ರಾಮನಗರ: ಕೋವಿಡ್ 19 ಸೋಂಕಿನ ಮೂರನೇ ಅಲೆಯು ಹೆಚ್ಚುತ್ತಿರುವ ಕಾರಣ ನಾವು ಇದೀಗ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಮೂರನೇ ಅಲೆ ಕಡಿಮೆಯಾದ ಮೇಲೆ ಮತ್ತೆ ಮುಂದುವರಿಸುತ್ತೇವೆ ಎಂದು ವಿಧಾನಪಕ್ಷದ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಯಾವುದೇ ನೋಟಿಸ್ ಗೆ ಹೆದರಲ್ಲ. ಯಾವುದೇ ನಿರ್ಬಂಧಕ್ಕೆ ನಾವು ಹೆದರಲ್ಲ. ಆದರೆ ಜನರ ಆರೋಗ್ಯದ ಹಿತದೃಷ್ಠಿಯಿಂದ ನಾವು ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.
ಕೋವಿಡ್ ಮೂರನೇ ಅಲೆ ಹರಡುತ್ತಿದೆ. ಮೂರನೇ ಅಲೆ ವೇಗವಾಗಿ ಹರಡಲು ಕಾಂಗ್ರೆಸ್ ಕಾರಣವಲ್ಲ. ಬದಲಾಗಿ ಬಿಜೆಪಿಯವರೇ ಕಾರಣ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಂದಿರುವ 15 ಸಾವಿರ ಪ್ರಕರಣಗಳು ಪಾದಯಾತ್ರೆಯ ಕಾರಣದಿಂದಲ್ಲ. ದೇಶದಲ್ಲಿ ಸ್ವಾಭಾವಿಕವಾಗಿ ಮೂರನೇ ಅಲೆ ಇದೆ. ಹಾಗೆಯೇ ನಮ್ಮ ರಾಜ್ಯದಲ್ಲೂ ಸೋಂಕು ಹರಡಿದೆ. ನಮಗೆ ಜನರ ಆರೋಗ್ಯದ ಬಗ್ಗೆ ಕಾಳಜಿಯಿದೆ. ಯಾವುದೇ ಕಾರಣಕ್ಕೂ ಪಾದಯಾತ್ರೆಯಿಂದ ಸೋಂಕು ಉಲ್ಭಣವಾಗಬಾರದು ಎಂಬ ಕಾಳಜಿಯಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಐದನೇ ದಿನಕ್ಕೆ ಮೇಕೆದಾಟು ಪಾದಯಾತ್ರೆ ಸ್ಥಗಿತ: ಕೈ ನಾಯಕರ ಮಹತ್ವದ ನಿರ್ಧಾರ
ಸೋಂಕು ಉಲ್ಬಣವಾಗಲು ನಾವು ಕಾರಣಕರ್ತರು ಎಂಬ ಭಾವನೆ ಜನರಿಗೆ ಬರಬಾರದು. ಹೀಗಾಗಿ ನಾವು ಇಂದು ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ. ಮೂರನೇ ಅಲೆ ಕಡಿಮೆಯಾದಾಗ, ಕೋವಿಡ್ ನಿಯಮಗಳು ಸಡಿಲವಾದಾಗ ಮತ್ತೆ ಈ ಪಾದಯಾತ್ರೆಯು ರಾಮನಗರದಿಂದ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದರು.