ಕೊಂಚ ಸಮಾಧಾನ ತಂದಿದೆ.
Advertisement
ಬುಧವಾರ ಸಂಜೆ ಪುತ್ತೂರು ತಾಲೂಕಿನಾದ್ಯಂತ ಗುಡುಗು ಸಹಿತ ಮಳೆಯಾಗಿದೆ. ತಂಪಾದ ಗಾಳಿ ಜತೆಗೆ ಮಳೆ ಸುರಿಯಿತು. ಇದುವರೆಗೆ ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಜನತೆಗೆ ಒಂದಷ್ಟು ಸಮಾಧಾನ ನೀಡಿತು. ಇನ್ನು ಸ್ವಲ್ಪ ದಿನ ಮಳೆ ಹೀಗೇ ಮುಂದುವರಿದರೆ ಒಳ್ಳೆಯದು. ಇಲ್ಲದಿದ್ದರೆಭೂಮಿ ಇನ್ನಷ್ಟು ಬಿಸಿಯೇರುವ ಸಾಧ್ಯತೆ ಇದೆ ಎಂದು ಕೃಷಿಕರು ಹೇಳುತ್ತಿದ್ದಾರೆ.
ಈಶ್ವರಮಂಗಲ: ಕರ್ನಾಟಕದ ಗಡಿಭಾಗಗಳಾದ ಪಾಣಾಜೆ, ಸುಳ್ಯಪದವು, ಈಶ್ವರ ಮಂಗಲ, ಕರ್ನೂರು, ಕನ್ನಡ್ಕ ಮುಂತಾದ ಕಡೆಗಳಲ್ಲಿ ಅಕಾಲಿಕವಾಗಿ ಸುರಿದ ಗುಡುಗು ಮಿಂಚು ಸಹಿತ ಭಾರಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿತು. ವಿದ್ಯುತ್ ಕಡಿತಗೊಂಡಿದ್ದು, ಮಳೆ ಮುಂದುವರಿದಿದೆ. ಅಡಿಕೆ ಬೆಳೆಗಾರರಿಗೆ ಭಾರಿ ನಷ್ಟ ಉಂಟಾಗಿದೆ.
Related Articles
Advertisement
ಕಡಬ: ಉತ್ತಮ ಮಳೆಕಡಬ: ಬುಧವಾರ ಸಂಜೆ ಕಡಬ ಪರಿಸರದಲ್ಲಿ ಸುಮಾರು ಅರ್ಧ ತಾಸು ಉತ್ತಮ ಮಳೆಯಾಗಿದೆ. ವಿದ್ಯುತ್ ಹಾಗೂ ದೂರವಾಣಿ ಸಂಪರ್ಕ ಕಡಿತಗೊಂಡಿತ್ತು. ಕಬಕ ಪರಿಸರದಲ್ಲೂ ಸಂಜೆ ಶಾಲೆ ಬಿಡುವ ಸಂದರ್ಭದಲ್ಲಿ ಮಿಂಚು – ಗುಡುಗು ಸಹಿತ ಮಳೆಯಾಗಿದೆ. ಮಕ್ಕಳು ಕೊಡೆ ತಂದಿಲ್ಲದ ಕಾರಣ ಒದ್ದೆಯಾಗಿಯೇ ಮನೆ ಸೇರಿದರು. ಸುಳ್ಯ: ಸಿಡಿಲು, ಮಿಂಚು ಸಹಿತ ಗಾಳಿ ಮಳೆ
