Advertisement

ಕಡಬ ಪರಿಸರದಲ್ಲಿ ಗಾಳಿ ಮಳೆ: ಅಪಾರ ಪ್ರಮಾಣದ ಕೃಷಿ ನಾಶ 

02:01 PM Apr 12, 2018 | |

ಕಡಬ: ಕಡಬ ಆಸುಪಾಸಿನಲ್ಲಿ ಮಂಗಳವಾರ ಸಂಜೆ ಬೀಸಿದ ಬಿರುಗಾಳಿ ಹಾಗೂ ಸುರಿದ ಭಾರಿ ಮಳೆಗೆ ಪೆರಾಬೆ ಹಾಗೂ ಕುಂತೂರಲ್ಲಿ ವ್ಯಾಪಕ ಕೃಷಿ ಹಾನಿಯಾಗಿದೆ. ಕೆಲವೆಡೆ ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಇನ್ನು ಕೆಲವೆಡೆ ರಸ್ತೆಗೆ ಮರಬಿದ್ದ ಪರಿಣಾಮ ಸಂಚಾರಕ್ಕೂ ಅಡ್ಡಿಯಾಗಿದೆ. 2,000ಕ್ಕೂ ಹೆಚ್ಚು ಅಡಿಕೆ, ತೆಂಗು ಹಾಗೂ ರಬ್ಬರ್‌ ಮರಗಳು ಧರೆಗುರುಳಿವೆ ಎಂದು ವರದಿಯಾಗಿದೆ. ವಿದ್ಯುತ್‌ ತಂತಿ, ಕಂಬ ಮುರಿದು ಬಿದ್ದ ಪರಿಣಾಮ ವಿದ್ಯುತ್‌
ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದೆ.

Advertisement

ಕುಂತೂರು ಗ್ರಾಮದ ಅನ್ನಡ್ಕದಲ್ಲಿ ಚರ್ಚ್‌ಗೆ ಸೇರಿದ 150ಕ್ಕೂ ಹೆಚ್ಚು ರಬ್ಬರ್‌ ಮರಗಳು ಮುರಿದು ಬಿದ್ದಿವೆ. ಮೂವಾದಿ ಗೋಪಾಲಕೃಷ್ಣ ಭಟ್‌ ಅವರ ತೋಟದಲ್ಲಿ 150 ಅಡಿಕೆ ಮರ, ಸುಬ್ರಹ್ಮಣ್ಯ ಭಟ್‌ ಅವರ ತೋಟದಲ್ಲಿ 100 ಅಡಿಕೆ ಮರ, ವಿಶ್ವನಾಥ ರೈ ಅವರ 3 ತೆಂಗಿನಮರ, 100ಕ್ಕೂ ಹೆಚ್ಚು ಅಡಿಕೆ ಮರ, ನೂಜಿಲ ಗಣೇಶ್‌ ಭಟ್‌ ಅವರ 200ಕ್ಕೂ ಹೆಚ್ಚು ಅಡಿಕೆ ಮರ, ಸರ್ವೆದಬೈಲು ನಾರಾಯಣ ಶೆಟ್ಟಿಯವರ 150ಕ್ಕೂ ಹೆಚ್ಚು ಅಡಿಕೆ ಮರಗಳು ಮುರಿದುಬಿದ್ದಿವೆ. ಕೇವಳ ಪಟ್ಟೆ ನಿವಾಸಿ ಅಣ್ಣು ಶೆಟ್ಟಿ ಅವರ 200ಕ್ಕೂ ಹೆಚ್ಚು ರಬ್ಬರ್‌ ಮರಗಳು, ಕುಂತೂರುಗುತ್ತು ಶಾಂತಾರಾಮ ರೈ ಅವರ ತೋಟದಲ್ಲಿ 300 ಅಡಿಕೆ ಮರಗಳು, 250ಕ್ಕೂ ಹೆಚ್ಚು ರಬ್ಬರ್‌ ಗಿಡಗಳು, 3 ತೆಂಗಿನ ಮರಗಳು ಧರೆಗುರುಳಿವೆ. ಅವರ ನೀರಿನ ಟ್ಯಾಂಕ್‌, ಪಂಪ್‌ ಶೆಡ್‌ಗೂ ಹಾನಿಯಾಗಿದೆ.

