ಸಾಗರ: ಪಟ್ಟಣದ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ನ.12ರ ಮಂಗಳವಾರ ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಡುಗೆ ಮನೆಯ ಸ್ವಚ್ಚತೆ, ಅಡುಗೆಯ ಗುಣಮಟ್ಟ, ಪಡಿತರ ಸಾಮಗ್ರಿಯ ಗುಣಮಟ್ಟ ಸೇರಿದಂತೆ ವಿದ್ಯಾರ್ಥಿ ನಿಲಯದ ವಾತಾವರಣ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ವಿದ್ಯಾರ್ಥಿ ನಿಲಯದ ಮೂಲಕ ಮಕ್ಕಳಿಗೆ ಗುಣಮಟ್ಟದ ಆಹಾರದ ಜೊತೆಗೆ ಉತ್ತಮ ಶಿಕ್ಷಣ ವ್ಯವಸ್ಥೆ ನೀಡಲು ಹೆಚ್ಚು ಹಣ ಖರ್ಚು ಮಾಡುತ್ತಿದೆ. ಸರ್ಕಾರದ ಅನುದಾನ ಸದುಪಯೋಗವಾಗಬೇಕು. ವಿದ್ಯಾರ್ಥಿ ನಿಲಯದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಮಕ್ಕಳು ನೇರವಾಗಿ ನನ್ನ ಗಮನಕ್ಕೆ ತರಲು ಸೂಚನೆ ನೀಡಿದ್ದೇನೆ. ಒಂದಷ್ಟು ವ್ಯವಸ್ಥೆ ಸುಧಾರಣೆಯಾಗದೆ ಹೋದಲ್ಲಿ ಸರ್ಕಾರದ ಯೋಜನೆಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.
ಆಹಾರ ಸಾಮಗ್ರಿ ಸರಬರಾಜು ಮಾಡುವವರು ಗುಣಮಟ್ಟದ ಆಹಾರ ಸಾಮಗ್ರಿ ಸರಬರಾಜು ಮಾಡಲು ತಿಳಿಸಲಾಗಿದೆ. ಹಾಸ್ಟೆಲ್ ಮೇಲ್ವಿಚಾರಕರು ಮತ್ತು ಸಿಬ್ಬಂದಿಗಳು, ಅಡುಗೆಯವರು ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಮಕ್ಕಳಿಂದ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಕಲಸೆ ಚಂದ್ರಪ್ಪ, ಸೋಮಶೇಖರ ಲ್ಯಾವಿಗೆರೆ, ಗಿರೀಶ್ ಕೋವಿ, ನಾರಾಯಣ ಇನ್ನಿತರರು ಹಾಜರಿದ್ದರು.