ಸುಳ್ಯ: ತಾಲೂಕಿನ ಬಹುತೇಕ ಕಡೆಗಳಲ್ಲಿ ಬುಧವಾರ ಸಂಜೆ ವೇಳೆಗೆ ಗುಡುಗು, ಮಿಂಚು, ಗಾಳಿ ಸಹಿತ ಸಾಧಾರಣ ಮಳೆ ಆಗಿದೆ. ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿತ್ತು. ಬುಧವಾರ ಮಧ್ಯಾಹ್ನವೂ ಮೋಡ ಕವಿದಿತ್ತು. ಸಂಜೆ ಹೊತ್ತಿಗೆ ದಿಢೀರನೆ ಗುಡುಗು, ಮಿಂಚುಗಳಿಂದ ಕೂಡಿದ ಮಳೆ ಸುಮಾರು ಅರ್ಧ ತಾಸು ಸುರಿಯಿತು. ಮೊದಲೇ ಮೋಡವಿದ್ದ ಕಾರಣ ಕೃಷಿಕರು ಅಂಗಳದಲ್ಲಿ ಹರವಿದ್ದ ಅಡಿಕೆಯನ್ನು ಮುಂಚಿತವಾಗಿಯೇ ಮುಚ್ಚಿ, ರಕ್ಷಿಸಿದರು. ಮಳೆ ಬರುವ ನಿರೀಕ್ಷೆ ಇಲ್ಲದ ರೈತರ ಅಡಿಕೆ ಒದ್ದೆಯಾಗಿದೆ. ಮಳೆಯಿಂದ ಸುಳ್ಯ ನಗರದಲ್ಲಿ ಕೆಲ ಕಾಲ ಜನಜೀವನ ಅಸ್ತವ್ಯಸ್ಥಗೊಂಡಿತು. ಪಾದಚಾರಿಗಳು, ವಾಹನ ಸವಾರರು ಒದ್ದೆಯಾಗಿಯೇ ಓಡಾಡಿದರು. ಇನ್ನು ಉಳಿದಂತೆ ಸುಳ್ಯ ಆಸುಪಾಸಿನ ಮರ್ಕಂಜ, ಉಬರಡ್ಕ, ಮಂಡೆಕೋಲು, ಅಜ್ಜಾವರ, ಅರಂತೋಡು, ಸಂಪಾಜೆ ಪ್ರದೇಶಗಳಲ್ಲಿ ಸಾಧಾರಣ ಮಳೆಯಾದರೆ, ಬೆಳ್ಳಾರೆ, ಪಂಜದಲ್ಲಿ ಬಿರುಸಾಗಿ ಸುರಿದಿದೆ. ಅಜ್ಜಾವರ ಹಾಗೂ ಮಂಡೆಕೋಲು ಭಾಗದಲ್ಲಿ ಮಳೆಯೊಂದಿಗೆ ಭಾರಿ ಗಾಳಿ ಬೀಸಿದ್ದು ನೂರಾರು ಅಡಿಕೆ ಮರಗಳು ಧರೆಗೆ ಉರುಳಿದ್ದು, ಕೃಷಿಗೆ ತೀವ್ರ ಹಾನಿಯಾಗಿದೆ. ಸುಬ್ರಹ್ಮಣ್ಯದಲ್ಲಿ ದಟ್ಟ ಮೋಡವಿದ್ದರೂ ತುಂತುರು ಮಳೆಯಷ್ಟೇ ಆಯಿತು. ಹರಿಹರ, ಯೇನೆಕಲ್ಲು, ಕೊಲ್ಲಮೊಗ್ರು ಮುಂತಾದೆಡೆ ಸಾಧಾರಣ ಮಳೆ ಸುರಿದಿದೆ. ಮೋಡ ಕವಿದ ವಾತಾವರಣ ಎಲ್ಲೆಡೆ ಮುಂದುವರಿದಿದೆ. ಕೆಲವೆಡೆ ಗಾಳಿಗೆ ಮರದ ಕೊಂಬೆಗಳು ನೆಲಕ್ಕೆ ಬಿದ್ದಿವೆ. ಹೆಚ್ಚಿನ ಅನಾಹುತವಾದ ವರದಿಗಳಿಲ್ಲ. ಸಿಡಿಲಿನಿಂದ ವಿದ್ಯುತ್ ಹಾಗೂ ದೂರವಾಣಿ ಸೇವೆಗಳಲ್ಲಿ ಅಲ್ಪಮಟ್ಟಿನ ವ್ಯತ್ಯಯ ಕಂಡುಬಂದಿದೆ.