Advertisement

ಅತೃಪ್ತರ ಮುಂದೆ ವಿಪ್‌ ಫ್ಲಾಪ್‌: ಕಾನೂನು ಕ್ರಮದ ಎಚ್ಚರಿಕೆ

12:30 AM Feb 07, 2019 | |

ಬೆಂಗಳೂರು: ಬಜೆಟ್‌ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್‌ ಜಾರಿಗೊಳಿಸಿದರೂ ಕ್ಯಾರೇ ಅನ್ನದ ಆರು ಬಂಡಾಯ ಶಾಸಕರು ಕಲಾಪದಿಂದ ದೂರ ಉಳಿದು, ಕಾಂಗ್ರೆಸ್‌ ನಾಯಕರ ತಲೆಬಿಸಿಗೆ ಕಾರಣವಾಗಿದ್ದಾರೆ. ಅತ್ತ ಬಿಜೆಪಿಯೂ ಸರಕಾರಕ್ಕೆ ಬಹುಮತವಿಲ್ಲ ಎಂದು ಹೇಳಿ ರಾಜ್ಯಪಾಲರ ಭಾಷಣಕ್ಕೆ ಸಂಪೂರ್ಣವಾಗಿ ಅಡ್ಡಿ ಮಾಡಿದೆ. ಈ ಮೂಲಕ ಇದುವರೆಗೆ ನಡೆಯುತ್ತಿದ್ದ “ಆಪರೇಷನ್‌’ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದು ತಲುಪಿದೆ. ಈ ಬೆಳವಣಿಗೆಯ ಮಧ್ಯೆ ಗುರುವಾರ ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಕಾಂಗ್ರೆಸ್‌ನ ಆರು ಅತೃಪ್ತ ಶಾಸಕರ ಜತೆಯಲ್ಲಿ ಇಬ್ಬರು ಪಕ್ಷೇತರರು ಮತ್ತು ಒಬ್ಬ ಜೆಡಿಎಸ್‌ ಶಾಸಕ ಕೂಡ ಕಲಾಪಕ್ಕೆ ಬಂದಿಲ್ಲ. ಬಂಡಾಯ ಶಾಸಕರ ಗುಂಪಿನ ನಾಯಕ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ಚಿಂಚೊಳ್ಳಿ ಶಾಸಕ ಡಾ| ಉಮೇಶ್‌ ಜಾಧವ್‌, ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌, ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್‌ ಹಾಗೂ ಪಕ್ಷೇತರ ಶಾಸಕರಾದ ಆರ್‌. ಶಂಕರ್‌ ಮತ್ತು ಮುಳಬಾಗಿಲು ಶಾಸಕ ನಾಗೇಶ್‌, ಜೆಡಿಎಸ್‌ನ ಕೆ.ಆರ್‌. ಪೇಟೆ ಶಾಸಕ ನಾರಾಯಣಗೌಡ ಸದನದಿಂದ ದೂರ ಉಳಿದಿದ್ದಾರೆ. ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಕೂಡ ಸದನಕ್ಕೆ ಹಾಜರಾಗಿರಲಿಲ್ಲ. ಆದರೆ ಈ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ಮಾಹಿತಿ ಕೊಟ್ಟಿದ್ದರು ಎಂದು ಹೇಳಲಾಗಿದೆ.

ವಿಪ್‌ ಉಲ್ಲಂ ಸಿದರೆ ಕ್ರಮದ ಭಯದಿಂದಾದರೂ ಶಾಸಕರು ಹಾಜರಾಗುತ್ತಾರೆ ಎಂಬ ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ ಹುಸಿಯಾಗಿದೆ. ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ ಮತ್ತು ನಾಗೇಂದ್ರ ಮಾತ್ರ ಕೈ ತಪ್ಪುವ ಆತಂಕ ಹೊಂದಿದ್ದ ಕೈ ನಾಯಕರು ಚಿಂಚೊಳ್ಳಿ ಶಾಸಕ ಉಮೇಶ್‌ ಜಾಧವ್‌ ಬೆಂಗಳೂರಲ್ಲೇ ಇರುವುದರಿಂದ ಹಾಜರಾಗುತ್ತಾರೆ ಎಂಬ ವಿಶ್ವಾಸದಲ್ಲಿದ್ದರು. ಇವರ ಜತೆಗೆ ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್‌ ಕೂಡ ಸೇರಿರುವುದು ಪಕ್ಷದ ನಾಯಕರ ನಿದ್ದೆಗೆಡಿಸಿದೆ. 

