ಲಂಡನ್: ವಿಂಬಲ್ಡನ್ ಟೆನಿಸ್ ಕೂಟದ ವನಿತೆಯರ ಫೈನಲ್ ಹೋರಾಟವು ಶನಿವಾರ ಅಮೆರಿಕದ ವೀನಸ್ ವಿಲಿಯಮ್ಸ್ ಮತ್ತು ಸ್ಪೇನ್‌ನ ಗಾರ್ಬಿನ್ ಮುಗುರುಜಾ ನಡುವೆ ನಡೆಯಲಿದೆ.
2009ರ ಬಳಿಕ ಇದೇ ಮೊದಲ ಬಾರಿ ಇಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಫೈನಲ್‌ನಲ್ಲಿ ಆಡುತ್ತಿರುವ ವೀನಸ್ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಐದು ಬಾರಿಯ ಚಾಂಪಿಯನ್ ಆಗಿರುವ ವೀನಸ್ ಅವರಿಗಿದು 9ನೇ ವಿಂಬಲ್ಡನ್ ಫೈನಲ್ ಆಗಿದೆ. ವಿಂಬಲ್ಡನ್ ಪ್ರಶಸ್ತಿ ವಿಲಿಯಮ್ಸ್ ಕುಟುಂಬಕ್ಕೆ ಸೇರಬೇಕೆನ್ನುವುದು ಸೆರೆನಾ ವಿಲಿಯಮ್ಸ್ ಅವರ ಆಸೆಯಾಗಿದೆ. ಅಕ್ಕ ವೀನಸ್ ಆರನೇ ಬಾರಿ ಇಲ್ಲಿ ಕಿರೀಟ ಧರಿಸಲಿದ್ದಾರೆ ಎಂಬುದು ಸೆರೆನಾ ಅವರ ನಂಬಿಕೆಯಾಗಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗರ್ಭಿಣಿ ಸೆರೆನಾ ಈ ಬಾರಿ ವಿಂಬಲ್ಡನ್‌ನಿಂದ ದೂರ ಉಳಿದಿದ್ದಾರೆ. ವಿಲಿಯಮ್ಸ್ ಸಹೋದರಿಯರು ಇಷ್ಟರವರೆಗೆ 12 ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಸರಿಯಾಗಿ 20 ವರ್ಷಗಳ ಹಿಂದೆ ವಿಂಬಲ್ಡನ್‌ಗೆ ಪಾದಾರ್ಪಣೆಗೈದಿದ್ದ ವೀನಸ್ ಈ ಬಾರಿ ಅಮೋಘ ಫಾರ್ಮ್ನಲ್ಲಿದ್ದಾರೆ. ಸೆಮಿಫೈನಲ್‌ನಲ್ಲಿ ಬ್ರಿಟನ್‌ನ ಜೋಹಾನಾ ಕೊಂಟಾ ಅವರನ್ನು 6-4, 6-2 ನೇರ ಸೆಟ್‌ಗಳಿಂದ ಕೆಡಹಿದ ವೀನಸ್ ಪ್ರಶಸ್ತಿ ಸುತ್ತಿಗೇರಿದ್ದರು. ವೀನಸ್ 1994ರಲ್ಲಿ ಮಾರ್ಟಿನಾ ನವ್ರಾಟಿಲೋವಾ ಬಳಿಕ ವಿಂಬಲ್ಡನ್ ಫೈನಲ್‌ನಲ್ಲಿ ಆಡಲಿರುವ ಅತೀ ಹಿರಿಯ ಆಟಗಾರ್ತಿಯಾಗಿದ್ದಾರೆ.
ನಾನಿಲ್ಲಿ ಬಹಳಷ್ಟು ಫೈನಲ್ಸ್ ಆಡಿದ್ದೇನೆ. ಇದು ನನ್ನ ಪಾಲಿಗೆ ಸಿಕ್ಕಿದ ಅದೃಷ್ಟ. ಇದಕ್ಕಿಂತ ಹೆಚ್ಚಿನದನ್ನು ನಾನು ಕೇಳಲಾರೆ. ಆದರೆ ಈ ಬಾರಿ ಇನ್ನೊಂದನ್ನು ಕೇಳಲಿದ್ದೇನೆ. ಇನ್ನೊಂದು ಪ್ರಶಸ್ತಿ ಸಿಕ್ಕಿದರೆ ಅದು ಅದ್ಭುತ ಕ್ಷಣವಾಗಲಿದೆ ಎಂದು ವೀನಸ್ ತಿಳಿಸಿದರು.
ವೀನಸ್ ಅವರ ಫೈನಲ್ ಎದುರಾಳಿ ಮುಗುರುಜಾ ಕೂಡ ಉತ್ತಮ ಫಾರ್ಮ್ನಲ್ಲಿದ್ದಾರೆ. ಮಗ್ಡಲೆನಾ ರಿಬರಿಕೋವಾ ಅವರನ್ನು 6-1, 6-1 ನೇರ ಸೆಟ್‌ಗಳಿಂದ ಕೆಡಹಿದ ಅವರು ಎರಡನೇ ಬಾರಿ ವಿಂಬಲ್ಡನ್ ಕೂಟದ ಫೈನಲಿಗೇರಿದ್ದಾರೆ. ಈ ಬಾರಿ ಪ್ರಶಸ್ತಿ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸುವ ಸಾಧ್ಯತೆಯಿದೆ. 2015ರ ವಿಂಬಲ್ಡನ್ ಫೈನಲ್‌ನಲ್ಲಿ ಅವರು ಸೆರೆನಾಗೆ ಶರಣಾಗಿದ್ದರು.