದರು.

ರಾಜ್ಯವ್ಯಾಪಿ ಜಾಗೃತಿ
2013ರಲ್ಲಿ ಪ್ರಧಾನಿ ಮನಮೋಹನ್‌ ಸಿಂಗ್‌ ಸರಕಾರ ವಕ್ಫ್ ಬೋರ್ಡ್‌ಗೆ ಪರಮಾಧಿಕಾರ ನೀಡಿತು. ಅಲ್ಲಿಂದ ಇದುವರೆಗೆ 9.40 ಲಕ್ಷ ಎಕ್ರೆ ವಕ್ಫ್ ಆಸ್ತಿ ಒತ್ತುವರಿಯಾಗಿದೆ. ನರೇಂದ್ರ ಮೋದಿ ವಕ್ಫ್ ಕಾಯ್ದೆಗೆ 44 ತಿದ್ದುಪಡಿ ತರಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಪಹಣಿ ಪತ್ರಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗು ತ್ತಿದೆ. ಇದರ ವಿರುದ್ಧ ಶ್ರೀರಾಮಸೇನೆ ರಾಜ್ಯ ವ್ಯಾಪಿ ತಿಳಿವಳಿಕೆ ಮೂಡಿಸುತ್ತಿದೆ ಎಂದರು.

ವಕ್ಫ್ ಸಂತ್ರಸ್ತರಿಗೆ ಸಹಾಯವಾಣಿ
ವಕ್ಫ್ ಬೋರ್ಡ್‌ನಿಂದ ಭೂಮಿ ಅತಿಕ್ರಮಣ ಸಂತ್ರಸ್ತರ ನೆರವಿಗಾಗಿ 24 x 7 ಕಾರ್ಯಾಚರಿಸುವ ಸಹಾಯವಾಣಿಯನ್ನು (9945288819) ಅನ್ವರ್‌ ಮತ್ತು ಮುತಾಲಿಕ್‌ ಬಿಡುಗಡೆ ಮಾಡಿದರು. ಈ ಸಹಾಯವಾಣಿಯ ಮೂಲಕ ಕಾನೂನು ಸಹಿತ ಅಗತ್ಯ ನೆರವು ನೀಡಲಾಗುವುದು ಎಂದು ಮುತಾಲಿಕ್‌ ತಿಳಿಸಿದರು.
ಶ್ರೀರಾಮಸೇನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆನಂದ್‌ ಅಡ್ಯಾರ್‌, ವಿಭಾಗ ಅಧ್ಯಕ್ಷ ಮಧುಸೂದನ, ಜಿಲ್ಲಾಧ್ಯಕ್ಷ ಅರುಣ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next