ಸಚೇತನಾ ಪತ್ರ
ಇದರ ಬೆನ್ನಲ್ಲೇ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೂಂದು ಸಚೇತನಾ ಪತ್ರ ನೀಡಿದ್ದು, ಅಧಿವೇಶನ ಮುಗಿಯುವ ವರೆಗೂ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದ್ದಾರೆ. ಯಾವುದೇ ಶಾಸಕರಿಗೆ ಪ್ರತ್ಯೇಕವಾಗಿ ಸಚೇತನಾ ಪತ್ರ ರವಾನಿಸದೆ ಸಾಮೂಹಿಕವಾಗಿ ಎಲ್ಲರಿಗೂ ಒಂದೇ ಮಾದರಿಯ ಸಚೇತನಾ ಪತ್ರ ನೀಡಿರುವುದು ವಿಪ್‌ ನೆನಪಿಸುವ ಪತ್ರ ಮಾತ್ರವಾಗಿದೆ.

ಕೈ ಮುಗಿತೇನೆ, ವಾಪಸ್‌ ಬನ್ನಿ
ಕೈಮುಗಿದು ಹೇಳುತ್ತಿದ್ದೇನೆ, ವಾಪಸ್‌ ಬನ್ನಿ… ಹೀಗೆಂದು ಸ್ವತಃ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅತೃಪ್ತ ಶಾಸಕರಿಗೆ ಹೇಳಿದ್ದಾರೆ. ಈಗಾಗಲೇ ಒಂದಿಬ್ಬರು ಕಾಂಗ್ರೆಸ್‌ ಶಾಸಕರು ಆಪರೇಷನ್‌ ಕಮಲಕ್ಕೆ ಬಲಿಯಾಗಿ ದ್ದಾರೆ. ಈಗಲೂ ಕೈ ಮುಗಿದು ಹೇಳುತ್ತಿದ್ದೇನೆ. ಮನಸ್ಸು ಬದ ಲಾಯಿಸಿ ಕೊಳ್ಳಿ. ಇಲ್ಲದಿದ್ದರೆ ಪಕ್ಷದಿಂದ ಅನರ್ಹಗೊಳಿಸು ವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಎರಡು ಬಾರಿ ವಿಪ್‌ ಜಾರಿ ಮಾಡಿ ದಾಗಲೂ ಖುದ್ದು ಭೇಟಿಯಾಗಲಿಲ್ಲ. ಈಗ ಮತ್ತೆ ವಿಪ್‌ ಜಾರಿ ಮಾಡಿದ್ದೇನೆ. ಆದರೂ ಬಾರದೇ ಇದ್ದರೆ ಸ್ಪೀಕರ್‌ಗೆ ದೂರು ನೀಡುವುದರ ಜತೆಗೆ ಕಾನೂನು ಹೋರಾಟ ನಡೆಸುತ್ತೇವೆ ಎಂಬ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

