ನವದೆಹಲಿ: ಸೂರ್ಯ ಎಂದರೇನೇ ಬೆಂಕಿಯ ಚೆಂಡು. ಪರಮಾಣು ಭೌತಶಾಸ್ತ್ರದ ಸಿದ್ಧಾಂತದ ಮೇರೆಗೆ ಕೆಲಸ ಮಾಡುವ ಸೂರ್ಯ ಭೂಮಿಯಲ್ಲಿರುವ ಜೀವಸಂಕುಲಕ್ಕೆ ಶಕ್ತಿಯ ಮೂಲ. ಒಂದು ವೇಳೆ ಈ ಶಕ್ತಿಶಾಲಿ ಸೂರ್ಯನ ಜಲಜನಕದ ಇಂಧನವೆಲ್ಲ ಖರ್ಚಾಗಿಬಿಟ್ಟರೆ..?
ಸುಮಾರು 5 ಶತಕೋಟಿ ವರ್ಷಗಳ ಬಳಿಕ ಸೂರ್ಯನು ತನ್ನೆಲ್ಲ ಇಂಧನವನ್ನು ಹಾಗೂ ಶಕ್ತಿ ನೀಡುವ ತನ್ನ ಸಾಮರ್ಥ್ಯವನ್ನು ಕಳೆದುಕೊಂಡುಬಿಟ್ಟಾಗ, ಪಕ್ಕದಲ್ಲಿರುವ ಸೌರವ್ಯವಸ್ಥೆಯೇ ಅದರ ಕೊನೆಯ ಬೇಟೆಯಾಗಿರುತ್ತದೆ. ಆಗ ಸೂರ್ಯನು ಸೌರವ್ಯವಸ್ಥೆಯೊಳಗಿರುವ ಗ್ರಹಗಳಾದ ಬುಧ, ಶುಕ್ರ, ಕೊನೆಗೆ ಭೂಮಿಯನ್ನೂ ಆವರಿಸಿಕೊಳ್ಳುತ್ತಾನೆ. ಹೀಗೆಂದು ರಾಯಲ್ ಆ್ಯಸ್ಟ್ರೋನಾಮಿಕಲ್ ಜರ್ನಲ್‌ಗೆ ಸಲ್ಲಿಸಲಾದ ಅಧ್ಯಯನ ವರದಿಯೊಂದು ಹೇಳಿದೆ.
ಆದರೆ, ಸೂರ್ಯನು ಭೂಮಿಯನ್ನು ನುಂಗುವಂಥ ಪರಿಸ್ಥಿತಿ ಬಂದಾಗ ನಮ್ಮ ನಾಗರಿಕತೆಗಳು ಭೂಮಿಯಿಂದ ದೂರಕ್ಕೆ ಸಾಗಿರಲೂಬಹುದು ಎಂಬ ಆಶಾಭಾವನೆಯನ್ನೂ ಸಂಶೋಧಕರು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ವಿಸ್ತರಣೆಯಾಗುತ್ತಾ ಸಾಗುತ್ತಿರುವ ನಕ್ಷತ್ರವು ಗ್ರಹಗಳನ್ನು ಆವರಿಸಿಕೊಂಡಾಗ ಗ್ರಹಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ.
ಗ್ರಹವನ್ನು ನುಂಗಿದಾಗ ಏನಾಗುತ್ತದೆ?
ಸೂರ್ಯನು ಗ್ರಹಗಳನ್ನು ನುಂಗಿದಾಗ, ಸೂರ್ಯನ ಪ್ರಭೆಯು ಮತ್ತಷ್ಟು ಉದ್ದೀಪನಗೊಳ್ಳುತ್ತದೆ. ಅದು ಎಷ್ಟು ಸಾವಿರ ವರ್ಷಗಳಷ್ಟು ತೀವ್ರತೆಯಲ್ಲಿ ಪ್ರಜ್ವಲಿಸುತ್ತದೆ ಎನ್ನುವುದು ಸೂರ್ಯನ ವಿಕಸನದ ಹಂತ ಮತ್ತು ನುಂಗಲ್ಪಟ್ಟ ಗ್ರಹದ ದ್ರವ್ಯರಾಶಿಯನ್ನು ಅವಲಂಬಿಸಿರುತ್ತದೆ ಎಂದು ಅಧ್ಯಯನ ವರದಿ ಹೇಳಿದೆ.
ಸೂರ್ಯನು ಸದ್ಯಕ್ಕೆ ಮಧ್ಯವಯಸ್ಕ. ಹೈಡ್ರೋಜನ್ ಅನ್ನು ಹೀಲಿಯಂಗೆ ಬೆಸೆಯುತ್ತಾ ಆರಾಮವಾಗಿಯೂ ಸ್ಥಿರವಾಗಿಯೂ ಇದ್ದಾನೆ. ಯಾವಾಗ ಸೂರ್ಯನ ತಿರುಳಿನಲ್ಲಿ ಹೈಡ್ರೋಜನ್ ಖಾಲಿಯಾಗತೊಡಗುತ್ತದೋ, ಆಗ ಆ ಸಮ್ಮಿಳಿತ ಪ್ರಕ್ರಿಯೆಯಲ್ಲಿ ಬದಲಾವಣೆಗಳು ಗೋಚರಿಸತೊಡಗುತ್ತವೆ. ಸೂರ್ಯನು ಕೆಂಪು ದೈತ್ಯ ನಕ್ಷತ್ರವಾಗಿ ಬದಲಾಗುತ್ತಾನೆ ಎನ್ನುತ್ತಾರೆ ಸಂಶೋಧಕರು.