Advertisement

ನಗರ ಜತೆ ಗ್ರಾಮಾಭಿವೃದ್ಧಿಯೂ ಮುಖ್ಯ: ಎಚ್ಕೆ

11:31 AM Apr 04, 2017 | Team Udayavani |

ಬೆಂಗಳೂರು:  “ನಗರ -ಪಟ್ಟಣಗಳಿಂದ ಹಳ್ಳಿಗಳ ಕಡೆಗೆ ಮರುವಲಸೆ ನಡೆಯದಿದ್ದರೆ ಕರ್ನಾಟಕ ಉಳಿಯುವುದಿಲ್ಲ,” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಆಯೋಜಿಸಿದ್ದ ಎರಡು ದಿನಗಳ ಕರ್ನಾಟಕ ಏಕೀಕರಣ ವಜ್ರಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

“ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರಿನ ಆಚೆಗೂ ನಾವು ಗಮನ ಹರಿಸದೇ ಹೋದರೆ ದೊಡ್ಡಮಟ್ಟದ ಅಪಾಯ ಕಾದಿದೆ.   ಮಹಾನಗರಗಳಲ್ಲಿ ಮಾತ್ರ ಕೈಗಾರಿಕೆಗಳು, ಮೆಲ್ಸೇತುಗಳು ಬಂದರೆ ಚೆಲುವ ಕನ್ನಡ ನಾಡು ಸಾಧ್ಯವಿಲ್ಲ. ಗ್ರಾಮೀಣ ಕರ್ನಾಟಕ ಅಭಿವೃದ್ಧಿಯಾಗಬೇಕು. ಸಣ್ಣ ನಗರಗಳಲ್ಲೂ ಕೈಗಾರಿಕೆಗಳು ಆರಂಭಗೊಂಡು ಉದ್ಯೋಗ ಸಿಗುವಂತಾಗಬೇಕು. ಉದ್ಯೋಗ ಆರಿಸಿಕೊಂಡು ನಗರಗಳಿಗೆ ಬಂದ ಗ್ರಾಮೀಣ ಪ್ರದೇಶದ ಜನರು ಸ್ವಂತ ನೆಲದಲ್ಲಿ ಬದುಕುವಂತಾದಾಗ ಮಾತ್ರ ಕರುನಾಡಿನ ಉಳಿವು ಸಾಧ್ಯ,” ಎಂದು ಪ್ರತಿಪಾದಿಸಿದರು. 

“ಗ್ರಾಮೀಣ ಕರ್ನಾಟಕವು ನಗರಗಳಿಗೆ ಹೋಲಿಸಿದರೆ ತುಂಬಾ ಹಿಂದುಳಿದಿದೆ. ಈ ತಾರತಮ್ಯವನ್ನು ಹೋಗಲಾಡಿಸಿ, ಅಭಿವೃದ್ಧಿಯಲ್ಲಿ ಸಮಾನತೆಯನ್ನು ತಂದರೆ ಮಾತ್ರ ರಾಜ್ಯ ಸದೃಢವಾಗುತ್ತದೆ. ಇದು ಹೈದರಾಬಾದ್‌-ಕರ್ನಾಟಕ ಮತ್ತು ಮುಂಬೈ-ಕರ್ನಾಟಕ ಪ್ರಾಂತ್ಯಗಳಿಗೆ ಹೆಚ್ಚು ಅನ್ವಯವಾಗುತ್ತದೆ. ಈ ವಾಸ್ತವವನ್ನು ನಾವು ಒಪ್ಪಿಕೊಂಡು, ಮುನ್ನಡೆಯಬೇಕು” ಎಂದರು.