ಮನೆಗೆ ಹಾನಿ
ಪೆರಾಬೆ ಗ್ರಾಮದ ಅಗತ್ತಾಡಿ ನಿವಾಸಿ ಕೆ.ಪಿ. ಥಾಮಸ್‌ ಎಂಬವರ ಮನೆಯ ಮುಂಭಾಗದ ಸಿಮೆಂಟ್‌ ಶೀಟ್‌ ನ ಮಾಡು ಭಾರಿ ಗಾಳಿ – ಮಳೆಗೆ ಧರೆಗುರುಳಿದೆ. ಸಿಮೆಂಟ್‌ ಶೀಟ್‌ ಮುರಿದು ಮನೆಯೊಳಗೆ ಬಿದ್ದ ಪರಿಣಾಮ 40 ಸಾವಿರ ರೂ. ಬೆಲೆಬಾಳುವ ಎಲ್‌ ಇಡಿ ಟಿವಿ ಹಾಗೂ ಇತರೇ ಪೀಠೊಪಕರಣಗಳು, ವಿದ್ಯುತ್‌ ವೈರಿಂಗ್‌ ಹಾನಿಗೊಂಡಿದೆ. ಮನೆಯೊಳಗಿದ್ದ ಕೆ.ಪಿ. ಥಾಮಸ್‌ ಹಾಗೂ ಇತರರು ಅಪಾಯದಿಂದ ಪಾರಾಗಿದ್ದಾರೆ. ಅವರ ತೋಟದಲ್ಲಿ ರಬ್ಬರ್‌ ಮರಗಳು ಮುರಿದಿದ್ದು, ಅಂದಾಜು 1 ಲಕ್ಷ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಸರ್ವೆದಬೈಲು ಶೇಷಗಿರಿ ಶೆಟ್ಟಿ ಅವರ ಮನೆಯ ಮೇಲೆ ಹಲಸಿನ ಮರವೊಂದು ಮುರಿದು ಬಿದ್ದು ಹಂಚು, ಪಕ್ಕಾಸು ಹಾನಿಗೊಂಡಿದ್ದು, ಗೋಡೆ ಬಿರುಕು ಬಿಟ್ಟಿದೆ. ಇವರ ತೋಟದಲ್ಲಿನ 400ಕ್ಕೂ ಹೆಚ್ಚು ಅಡಿಕೆ ಮರಗಳು, ರಬ್ಬರ್‌ ಮರಗಳು ಮುರಿದುಬಿದ್ದಿವೆ. ಅಗತ್ತಾಡಿ ಯಶವಂತ ಪೂಜಾರಿ ಎಂಬವರ ಮನೆಗೆ ಅಡಿಕೆ ಮರವೊಂದು ಬಿದ್ದ ಪರಿಣಾಮ ಹಂಚು, ಪಕ್ಕಾಸು ಹಾನಿಗೊಂಡಿವೆ ಎಂದು ವರದಿಯಾಗಿದೆ. ತೋಟದಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿವೆ.

ವಿದ್ಯುತ್‌ ಕಂಬಕ್ಕೆ ಧಕ್ಕೆ
ಪೆರಾಬೆ ಗ್ರಾಮದ ಅತ್ರಿಜಾಲು ಹಾಗೂ ಕುಂತೂರು ಗ್ರಾಮದ ಮಾಪಾಲ, ಅರ್ಬಿ, ನೆಲ್ಲಿಜಾಲು ಪರಿಸರದಲ್ಲಿ ವಿದ್ಯುತ್‌ ತಂತಿ ಮೇಲೆಯೇ ಮರಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್‌ ಕಂಬ ಹಾಗೂ ತಂತಿಗಳು ತುಂಡಾಗಿವೆ. ಇದರಿಂದಾಗಿ ಈ ಪರಿಸರದಲ್ಲಿ ಎ. 10ರ ಸಂಜೆಯಿಂದಲೇ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಮುರಿದು ಬಿದ್ದ ವಿದ್ಯುತ್‌ ಕಂಬ ಹಾಗೂ ತಂತಿಗಳ ದುರಸ್ತಿ ಕಾರ್ಯಕ್ಕೆ 3-4 ದಿನಗಳು ಬೇಕಾಗಿದ್ದು, ಈ ಪರಿಸರದ ಜನರು ಕತ್ತಲಲ್ಲೇ ಕಾಲ ಕಳೆಯಬೇಕಾಗಿದೆ. ಮಾಪಾಳ, ಅರ್ಬಿ ಪರಿಸರದಲ್ಲಿ ಮರಗಳು ರಸ್ತೆ ಮೇಲೆ ಬಿದ್ದಿರುವುದರಿಂದ ವಾಹನ ಹಾಗೂ ಜನರ ಓಡಾಟಕ್ಕೂ ತೊಂದೆಯುಂಟಾಗಿದೆ ಎಂದು ವರದಿಯಾಗಿದೆ.

Advertisement

ಶಾಲಾ ಶೌಚಾಲಯಕ್ಕೆ ಹಾನಿ
ಕುಂತೂರು ವಿದ್ಯಾನಗರ ಮಾರ್‌ ಇವಾನಿಯೋಸ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಶೌಚಾಲಯದ ಸಿಮೆಂಟ್‌ ಶೀಟ್‌ ಗಾಳಿ ಮಳೆಗೆ ಹಾರಿಹೋಗಿದೆ. ಶಾಲೆ ಪರಿಸರದಲ್ಲಿದ್ದ 2 ತೆಂಗಿನಮರ ಹಾಗೂ ಇತರೇ ಮರಗಳು ಧರೆಗುರುಳಿವೆ.

Advertisement

Udayavani is now on Telegram. Click here to join our channel and stay updated with the latest news.

Next