ನವದೆಹಲಿ: “ಮುಂದಿನ ವರ್ಷದ ಆರಂಭದಲ್ಲಿ ಕೋವಿಡ್ ಲಸಿಕೆ ಲಭ್ಯವಾಗುವ ಸಾಧ್ಯತೆ ಅಧಿಕವಾಗಿದ್ದು, ಯಾರಿಗಾದರೂ ಅದರ ಸುರಕ್ಷತೆಯ ಬಗ್ಗೆ ಅನುಮಾನವಿದ್ದರೆ ಆ ಲಸಿಕೆಯ ಪ್ರಯೋಗಕ್ಕೆ ಮೊದಲು ನಾನೇ ಒಳಗಾಗುತ್ತೇನೆ’ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.
ಭಾನುವಾರ ತಮ್ಮ ಸಾಮಾಜಿಕ ಮಾಧ್ಯಮದ ಫಾಲೋವರ್‌ಗಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಅವರು, “”ಲಸಿಕೆ ಬಿಡುಗಡೆಗೆ ಇನ್ನೂ ಯಾವುದೇ ದಿನಾಂಕ ನಿಗದಿಯಾಗಿಲ್ಲ.
2021ರ ಮೊದಲ ತ್ತೈಮಾಸಿಕದಲ್ಲಿ ಅದು ಲಭ್ಯವಾಗುವ ಸಾಧ್ಯತೆಯಿದೆ. ಯಾರಿಗೆ ಲಸಿಕೆಯ ಅಗತ್ಯತೆ ಹೆಚ್ಚಿದೆಯೋ, ಅವರಿಗೆ ಮೊದಲು ಲಸಿಕೆ ನೀಡಲಾಗುತ್ತದೆ” ಎಂದೂ ತಿಳಿಸಿದ್ದಾರೆ. “”ಲಸಿಕೆಗಳನ್ನು ಮಾನವನ ಮೇಲೆ ಪ್ರಯೋಗಿಸುವ ಪ್ರಕ್ರಿಯೆಯನ್ನು ಸರ್ಕಾರ ಅತ್ಯಂತ ಎಚ್ಚರಿಕೆಯಿಂದ ನಡೆಸುತ್ತಿದೆ.
ಲಸಿಕೆಯ ಸುರಕ್ಷತೆ, ವೆಚ್ಚ, ಕೋಲ್ಡ್-ಚೈನ್‌ನ ಅಗತ್ಯತೆ ಬಗ್ಗೆ ನಿರಂತರ ಚರ್ಚೆ ನಡೆದು ನಿರ್ಧಾರ ಕೈಗೊಳ್ಳಲಾಗುತ್ತಿದೆ” ಎಂದೂ ಹರ್ಷವರ್ಧನ್ ಹೇಳಿದ್ದಾರೆ. ಜನರಿಗೆ ಲಸಿಕೆಯ ಸುರಕ್ಷತೆ ಬಗ್ಗೆ ಅನುಮಾನ ಬಂದರೆ, ನಾನೇ ಮೊದಲ ಡೋಸೇಜ್ ಸ್ವೀಕರಿಸುತ್ತೇನೆ ಎಂದೂ ಅವರು ಹೇಳಿದ್ದಾರೆ.
ಆಮ್ಲಜನಕ ಲಭ್ಯವಿರುವಂತೆ ನೋಡಿಕೊಳ್ಳಿ: ಕೇಂದ್ರ ಎಲ್ಲ ಆರೋಗ್ಯ ಕೇಂದ್ರಗಳಲ್ಲೂ ಸಾಕಷ್ಟು ಆಮ್ಲಜನಕದ ಸಿಲಿಂಡರ್‌ಗಳಿರುವಂತೆ ನೋಡಿಕೊಳ್ಳಿ ಎಂದು
ಕರ್ನಾಟಕ ಸೇರಿದಂತೆ 7 ದೊಡ್ಡ ರಾಜ್ಯಗಳಿಗೆ ಕೇಂದ್ರ ಸರ್ಕಾರ ಭಾನುವಾರ ಸೂಚಿಸಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಕೊರೊನಾ ಸೋಂಕಿನ ವ್ಯಾಪಿಸುವಿಕೆ ಅಧಿಕವಾಗಿರುವ ಕಾರಣ ಈ ಸೂಚನೆ ನೀಡಲಾಗಿದೆ.
ಯಾವುದೇ ಆಸ್ಪತ್ರೆಯಲ್ಲೂ ಆಕ್ಸಿಜನ್‌ಗೆ ಕೊರತೆಯಾಗದಂತೆ ನೋಡಿಕೊಳ್ಳಿ, ರಾಜ್ಯದೊಳಗೆ ಅಥವಾ ಅಂತಾರಾಜ್ಯ ಆಕ್ಸಿಜನ್ ಸಿಲಿಂಡರ್‌ಗಳ ಸಾಗಾಟಕ್ಕೆ ಅಡ್ಡಿಯಾಗದಂತೆಯೂ ಕ್ರಮ ಕೈಗೊಳ್ಳಿ ಎಂದೂ ಸಲಹೆ ನೀಡಲಾಗಿದೆ.