Advertisement

40 ಸ್ಥಾನ ಗೆದ್ದು ಕೆಆರ್‌ಪಿಪಿ ಅಧಿಕಾರಕ್ಕೆ ತರುತ್ತೇನೆ: ಜನಾರ್ದನ ರೆಡ್ಡಿ

10:00 PM Jan 06, 2023 | Team Udayavani |

ಸಿಂಧನೂರು: “ಜನಾರ್ದನ ರೆಡ್ಡಿ ಒಬ್ಬಂಟಿ, ಏನೂ ಮಾಡಕ್ಕಾಗಲ್ಲ ಅಂದವರೇ ಮೈ ಮುಟ್ಟಿ ನೋಡಿಕೊಳ್ಳುವಂತೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವನ್ನು ಅ ಧಿಕಾರಕ್ಕೆ ತಂದು ತೋರಿಸುತ್ತೇನೆ’ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಜಿ.ಜನಾರ್ದನ ರೆಡ್ಡಿ ಸವಾಲು ಹಾಕಿದ್ದಾರೆ.

Advertisement

ನಗರದ ಸ್ತ್ರೀಶಕ್ತಿ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೆಆರ್‌ಪಿ ಪಕ್ಷದ ಮೊದಲ ಸಾರ್ವಜನಿಕ ಸಭೆ, ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ಪ್ರಸ್‌ಮೀಟ್‌ ಮಾಡಿದ್ದೆ. ರೆಡ್ಡಿ ಜತೆ ಯಾರು ಬರುತ್ತಾರೆಂದು ಕೆಲವರು ಮಾತಾಡುತ್ತಾರೆ. ನಾನು ಯಾವ ನಾಯಕರನ್ನೂ ನಂಬಿಕೊಂಡು ಪಕ್ಷ ಕಟ್ಟಿಲ್ಲ. ಜನರನ್ನು ನಂಬಿ ಪಕ್ಷ ಕಟ್ಟಿದ್ದೇನೆ. ನಾಲ್ಕೇ ದಿನಗಳಲ್ಲಿ ಚುನಾವಣೆ ಬರಲಿದ್ದು, ಕೆಆರ್‌ಪಿ ಪಕ್ಷ ಏನೆಂದು ತೋರಿಸಲಾಗುವುದು. ರಾಷ್ಟ್ರೀಯ ಪಕ್ಷಗಳೇ ತಲೆಬಾಗುವ ರೀತಿಯಲ್ಲಿ ಪ್ರಾದೇಶಿಕ ಪಕ್ಷ ಬೆಳೆಸುತ್ತೇನೆ ಎಂದರು.

ಬಿಎಸ್‌ವೈಗಾಗಿ ಪಕ್ಷ ಕಟ್ಟಲಿಲ್ಲ: ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಬಿಜೆಪಿಗೆ ಅಧಿಕಾರದ ಬಾಗಿಲು ತೆರೆಯಲು ಕಾರಣನಾಗಿದ್ದು ಜನಾರ್ದನ ರೆಡ್ಡಿ. ಅದು ಜನರಿಗೆ ಗೊತ್ತಿದೆ. 2018ರಲ್ಲೇ ಪಕ್ಷ ಕಟ್ಟಲು ನಿರ್ಧರಿಸಿದ್ದೆ. ಇಳಿವಯಸ್ಸಿನಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಿಎಂ ಹುದ್ದೆ ತಪ್ಪಿಸಿದರೆಂಬ ಆರೋಪ ಬೇಡವೆಂದು ಕೈಬಿಟ್ಟೆ. ಜೈಲಿಗೆ ಹೋಗಿ ಬಂದ ನಂತರ ದೊಡ್ಡ ಲೀಡರ್‌ಗಳಿಗೆ ಬೇಡವಾದೆ. ಆದರೆ, ನಾನು ಕೈಲಾಗದೇ ಕುಳಿತಿಲ್ಲ. ಹುಲಿ ಬೇಟೆಗಾಗಿ ಕುಳಿತಿತ್ತು. ಈಗ ಕೆಆರ್‌ಪಿ ಕಟ್ಟುವ ಮೂಲಕ ಅಖಾಡಕ್ಕೆ ಇಳಿದಿದ್ದೇನೆ. ಉತ್ತರ ಕರ್ನಾಟಕ ಹಾಗೂ ಹಿಂದುಳಿದ 13 ಜಿಲ್ಲೆಗಳಲ್ಲಿ 2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ. 40 ಎಂಎಲ್‌ಎ ಗೆಲ್ಲಿಸುವ ಗುರಿಯಿದೆ ಎಂದರು.

