ಹೈದರಾಬಾದ್ : ರಾಜ್ಯದಲ್ಲಿ ಬೇಗನೆ ಚುನಾವಣೆ ನಡೆಯುವುದಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಇಂದು ಗುರುವಾರ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಅವರನ್ನು ಭೇಟಿಯಾಗಿ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವಂತೆ ಕೋರಿದರು.
ನಂಬರ್ 6 ತಮಗೆ ಅದೃಷ್ಟದಾಯಕ ಎಂದು ತಿಳಿದಿರುವ ಸಿಎಂ ಕೆಸಿಆರ್, ಹೈದರಾಬಾದಿನಲ್ಲಿ ಇಂದು ತಮ್ಮ ಸಚಿವ ಸಂಪುಟದ ಸಭೆ ನಡೆಸಿ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಧಾರವನ್ನು ಕೈಗೊಂಡರು ಎಂದು ವರದಿಗಳು ತಿಳಿಸಿವೆ.
ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ ಶಾಸ್ತ್ರದ ಪ್ರಕಾರ ತಮಗೆ ನಂಬರ್ 6 ಅದೃಷ್ಟದಾಯಕ ಇರುವುದನ್ನು ಪರಿಗಣಿಸಿರುವ ಕೆಸಿಆರ್ ಅವರು ಇಂದು ಸೆ.6ರಂದು ರಾಜ್ಯ ವಿಧಾನಸಭೆ ವಿಸರ್ಜಿಸುವ ನಿರ್ಧಾರ ಕೈಗೊಂಡರೆಂದು ವಿಶ್ಲೇಷಕರು ಹೇಳಿದ್ದಾರೆ.
2019ರ ಲೋಕಸಭೆ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಗಳು ಏಕಕಾಲಕ್ಕೆ ನಡೆಯುವುದೆಂಬ ಕಾರಣಕ್ಕೆ ಸಿಎಂ ಕೆಸಿಆರ್ ಅವರು ಕಳೆದ ವಾರ ಬೃಹತ್ ರಾಲಿ ನಡೆಸಿ ಹೊಸ ಜನಾದೇಶವನ್ನು ಜನರಲ್ಲಿ ಕೋರಿದ್ದರು.
ತಮಿಳು ನಾಡಿನ ಜನರು ಹೇಗೆ ತಮ್ಮ ನಾಯಕರಿಂದಲೇ ರಾಜ್ಯವನ್ನು ನಡೆಸುತ್ತಾರೋ ಹಾಗೆಯೇ ನಾವು ಕೂಡ ತೆಲಂಗಾಣದಲ್ಲಿ ದಿಲ್ಲಿ ನಾಯಕತ್ವದೆಡೆಗೆ ಮುಖ ಮಾಡದೆ ನಮ್ಮದೇ ನಾಯಕರನ್ನು ಮುಂದಿರಿಸಿಕೊಂಡು ರಾಜ್ಯವನ್ನು ಮುನ್ನಡೆಸಬೇಕು ಎಂದು ಕೆಸಿಆರ್ ಹೇಳಿದ್ದರು.