Advertisement
ಬಿ.ವೈ.ವಿಜಯೇಂದ್ರ: ಕೆ.ಆರ್.ಪೇಟೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿದ್ದಾರೆ. ಒಕ್ಕಲಿಗ ಸಮುದಾಯದ ಹಾಸನ ಶಾಸಕ ಪ್ರೀತಂಗೌಡರನ್ನು ಜತೆಯಾಗಿಸಿಕೊಂಡು ಲಿಂಗಾಯತ ಮತಗಳ ಜತೆಗೆ ಒಕ್ಕಲಿಗ ಮತಗಳನ್ನೂ ಬಿಜೆಪಿ ಪರ ಚಲಾವಣೆಯಾಗುವಂತೆ ಕಾರ್ಯತಂತ್ರ ರೂಪಿಸಿ ಜೆಡಿಎಸ್ ಭದ್ರಕೋಟೆ ಛಿದ್ರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಆರ್.ಪೇಟೆಯಲ್ಲಿ ವಾರ ಕಾಲ ವಾಸ್ತವ್ಯ ಹೂಡಿ ಸೋಲಬಹುದು ಎಂಬ ಆತಂಕವಿದ್ದ ಕ್ಷೇತ್ರವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಜಯೇಂದ್ರ ಅವರದ್ದು ಪಾತ್ರ ಪ್ರಮುಖ. ಈ ಗೆಲುವು ಹಳೇ ಮೈಸೂರು ಭಾಗದಲ್ಲಿ ತಮ್ಮ ಪುತ್ರ ನಾಯಕನಾಗಿ ಹೊರ ಹೊಮ್ಮಬೇಕು ಎಂಬ ಬಿಎಸ್‌ವೈ ಬಯಕೆಯ ಮೆಟ್ಟಿಲು ಹತ್ತಲು ಅವಕಾಶ ದೊರೆತಂತಾಗಿದೆ.
Related Articles
Advertisement
ಶ್ರೀನಿವಾಸ ಪಾಟೀಲ: ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲರಿಗೆ ಮಗ ಶ್ರೀನಿವಾಸ ಪಾಟೀಲರ ಪ್ರಚಾರದ ಬಲ ಸಾಕಷ್ಟು ರೀತಿಯಲ್ಲಿ ನೆರವಾಯಿತು. ಇದಕ್ಕೆ ಪೂರಕವೆಂಬಂತೆ ಲಕ್ಷ್ಮಣ ಸವದಿ ಅವರ ಸಕಾಲಿಕ ಸಹಾಯವೂ ಸಿಕ್ಕಿತು. ಇದರಿಂದ ಕಾಂಗ್ರೆಸ್‌ನಿಂದ ಜಿಗಿದು ಬಿಜೆಪಿಗೆ ಬಂದರೂ ಶ್ರೀಮಂತ ಪಾಟೀಲರ ಗೆಲುವಿಗೆ ಯಾವುದೇ ಸಮಸ್ಯೆಯಾಗಲಿಲ್ಲ.
ಬಿ.ವೈ.ರಾಘವೇಂದ್ರ: ರಾಣಿಬೆನ್ನೂರು ಕ್ಷೇತ್ರದಲ್ಲಿ ಅರುಣಕುಮಾರ ಗೆಲುವಿನ ಹಿಂದೆ ಸಂಸದ ಬಿ.ವೈ. ರಾಘವೇಂದ್ರ ಕಾರ್ಯತಂತ್ರ ಬಲಿಷ್ಠವಾಗಿ ಕಾರ್ಯ ನಿರ್ವಹಿಸಿದ್ದು ಗಮನಾರ್ಹ. ಅರುಣಕುಮಾರ ಅವರಿಗೆ ಟಿಕೆಟ್ ನೀಡಿದಾಗ ಭುಗಿಲೆದ್ದಿದ್ದ ಭಿನ್ನಮತವನ್ನು ಶಮನಗೊಳಿಸುವಲ್ಲಿ ತಮ್ಮ ಚಾಣಾಕ್ಷತನ ತೋರಿದ್ದರು. ಬಳಿಕ ಗ್ರಾಮೀಣ ಭಾಗದಲ್ಲಿ ಸಣ್ಣ ಪುಟ್ಟ ಮುಖಂಡರನ್ನು ಭೇಟಿಯಾಗಿ, ಸಣ್ಣ ಜಾತಿ ಸಮುದಾಯಗಳನ್ನೂ ಅವರ ಮುಖಂಡರೊಂದಿಗೆ ಭೇಟಿ ಮಾಡಿ ಮತಸೆಳೆಯುವ ಪ್ರಯತ್ನ ಮಾಡಿದ್ದರು. ಆರ್. ಶಂಕರ್ ಅವರನ್ನು ಸೇರಿಸಿಕೊಂಡು ಕುರುಬ ಮತಬೇಟೆಯೂ ಆಡಿದ್ದರು. ಈ ಎಲ್ಲ ತಂತ್ರಗಳು “ಅರುಣೋದಯ’ಕ್ಕೆ ಸಹಕಾರಿಯಾದವು.
ಯು.ಬಿ.ಬಣಕಾರ: ಹಿರೇಕೆರೂರು ಕ್ಷೇತ್ರದ ಬಿಜೆಪಿ ಗೆಲುವಿನಲ್ಲಿ ದೊಡ್ಡ ಸಹಕಾರ ಸಿಕ್ಕಿದ್ದು ಮಾಜಿ ಶಾಸಕ ಯು.ಬಿ. ಬಣಕಾರ ಅವರದ್ದು. ಸಿಎಂ ಯಡಿಯೂರಪ್ಪ ಅವರ ಅಪ್ಪಟ ಶಿಷ್ಯರಾದ ಬಣಕಾರ, “ಪಾಟೀಲ- ಬಣಕಾರ ಇಬ್ಬರೂ ಜೋಡೆತ್ತಿನಂತೆ ಒಟ್ಟಾಗಿ ಕೆಲಸ ಮಾಡಬೇಕು’ ಎಂಬ ಸೂಚನೆಯನ್ನು ಶಿರಸಾವಹಿಸಿ ಪಾಲಿಸಿದರು. ಪ್ರತಿದಿನ, ಪ್ರತಿಕ್ಷಣ ಬಿ.ಸಿ. ಪಾಟೀಲರ ಜತೆಗಿದ್ದು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.