Advertisement

ರಾಜೀನಾಮೆ ವದಂತಿ
ಅತೃಪ್ತ ಶಾಸಕರು ಗುರುವಾರ ವಿಧಾನಸೌಧಕ್ಕೆ ಆಗಮಿಸಿ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳೂ ಬಿಜೆಪಿ ವಲಯದಲ್ಲಿ ಕೇಳಿ ಬಂದಿವೆ. ಹೀಗಾಗಿ ಕಾಂಗ್ರೆಸ್‌ ಶಾಸಕಾಂಗ ಸಭೆಗೆ ಹಾಜರಾಗುವ ಮುನ್ನವೇ ಅತೃಪ್ತರು ರಾಜೀನಾಮೆ ನೀಡಿ, ಪಕ್ಷಾಂತರ ಕಾಯ್ದೆಯ ತೂಗುಗತ್ತಿಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಯಾವುದೇ ಕಾರಣಕ್ಕೂ ಅತೃಪ್ತರು ರಾಜೀನಾಮೆ ನೀಡದಂತೆ ತಡೆಯಬೇಕೆಂದು ಕಾಂಗ್ರೆಸ್‌ ರಾಜ್ಯ ನಾಯಕರು ಎಲ್ಲ ರೀತಿಯ ಪ್ರಯತ್ನ ಮುಂದುವರಿಸಿದ್ದಾರೆ.

ಜಂಟಿ ಶಾಸಕಾಂಗ ಸಭೆ ಇಲ್ಲ
ಬೆಳಗಾವಿ ಅಧಿವೇಶನಕ್ಕೂ ಮುಂಚೆ ಎರಡೂ ಪಕ್ಷಗಳ ಶಾಸಕರನ್ನು ಸೇರಿಸಿ ಜಂಟಿ ಶಾಸಕಾಂಗ ಪಕ್ಷದ ಸಭೆ ನಡೆಸಲು ಕಾಂಗ್ರೆಸ್‌ ನಡೆಸಿದ ಪ್ರಯತ್ನ ವಿಫ‌ಲವಾಗಿತ್ತು. ಇತ್ತೀಚೆಗೆ ಎರಡೂ ಪಕ್ಷಗಳ ಶಾಸಕರ ಹೇಳಿಕೆಗಳಿಂದ ಸರಕಾರದಲ್ಲಿ ಗೊಂದಲದ ವಾತಾವರಣ ಮೂಡಿದ್ದರಿಂದ ಜಂಟಿ ಶಾಸಕಾಂಗ ಪಕ್ಷದ ಸಭೆ ನಡೆಸಲು ಕಾಂಗ್ರೆಸ್‌ ಮತ್ತೂಂದು ಪ್ರಯತ್ನ ನಡೆಸಿತ್ತು. ಅಲ್ಲದೇ ಸ್ವತಃ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌ ಫೆ.7ರಂದು ಜಂಟಿ ಶಾಸಕಾಂಗ ಸಭೆ ನಡೆಸ ಲಾಗುವುದು ಎಂದು ಹೇಳಿದ್ದರು. ಆದರೆ ಎರಡೂ ಪಕ್ಷಗಳ ಶಾಸಕರ ನಡುವೆ ಆಂತರಿಕ ವೈಮನಸ್ಸಿರುವುದರಿಂದ ಸದ್ಯ ಬಜೆಟ್‌ ಅಧಿವೇಶನ ನಡೆಯುತ್ತಿರುವುದರಿಂದ ಈ ಸಂದರ್ಭದಲ್ಲಿ ಜಂಟಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಮತ್ತಷ್ಟು ಗೊಂದಲಕ್ಕೆ ಒಳಗಾಗುವುದು ಬೇಡ ಎನ್ನುವ ಕಾರಣಕ್ಕೆ ಜಂಟಿ ಶಾಸಕಾಂಗ ಪಕ್ಷದ ಸಭೆ ನಡೆಸದಿರಲು ನಿರ್ಧರಿಸಿದ್ದಾರೆ.