“ಕಳಸಾ ಬಂಡೂರಿ, ಮಹಾದಾಯಿ ಜಲವಿವಾದದಂಥ ವಿಚಾರದಲ್ಲಿ ಸರ್ಕಾರಕ್ಕೆ  ಸಾಹಿತಿಗಳ ಬಳಗದಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ. ರಾಜ್ಯಕ್ಕೆ ಸಮಸ್ಯೆ ಎದುರಾದಾಗ ಸೂಕ್ಷ್ಮಜ್ಞರು ಮೂಕಪ್ರೇಕ್ಷಕರಾಗಿ ಉಳಿದಿರುವುದು ಸರಿಯಲ್ಲ. ಹೀಗಾಗಿ, ಅಖೀಲ ಭಾರತದ ಮಟ್ಟದಲ್ಲಿ ಕರ್ನಾಟಕದ ದನಿ ಅಷ್ಟಾಗಿ ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ ಜಿ ಸಿದ್ದರಾಮಯ್ಯ, “ರಾಷ್ಟ್ರೀಯತೆ ಎನ್ನುವುದು ಕಲ್ಪನೆಯ ಸಂಗತಿಯಾಗಿದೆ. ಆದರೆ ನಮ್ಮ ಅಸ್ಮಿತೆಗೆ ಕಾರಣವಾಗಿರುವ ಉಪರಾಷ್ಟ್ರೀಯತೆಯು ವಾಸ್ತವ ವಾಗಿದೆ. ವಿಚಿತ್ರವೆಂದರೆ, ರಾಷ್ಟ್ರೀಯತೆಯ ಅಬ್ಬರ ದಲ್ಲಿ ಸ್ಥಳೀಯ ಸಂಸ್ಕೃತಿಯ ಹೆಗ್ಗುರುತುಗಳನ್ನು ನಾಶ ಮಾಡಲಾಗುತ್ತಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರ್‌(ಎಸ್‌ಬಿಎಂ)ನ ವಿಲೀನವೇ ಇದಕ್ಕೊಂದು ಸಾಕ್ಷಿಯಾಗಿದೆ.

Advertisement

ಆದರೆ, ಇದರ ವಿರುದ್ಧ ನಮಗ್ಯಾರಿಗೂ ದನಿ ಎತ್ತಲು ಸಾಧ್ಯವಾಗಲೇ ಇಲ್ಲ,” ಎಂದು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್‌, ಕಸಾಪ ಪದಾಧಿಕಾರಿಗಳಾದ ಪಿ ಮಲ್ಲಿಕಾರ್ಜುನಪ್ಪ, ವ ಚ ಚನ್ನೇಗೌಡ, ರಾಜಶೇಖರ ಹತಗುಂದಿ ಉಪಸ್ಥಿತರಿದ್ದರು. 

ಸಭೆಯಲ್ಲೇ ಪ್ರತಿಭಟನೆ ಬಿಸಿ 
ಸಚಿವ ಎಚ್‌.ಕೆ. ಪಾಟೀಲ್‌ ತಮ್ಮ ಭಾಷಣದಲ್ಲಿ “ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬೆಂಬಲವೇ ವ್ಯಕ್ತವಾಗುವುದಿಲ್ಲ,” ಎಂದು ಹೇಳಿದ್ದು, ಸಭೆಯಲ್ಲಿ ಪ್ರತಿಭಟನೆಗೆ ಕಾರಣವಾಯಿತು. ಸಚಿವರ ಮಾತಿಗೆ ಸಭೆಯಲ್ಲಿದ್ದ ಕನ್ನಡ ಕಾರ್ಯಕರ್ತರಾದ ರಾ.ನಂ ಚಂದ್ರಶೇಖರ, ಸಿ.ಕೆ. ರಾಮೇಗೌಡ,  ಮಧು ಬಿಲ್ಲಿನಕೋಟೆ, ಕೋ.ವೆಂ ರಾಮಕೃಷ್ಣೇಗೌಡ ಕೂಡಲೇ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು.

“ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲೇ ಮೊದಲು ಸಭೆಗಳು ನಡೆದಿದ್ದು. ನೀವು ಮಂತ್ರಿಗಳಾಗಿ ಹೀಗೆ ತಪ್ಪಾಗಿ ಮಾತನಾಡಬಾರದು,” ಎಂದು ಒಕ್ಕೊರಲಿನಿಂದ ಪ್ರತಿಭಟಿಸಿದರು. ಕೂಡಲೇ ಪಾಟೀಲರು “ಬೆಳಗಾವಿಯ ಪರ ನಿಮ್ಮ ಈ ದನಿ ಕೇಳಿ ನನಗೆ ಸಂತೋಷವಾಯಿತು” ಎಂದು ವಿವಾದಕ್ಕೆ ತೆರೆ ಎಳೆದರು. 

Advertisement

Udayavani is now on Telegram. Click here to join our channel and stay updated with the latest news.

Next