ದೊಡ್ಡವರೇ ಈಗ ಮಾತ್ರೆ ತೆಗೆದುಕೊಳ್ಳುತ್ತಾರೆ: ಜನಾರ್ದನ ರೆಡ್ಡಿ ಮುಖ್ಯಮಂತ್ರಿ ಹುದ್ದೆಗೆ ಹೋಗುತ್ತಾರೆಂದು ನಮ್ಮ ದೊಡ್ಡವರೇ ಮೋಸ-ಮಸಲತ್ತು ಮಾಡಿದರು. ಇಂದು ಅದೇ ಹಿರಿಯರು ನನ್ನ ಪಕ್ಷಕ್ಕೆ ಸಿಗುತ್ತಿರುವ ಸ್ಪಂದನೆ ಗಮನಿಸಿ ದಿನಕ್ಕೆ 20 ಬಿಪಿ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ನನಗೆ ಯಾವುದೇ ಬಿಪಿ-ಶುಗರ್‌ ಇಲ್ಲ. ಆ ದೊಡ್ಡವರು ಈಗಲೂ ನನ್ನನ್ನು ಸಿಲುಕಿಸಲು ಪ್ಲ್ಯಾನ್ ಮಾಡ್ತಾ ಇರ್ತಾರೆ. ನಾನು ಒಬ್ಬಂಟಿ ಅಂದುಕೊಂಡ ಅವರಿಗೆ ಜನರೇ ಉತ್ತರ ಕೊಡಬೇಕು ಎಂದರು.

ಈ ವೇಳೆ ಸಿಂಧನೂರಿನ ಮಲ್ಲಿಕಾರ್ಜುನ ನೆಕ್ಕಂಟಿ, ವಿಜಯಪುರದ ಶ್ರೀಕಂಠ ಬಂಡಿ, ಲಿಂಗಸುಗೂರಿನ ಅಮರೇಶ ನಾಯ್ಕ, ಮಲ್ಲನಗೌಡ ನಾಗರಬೆಂಚಿ ಸೇರಿದಂತೆ ಇತರರು ಇದ್ದರು.

Advertisement

ಆಸ್ತಿ ಮುಟ್ಟುಗೋಲು ಅಸಾಧ್ಯ
ಜನಾರ್ದನ ರೆಡ್ಡಿ ಆಸ್ತಿ ಮುಟ್ಟುಗೋಲಿಗೆ ಸಿಬಿಐ ನೋಟಿಸ್‌ ಜಾರಿ ಮಾಡಿದೆ ಎನ್ನುತ್ತಾರೆ. ಆದ್ರೆ, ನೂರು ಜನ್ಮ ಹೆತ್ತಿದರೂ ಅದು ಸಾಧ್ಯವಿಲ್ಲ. ನಾನು ಈಗಾಗಲೇ ಆಸ್ತಿ ವಿಚಾರಕ್ಕೆ ಸಂಬಂಧಿ ಸಿ ಎಲ್ಲವನ್ನೂ ಕೋರ್ಟ್‌ನಲ್ಲಿ ಹೇಳಿದ್ದೇನೆ. ಈಗ ಒಂದು ರೂ. ಇದ್ದ ಆಸ್ತಿ ಮುಂದೆ 10 ರೂ. ಆಗುತ್ತದೆ. ನಾನು ಅಡ್ಡಾದಿಡ್ಡಿಯಾಗಿ ಬೆಳೆದಿದ್ದರೆ ದೇಶದಲ್ಲೇ ಬದುಕಲು ಬಿಡುತ್ತಿರಲಿಲ್ಲ. ನಾನು ನ್ಯಾಯವಾಗಿ ಸಂಪಾದಿಸಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿದರು.

ಮಗಳು ಬ್ರಹ್ಮಿಣಿ ಪ್ರಚಾರಕ್ಕೆ ಬರ್ತಾಳೆ
ಒಳ್ಳೆಯ ಕೆಲಸ ಮಾಡಿದ್ದರೆ ಒಳ್ಳೆಯದೇ ಆಗುತ್ತದೆ. ಮಗಳು ಬ್ರಹ್ಮಿಣಿ ದೊಡ್ಡ ಕುಟುಂಬದ ಸೊಸೆ. ಸಿಂಧನೂರಿಗೆ ಪ್ರಚಾರಕ್ಕೆ ಬರಿ¤àನಿ ಅಂದಿದ್ದಳು. ಬಳ್ಳಾರಿ ಕಾರ್ಯಕ್ರಮಕ್ಕೆ ಬರುತ್ತಾಳೆ. ನನ್ನ ಮಗಳು ಕೂಡ ಭಾಷಣ ಕಲಿತಿದ್ದು, ನನಗಿಂತಲೂ ಚೆನ್ನಾಗಿ ಮಾತನಾಡುತ್ತಾಳೆ. ಪುತ್ರ ಕೀರಿಟಿಯ ಸಿನಿಮಾ ಎರಡು ತಿಂಗಳಲ್ಲೇ ಬಿಡುಗಡೆ ಆಗಬೇಕಿತ್ತು. ರಾಜಕೀಯ ಪಕ್ಷ ಮಾಡಿದ ಹಿನ್ನೆಲೆಯಲ್ಲಿ ನಾನೇ ಮುಂದಕ್ಕೆ ಹಾಕಿದ್ದೇನೆ. ಆತ ಉತ್ತಮ ನಟನಾಗಿ ಬೆಳೆಯಬೇಕು. ರಾಜಕೀಯ ತಳುಕು ಬೀಳಬಾರದು ಎಂದು ರೆಡ್ಡಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next