ಬಿಜೆಪಿಯಲ್ಲಿ  ಉತ್ಸಾಹ
ಜಂಟಿ ಅಧಿವೇಶನದ ಮೊದಲ ದಿನವಾದ ಬುಧವಾರ ರಾಜ್ಯಪಾಲರ ಭಾಷಣ ಮೊಟಕಾಗಿದ್ದು, ಬಿಜೆಪಿಯ ಕಾರ್ಯತಂತ್ರಕ್ಕೆ ಆರಂಭಿಕ ಯಶಸ್ಸು ಸಿಕ್ಕಂತಾಗಿದೆ. ಇದರಿಂದ ಉತ್ತೇಜಿತರಾಗಿರುವ ಬಿಜೆಪಿ ನಾಯಕರು ಗುರುವಾರ ನಡೆಯಲಿರುವ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲೂ ಮೈತ್ರಿ ಸರಕಾರಕ್ಕೆ ಬಹುಮತವಿಲ್ಲ ಎಂಬ ಅಂಶವನ್ನೇ ಮುಂದಿಟ್ಟುಕೊಂಡು ಪ್ರತಿಭಟನೆ 
ನಡೆಸಿ ಕಲಾಪ ನಡೆಯದಂತೆ ತಡೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಗುರುವಾರ ಕಲಾಪ ಆರಂಭಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಶಾಸಕರ ಸಭೆ ನಡೆಸಿ ಪಕ್ಷದ ಮುಂದಿನ ನಿಲುವಿನ ಬಗ್ಗೆ ಸ್ಪಷ್ಟ ಸೂಚನೆ ನೀಡಲಿದ್ದಾರೆ.

ಫೆ.8: ಶಾಸಕಾಂಗ ಸಭೆ
ಮೊದಲ ದಿನದ ಕಲಾಪಕ್ಕೆ ವಿಪ್‌ ಉಲ್ಲಂ ಸಿ ಗೈರು ಹಾಜರಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ತಾಳ್ಮೆಯ ಹೆಜ್ಜೆ ಇಡುತ್ತಿರುವ ಕಾಂಗ್ರೆಸ್‌ ನಾಯಕರು ಫೆ.8ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಅಂದಿನ ಸಭೆಗೆ ಪಕ್ಷದ ಎಲ್ಲ ಶಾಸಕರೂ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದ್ದಾರೆ. ಅಂದು ಗೈರು ಹಾಜರಾದರೆ ಕಾನೂನು ಕ್ರಮ ಕೈಗೊಳ್ಳಲು ಸಭಾಧ್ಯಕ್ಷ ರಮೇಶ್‌ ಕುಮಾರ್‌ಗೆ ದೂರು ನೀಡುವ ಎಚ್ಚರಿಕೆಯನ್ನೂ ಸಿದ್ದು ನೀಡಿದ್ದಾರೆ.

ಗೈರುಹಾಜರಾದ ಶಾಸಕರು
ಶಾಸಕರ ಹೆಸರು    ಏಕೆ ಬಂದಿಲ್ಲ?

ರಮೇಶ್‌ ಜಾರಕಿಹೊಳಿ    ಸಂಪರ್ಕಕ್ಕೆ ಸಿಕ್ಕಿಲ್ಲ
ಮಹೇಶ್‌ ಕುಮಟಳ್ಳಿ    ಸಂಪರ್ಕಕ್ಕೆ ಸಿಕ್ಕಿಲ್ಲ
ಬಿ. ನಾಗೇಂದ್ರ    ಸಂಪರ್ಕಕ್ಕೆ ಸಿಕ್ಕಿಲ್ಲ
ಡಾ| ಉಮೇಶ್‌ ಜಾಧವ್‌    ಗೊತ್ತಿಲ್ಲ
ಜೆ.ಎನ್‌. ಗಣೇಶ್‌    ಬಂಧನ ಭೀತಿ
ಬಿ.ಸಿ. ಪಾಟೀಲ್‌    ಕಾರಣ ಹೇಳಿಲ್ಲ
ನಾರಾಯಣಗೌಡ    ಅನಾರೋಗ್ಯ
ಪಕ್ಷೇತರರು
ಆರ್‌. ಶಂಕರ್‌-ರಾಣೆಬೆನ್ನೂರು
ನಾಗೇಶ್‌-ಮುಳಬಾಗಿಲು
 

Advertisement

Udayavani is now on Telegram. Click here to join our channel and stay updated with the latest news.

Next