ಕೋಲ್ಕತಾ : ಕಳೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಕೇಸರಿ ಪಾಳಯಕ್ಕೆ ಸೇರಿದ್ದ ಹಿರಿಯ ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ ಅವರು ಸೋಮವಾರ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸಿದರು, ಕಳೆದ ವರ್ಷದ ವಿಧಾನಸಭಾ ಚುನಾವಣೆಯ ನಂತರ ಇದು ಅವರ ಮೊದಲ ಭೇಟಿಯಾಗಿದ್ದು, ಪಕ್ಷಕ್ಕಾಗಿ ಕೆಲಸ ಮಾಡುವ ಪ್ರತಿಜ್ಞೆ ಮಾಡಿದರು.
ಅವರು ಚುನಾವಣೆಗೆ ಸ್ಪರ್ಧಿಸದಿದ್ದರೂ, ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.ಆದರೆ, ಚುನಾವಣೆ ಬಳಿಕ ಚಕ್ರವರ್ತಿ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದರು.
“ಕಳೆದ ಒಂದು ವರ್ಷ ನನಗೆ ಚೈತನ್ಯವಿರಲಿಲ್ಲ, ಆದ್ದರಿಂದ ನಾನು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಮತ್ತು ಪಕ್ಷದ ಕಚೇರಿಗೆ ಬರಲು ಸಾಧ್ಯವಾಗಲಿಲ್ಲ, ಪಕ್ಷವು ನನಗೆ ಕೆಲವು ಕಾರ್ಯಗಳನ್ನು ನೀಡಿದೆ, ಮತ್ತು ಆ ಕರ್ತವ್ಯಗಳನ್ನು ಪೂರೈಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ನಾನು ಕೆಲಸ ಮಾಡುತ್ತೇನೆಎಂದು ಚಕ್ರವರ್ತಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹಿಂದುಳಿದವರಿಗಾಗಿ ದುಡಿಯಬೇಕೆಂಬ ಆಸೆ ಸದಾ ಹೊಂದಿದ್ದು, ಅವರ ಆಶಯ ಈಡೇರಿಸಲು ಬಿಜೆಪಿ ವೇದಿಕೆ ಕಲ್ಪಿಸಿದೆ ಎಂದರು.
“ನಾನು ರಾಜ್ಯದ ಜನರಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಬಯಸುತ್ತೇನೆ, ನನಗೆ ಬಂಗಾಳವು ಮೊದಲ ಸ್ಥಾನದಲ್ಲಿದೆ” ಎಂದು ಅವರು ಹೇಳಿದರು.